ಮುಷ್ಕರ ನಿರತ ಸಾರಿಗೆ ನೌಕರರಿಗೆ ಮತ್ತೊಂದು ಶಾಕ್ | KSRTCಯಿಂದ 251 ತರಬೇತಿ ಸಿಬ್ಬಂದಿ ವಜಾ
Prasthutha: April 19, 2021

ಬೆಂಗಳೂರು : 6ನೇ ವೇತನ ಆಯೋಗದಂತೆ ವೇತನ ಜಾರಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿರುವ ಇಂದಿಗೆ 13ನೇ ದಿನಕ್ಕೆ ಕಾಲಿಟ್ಟಿದೆ. ಮುಷ್ಕರ ನಡೆಸುತ್ತಾ ಕರ್ತವ್ಯಕ್ಕೆ ವರದಿ ಮಾಡದೇ ಅನಧಿಕೃತವಾಗಿ ಗೈರು ಹಾಜರಾದ 251 ತರಬೇತಿ ಸಿಬ್ಬಂದಿಗಳನ್ನು ಕೆ ಎಸ್ ಆರ್ ಟಿ ಸಿ ತನ್ನ ಆಯ್ಕೆ ಪಟ್ಟಿಯಿಂದ ತೆಗೆದು ಹಾಕಿದೆ.
ಕ.ರಾ.ರ.ಸಾ ನಿಗಮವು ಮುಷ್ಕರದಲ್ಲಿ ನಿರತರಾಗಿದ್ದ ತರಬೇತಿ ಸಿಬ್ಬಂದಿಗಳಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿದಾಗ, ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದೆ ಅನಧಿಕೃತವಾಗಿ ಗೈರು ಹಾಜರಾಗಿರುತ್ತಾರೆ. ಇದರಿಂದಾಗಿ ಸಾರ್ವಜನಿಕ ಪ್ರಯಾಣಿಕರಿಗೆ ಸಾರಿಗೆ ಸೇವೆಯಲ್ಲಿ ವ್ಯತ್ಯಯ ಉಂಟಾಗಲು ಕಾರಣರಾಗಿರುತ್ತಾರೆ. ಹೀಗೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದೇ ಅನಧಿಕೃತವಾಗಿ ಗೈರು ಹಾಜರಾದ 251 ತರಬೇತಿ ಸಿಬ್ಬಂದಿಗಳನ್ನು ಕೂಡಲೇ ಜಾರಿಗೆ ಬರುವಂತೆ ಆಯ್ಕೆ ಪಟ್ಟಿಯಿಂದ ತೆಗೆದುಹಾಕಲಾಗಿರುತ್ತದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

