ಬೆಂಗಳೂರು: ಬಿಬಿಎಂಪಿಯ 166 ಹುದ್ದೆಗಳ ವಾಹನ ಖರೀದಿಯಲ್ಲಿ ಅಕ್ರಮವಾಗಿದ್ದು, ಈ ಬಗ್ಗೆ ಚುನಾವಣಾ ಆಯೋಗ ಸೂಕ್ತ ತನಿಖೆ ನಡೆಸಬೇಕೆಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂವಹನಾ ಉಸ್ತುವಾರಿ ಬ್ರಿಜೇಶ್ ಕಾಳಪ್ಪ ಆಗ್ರಹಿಸಿದ್ದಾರೆ.
ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಬ್ರಿಜೇಶ್ ಕಾಳಪ್ಪ, “ಬಿಬಿಎಂಪಿಯು ಹೊರಡಿಸಿರುವ ಆದೇಶದ ಪ್ರಕಾರ 2017-18ರಿಂದ 166 ಹುದ್ದೆಗಳನ್ನು ಅಲಂಕರಿಸಿದ ವ್ಯಕ್ತಿಗಳಿಗೆ ಬಿಬಿಎಂಪಿಯು ವಾಹನಗಳನ್ನು ಪೂರೈಸುತ್ತಿದೆ. ಆದರೆ ಈ ಪೈಕಿ ಶೇ. 90ರಷ್ಟು ಜನರಿಗೆ ವಾಹನ ವಿತರಿಸಿಲ್ಲ. ಇದು 223 ಕೋಟಿ ಹಣ ರೂ. ಮೊತ್ತದ ಯೋಜನೆಯಾಗಿದ್ದು, ಈ ಹಣ ಎಲ್ಲಿಗೆ ಹೋಗಿದೆ ಎಂಬ ಬಗ್ಗೆ ತನಖೆಯಾಗಬೇಕು. ಚುನಾವಣಾ ಆಯೋಗ ಈ ಬಗ್ಗೆ ನಿಗಾ ವಹಿಸಬೇಕು” ಎಂದು ಆಗ್ರಹಿಸಿದರು.
“ಬಿಜೆಪಿ ಅಧಿಕಾರಕ್ಕೆ ಬಂದರೆ ಒಂದು ಜಾತಿಗೆ ಸೇರಿದ ಪ್ರಲ್ಹಾದ್ ಜೋಷಿ ಮುಖ್ಯಮಂತ್ರಿಯಾಗಬಹುದು ಎಂದು ಜೆಡಿಎಸ್ ಪಕ್ಷದ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದರು. ಈಗ, ಬಿ.ಎಲ್.ಸಂತೋಷ್ ರವರು ಏಳೆಂಟು ಅಭ್ಯರ್ಥಿಗಳನ್ನು ಬದಲಿಸಿ ಸಿಎಂ ಆಗಲು ಮುಂದಾಗಿದ್ದಾರೆ ಎಂದು ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ. ಬಿಜೆಪಿಯಲ್ಲಿ ಮುಖ್ಯಮಂತ್ರಿಯಾಗಲು ಪ್ರಲ್ಹಾದ್ ಜೋಷಿ ಹಾಗೂ ಬಿ.ಎಲ್.ಸಂತೋಷ್ ನಡುವೆ ಪೈಪೋಟಿಯಿರುತ್ತದೆ ಎನ್ನುವುದು ಇದರಿಂದ ಸಾಬೀತಾಗಿದೆ. ಬೆಂಗಳೂರಿನ ಅಕ್ಕಪಕ್ಕದ ಐದು ಕ್ಷೇತ್ರಗಳಾದ ಜಯನಗರ, ಬಸವನಗುಡಿ, ಚಿಕ್ಕಪೇಟೆ, ರಾಜಾಜಿನಗರ, ಚಾಮರಾಜಪೇಟೆ ಕ್ಷೇತ್ರಗಳಲ್ಲಿ ಒಂದೇ ಜಾತಿಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇದರಿಂದ ಬಿಜೆಪಿ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಐದು ಕ್ಷೇತ್ರಗಳಲ್ಲಿ ಒಂದೇ ಜಾತಿಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಬಗ್ಗೆ ಜನಸಾಮಾನ್ಯರು ಮಾತನಾಡುತ್ತಿದ್ದಾರೆ. ಆದ್ದರಿಂದ ನಾವು ಈ ವಿಷಯವನ್ನು ಜನರ ಮುಂದಿಡುತ್ತಿದ್ದೇವೆ” ಎಂದು ಬ್ರಿಜೇಶ್ ಕಾಳಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಆಮ್ ಆದ್ಮಿ ಪಾರ್ಟಿಯ ಮಾಧ್ಯಮ ವಕ್ತಾರರಾದ ಉಷಾ ಮೋಹನ್ ಭಾಗವಹಿಸಿದ್ದರು.