ಜೋಕಾಲಿ ತಂದ ಆಪತ್ತು; ಮೂರು ಮಕ್ಕಳ ಜೀವಗಳಿಗೆ ಕುತ್ತು

Prasthutha|

ಲಾಕ್ ಡೌನ್ ಸಂದರ್ಭದಲ್ಲಿ ಮಕ್ಕಳನ್ನು ಮನೆಯಿಂದ ಹೊರಗೆ ಹೋಗಲು ಪೋಷಕರು ಅವಕಾಶ ನೀಡದೆ ಮನೆಯಲ್ಲೇ ಆಟವಾಡುವಂತೆ ಸೂಚಿಸುವುದು ಸಾಮಾನ್ಯ. ಒಳಾಂಗಣ ಆಟದಲ್ಲೇ ಮಕ್ಕಳು ಸಮಯ ನೂಕುತ್ತಿರುವುದು ಇಂದು ಎಲ್ಲೆಡೆ ಕಂಡುಬರುತ್ತಿದೆ. ಆದರೆ ಇದೀಗ ಮನೆಯಲ್ಲೇ ಜೋಕಾಲಿ ಆಡುತ್ತಿದ್ದ ಮೂವರು ಮಕ್ಕಳು ಈ ಆಟಕ್ಕೆ ಬಲಿಯಾಗಿರುವ ದಾರುಣ ಘಟನೆ ರಾಜ್ಯದಲ್ಲಿ ನಡೆದಿದೆ.

- Advertisement -


ಅಮ್ಮನ ಸೀರೆಯಲ್ಲಿ ಜೋಕಾಲಿ ಆಡುತ್ತಾ ಆನಂದಿಸುತ್ತಿದ್ದ ಇಬ್ಬರು ಮಕ್ಕಳು ಅದೇ ಜೋಕಾಲಿಯಿಂದ ಜೀವ ಕಳೆದುಕೊಂಡ ದಾರುಣ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ಪಟ್ಟಣದ ಗಣಗೂರು ಉಂಜಿಗನ ಹಳ್ಳಿಯಲ್ಲಿ ನಿನ್ನೆ ಸಂಜೆ ನಡೆದಿದೆ.
ಗ್ರಾಮದ ನಿವಾಸಿ ಕಾರ್ಮಿಕ ರಾಜು ಹಾಗೂ ಜಯಂತಿ ಎಂಬುವರ ಪುತ್ರಿ ಮಣಿಕ್ ಶಾ(14) ಹಾಗೂ ಪೂರ್ಣೆಶ್ (12) ಮೃತಪಟ್ಟ ಮಕ್ಕಳು. ಮನೆಯಲ್ಲಿ ಇಬ್ಬರೇ ಇದ್ದರು. ಸಂಜೆ ಅಕ್ಕ ತಮ್ಮ ಇಬ್ಬರೂ ಜೋಕಾಲಿಯಲ್ಲಿ ಆಟವಾಡುತ್ತಿದ್ದಾಗ ಜೋಕಾಲಿ ಉರುಳಾಗಿ ಸುತ್ತಿಕೊಂಡ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.


ಕೆಲಸಕ್ಕೆ ತೆರಳಿದ್ದ ತಾತ ರಾಮಣ್ಣ ಮನೆಗೆ ಬಂದು ನೋಡಿದಾಗ ಎರಡು ಮಕ್ಕಳು ನೇಣು ಬಿಗಿದ ಸ್ಥಿತಿಯಲ್ಲಿದ್ದು ತಕ್ಷಣವೇ ಸೀರೆಯನ್ನು ಕತ್ತರಿಸಿ ಮಕ್ಕಳನ್ನು ಕೆಳಗಿಳಿಸಿದ್ದಾರೆ ಆದರೆ ಆ ವೇಳೆಗೆ ಇಬ್ಬರೂ ಮೃತಪಟ್ಟಿದ್ದಾರೆನ್ನಲಾಗಿದೆ.
ಸ್ಥಳಕ್ಕೆ ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್,ಸಬ್ ಇನ್ಸ್ ಪೆಕ್ಟರ್ ಶ್ರೀಧರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.

- Advertisement -

ಸುಳ್ಯದಲ್ಲೂ ಮತ್ತೊಂದು ಪ್ರಕರಣ!
ಸುಳ್ಯ ತಾಲೂಕಿನಲ್ಲಿ ನಡೆದ ಮತ್ತೊಂದು ಪ್ರಕರಣದಲ್ಲಿ 10 ವರ್ಷದ ಬಾಲಕ ಜೋಕಾಲಿಯ ಹಗ್ಗ ಕುತ್ತಿಗೆಗೆ ಸಿಲುಕಿ ಮೃತಪಟ್ಟಿದ್ದಾನೆ.
ಸುಳ್ಯ ತಾಲೂಕಿನ ಚೆಂಬು ಗ್ರಾಮದ ಪೆನೇಡ್ಕ ನಿವಾಸಿ ತಾರಾ ಕುಮಾರ್ ಎಂಬವರ ಪುತ್ರ ಭರತ್ ಮೃತ ಬಾಲಕ. ನಿನ್ನೆ ಸಂಜೆ ಮನೆಯಲ್ಲಿ ಜೋಕಾಲಿಯಲ್ಲಿ ಆಟವಾಡುತ್ತಿದ್ದಾಗ ಕುತ್ತಿಗೆಗೆ ಹಗ್ಗ ಸಿಕ್ಕಿ ದುರಂತ ಸಂಭವಿಸಿದೆ. ತೀವ್ರ ಅಸ್ವಸ್ಥಗೊಂಡಿದ್ದ ಬಾಲಕನನ್ನು ಸುಳ್ಯದ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ ಎಂಬ ಪೊಲೀಸರು ತಿಳಿಸಿದ್ದಾರೆ.


ಪುತ್ರನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.



Join Whatsapp