NEET 2020ರಲ್ಲಿ ಅರ್ಹರಾದರೂ ವೈದ್ಯಕೀಯ ಕಾಲೇಜು ಪ್ರವೇಶ ಪಡೆಯಲು ಸಾಧ್ಯವಾಗದ 22 ಮುಸ್ಲಿಂ ವಿದ್ಯಾರ್ಥಿನಿಯರು

Prasthutha|

ನವದೆಹಲಿ : ಇಲ್ಲಿನ ಜಾಮಿಯಾ ನಗರದ ಸರಕಾರಿ ಶಾಲೆಯೊಂದರ 23 ಮುಸ್ಲಿಂ ವಿದ್ಯಾರ್ಥಿನಿಯರು ಈ ಬಾರಿಯ ಎನ್ ಇಇಟಿ (ನೀಟ್) ಪರೀಕ್ಷೆಯಲ್ಲಿ ಯಶಸ್ವಿಯಾಗಿ, ವೈದ್ಯಕೀಯ ಕಾಲೇಜು ಪ್ರವೇಶಕ್ಕೆ ಅರ್ಹತೆಯನ್ನು ಪಡೆದು ಗಮನ ಸೆಳೆದಿದ್ದರು. ಆದರೆ, ಈ 23ರಲ್ಲಿ 22 ಮಂದಿಗೆ ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆಯುವುದು ಸಾಧ್ಯವಾಗಿಲ್ಲ.

- Advertisement -

ಸಂಸ್ಥೆಗಳು ಘೋಷಿಸಿರುವ ಕಟ್-ಆಫ್ ರ್ಯಾಂಕ್ ಗಳಿಂದ ತಮ್ಮ ಅಂಕಗಳು ಕಡಿಮೆಯಿರುವುದರಿಂದ ತಮಗೆ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಸಿಕ್ಕಿಲ್ಲ ಎಂದು ಈ ವಿದ್ಯಾರ್ಥಿನಿಯರು ತಿಳಿಸಿದ್ದಾರೆ. ಆದಾಗ್ಯೂ, ಇವರು ಖಾಸಗಿ ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆಯಲು ಅರ್ಹರಾಗಿದ್ದರೂ, ಅವುಗಳು ಗೊತ್ತುಪಡಿಸಿರುವ ಶುಲ್ಕ ಭರಿಸುವಷ್ಟು ಶಕ್ತಿ ಈ ವಿದ್ಯಾರ್ಥಿನಿಯರಲ್ಲಿ ಇಲ್ಲ.

“ನಾವು ಮಧ್ಯಮ ವರ್ಗದವರು, ನಮಗೆ ಅಷ್ಟೊಂದು ಶುಲ್ಕ ಪಾವತಿಸಲು ಸಾಧ್ಯವಿಲ್ಲ” ಎಂದು ಓರ್ವ ವಿದ್ಯಾರ್ಥಿನಿ ಮದೀಹಾ ಹೇಳಿದ್ದಾರೆ.

- Advertisement -

ಈ ವಿದ್ಯಾರ್ಥಿನಿಯರು ನವದೆಹಲಿಯ ಓಕ್ಲಾದ ನೂರ್ ನಗರದ ಸರ್ವೋದಯ ಕನ್ಯಾ ವಿದ್ಯಾಲಯದಲ್ಲಿ ಶಿಕ್ಷಣ ಪಡೆದಿದ್ದಾರೆ. ದೆಹಲಿಯಲ್ಲಿ ಈ ಬಾರಿ ನೀಟ್ ಯಶಸ್ವಿಯಾಗಿರುವ 569 ಸರಕಾರಿ ಶಾಲಾ ವಿದ್ಯಾರ್ಥಿಗಳಲ್ಲಿ ಇವರೂ ಸೇರಿದ್ದಾರೆ.

ಅಕ್ಟೋಬರ್ ನಲ್ಲಿ ಈ ವಿದ್ಯಾರ್ಥಿಗಳ ಸಾಧನೆಯ ಬಗ್ಗೆ, ಅದರಲ್ಲೂ ನೂರ್ ನಗರದ ವಿದ್ಯಾರ್ಥಿನಿಯರ ಬಗ್ಗೆ ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು.

23 ವಿದ್ಯಾರ್ಥಿಗಳಲ್ಲಿ ತಸ್ನೀಮ್ ಪರ್ವೀನ್ ಎಂಬ ವಿದ್ಯಾರ್ಥಿನಿ ದೆಹಲಿಯ ಸರಕಾರಿ ಕಾಲೇಜಾದ ಮೀರಾ ಬಾಯಿ ಪಾಲಿಟೆಕ್ನಿಕ್ ನಲ್ಲಿ ಬಿ-ಫಾರ್ಮಾಗೆ ಸೀಟು ಪಡೆದಿದ್ದಾರೆ.



Join Whatsapp