ಬೆಂಗಳೂರು: ರಾಜ್ಯದಲ್ಲಿ ಮಾರ್ಚ್ 25 ಸೋಮವಾರದಿಂದ SSLC ಪರೀಕ್ಷೆಗಳು ಪ್ರಾರಂಭವಾಗಿದ್ದು, ಮೊದಲ ದಿನ ಮೂವರು SSLC ವಿದ್ಯಾರ್ಥಿಗಳು ಮೃತಪಟ್ಟ ದುರಂತ ನಡೆದಿದೆ.
ಶಿವಮೊಗ್ಗ ತಾಲೂಕಿನ ಮೂಡಲ ವಿಠಲಾಪುರ ಗ್ರಾಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಬೇಕಾಗಿದ್ದ ವಿದ್ಯಾರ್ಥಿನಿ ಅಪಘಾತದಲ್ಲಿ ಸಾವನ್ನಪ್ಪಿದ್ದಾಳೆ. ಜಂಬರಘಟ್ಟ ಗ್ರಾಮದ ನಿವಾಸಿ ಉಮ್ಮು ಕುಲ್ಸುಂ (14) ಮೃತ ವಿದ್ಯಾರ್ಥಿನಿ. ರಸ್ತೆ ದಾಟುವ ವೇಳೆ ಇನೋವಾ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ.
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಯಡೇಹಳ್ಳಿ ಗ್ರಾಮದಲ್ಲಿ ನಡೆದಿದೆ. ಪರಶುರಾಮ್ ಬಾಬು (16) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಆನಂದಪುರದ KPSC ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ, ಚೆನ್ನಾಗಿಯೇ ಓದುತ್ತಿದ್ದ ವಿದ್ಯಾರ್ಥಿ ಪರೀಕ್ಷೆಗೆ ಎಲ್ಲಾ ಸಿದ್ಧತೆಯನ್ನೂ ಮಾಡಿಕೊಂಡಿದ್ದ. ಆದರೆ ಕೊನೇ ಕ್ಷಣದಲ್ಲಿ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ
ತುರುವೇಕೆರೆ ಪಟ್ಟಣದಲ್ಲಿ ಎಸ್ಸೆಸ್ಸೆಲ್ಸಿ ಹುಡುಗ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಚಿಕ್ಕರಾಂಪುರ ನಿವಾಸಿ ಸಿದ್ದೇಶ್ ಅವರ ಮಗ ಮೋಹನ್ ಕುಮಾರ್ ಸಿ.ಎಸ್ (16) ಮೃತಪಟ್ಟಿದ್ದಾನೆ. ಪಟ್ಟಣದ ದಬ್ಬೇಘಟ್ಟ ರಸ್ತೆಯಲ್ಲಿನ ಸರಸ್ವತಿ ಬಾಲಿಕಾ ಪ್ರೌಢ ಶಾಲಾ ಪರೀಕ್ಷಾ ಕೇಂದ್ರದಲ್ಲಿ ಮೋಹನ್ ಕುಮಾರ್ ಸಿ.ಎಸ್ ಸೋಮವಾರ ಬೆಳಗ್ಗೆ ಪ್ರಥಮ ಭಾಷೆ ಕನ್ನಡ ವಿಷಯವನ್ನು ಬರೆಯುತ್ತಿದ್ದ ವೇಳೆ ಅಸ್ವಸ್ಥಗೊಂಡಿದ್ದಾನೆ. ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟಿದ್ದಾನೆ.
SSLC ಪರೀಕ್ಷೆಗೆ 8,45,811 ವಿದ್ಯಾರ್ಥಿಗಳು ನೋಂದಣಿಯಾಗಿದ್ದರು. 8,32,343 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.13,468 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಒಬ್ಬರು ಡಿಬಾರ್ ಆಗಿದ್ದಾರೆ.