ಇಂದಿನಿಂದ ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ

Prasthutha|

ಬೆಂಗಳೂರು:  ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಇಂದಿನಿಂದ(ಗುರುವಾರ) ಆರಂಭಗೊಳ್ಳುತ್ತಿದ್ದು, ಸುಗಮ ರೀತಿಯ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

- Advertisement -

ಮೊದಲ ದಿನ ಪ್ರಥಮ ಭಾಷೆ ವಿಷಯ ಪರೀಕ್ಷೆ ನಡೆಯಲಿದ್ದು, ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಗೆ ಕೇಂದ್ರಗಳಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪರೀಕ್ಷೆ ನಡೆಯುವ ಕೇಂದ್ರಗಳ 200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹೊರಡಿಸಲಾಗಿದೆ.

ಪ್ರತಿ ಕೊಠಡಿಯ ಹೊರಗೆ ಕುಡಿಯುವ ನೀರಿನ ವ್ಯವಸ್ಥೆ ಇರುವಂತೆ ನೋಡಿಕೊಳ್ಳಲಾಗುತ್ತಿದೆ. ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷೆ ಅವ್ಯವಹಾರ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ. ಪ್ರಶ್ನೆ ಪತ್ರಿಕೆಗಳನ್ನು ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದ್ದು ಪೊಲೀಸ್ ಭದ್ರತೆ ವ್ಯವಸ್ಥೆ ಕಲ್ಪಿಸಲಾಗಿದೆ.

- Advertisement -

ಪ್ರತಿ ಬಾರಿಗಿಂತ ಪ್ರಶ್ನೆ ಪತ್ರಿಕೆಯ ಸ್ವರೂಪ ಈ ಬಾರಿ ಭಿನ್ನವಾಗಿರಲಿದೆ. ಒಂದು ಅಂಕದ ಹತ್ತು ಪ್ರಶ್ನೆಗಳ ಬದಲಿಗೆ ಇಪ್ಪತ್ತು ಪ್ರಶ್ನೆಗಳನ್ನು ನೀಡುತ್ತಿರುವುದು ಈ ಬಾರಿಯ ವಿಶೇಷ. ಈ ಮಾದರಿಯು ಅಂಕ ಗಳಿಕೆ ದೃಷ್ಟಿಯಿಂದ ವಿದ್ಯಾರ್ಥಿಗಳ ಪಾಲಿಗೆ ಹೆಚ್ಚು ಅನುಕೂಲ ಎನಿಸಲಿದೆ ಎನ್ನಲಾಗಿದೆ.


ಪಿಯುಸಿ ಪರೀಕ್ಷೆಗಳು ಇಂದಿನಿಂದ(ಮಾ.9) ಮಾರ್ಚ್ 29ರವರೆಗೆ ನಡೆಯಲಿವೆ. ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆ 1,109 ಕೇಂದ್ರಗಳಲ್ಲಿ ನಡೆಯಲಿದ್ದು, 7,26,213 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ.

ಇದರಲ್ಲಿ ಹೊಸದಾಗಿ 6.29 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, 25,847 ಖಾಸಗಿ, 70,586 ಪುನರಾವರ್ತಿತ ವಿದ್ಯಾರ್ಥಿಗಳಾಗಿದ್ದಾರೆ. ಒಟ್ಟು 3,62,509 ಬಾಲಕಿಯರು, ಮತ್ತು 3,63,704 ಬಾಲಕರು ಸೇರಿದ್ದಾರೆ. ಕಲಾ ವಿಭಾಗದಿಂದ 2,34,815, ವಾಣಿಜ್ಯದಲ್ಲಿ 2,47,269 ಮತ್ತು ವಿಜ್ಞಾನ ವಿಭಾಗದಿಂದ 2,44,129 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ.

Join Whatsapp