2007ರ ದ್ವೇಷ ಭಾಷಣಕ್ಕೆ ಸಿಎಂ ಯೋಗಿ ವಿರುದ್ಧ ಕೇಸ್ ದಾಖಲಿಸಿದ್ದಾತನಿಗೆ ರೇಪ್ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ

Prasthutha|

ಲಖನೌ : ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಕೇಸ್ ದಾಖಲಿಸಿದ್ದ ಸಾಮಾಜಿಕ ಕಾರ್ಯಕರ್ತನೊಬ್ಬ, ಇದೀಗ ಅತ್ಯಾಚಾರ ಪ್ರಕರಣದಲ್ಲಿ ದೋಷಿಯಾಗಿದ್ದು, ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ. 2018ರ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ 65ರ ಹರೆಯದ ಸಾಮಾಜಿಕ ಕಾರ್ಯಕರ್ತ ಪರ್ವೇಜ್ ಪರ್ವಾಜ್ ದೋಷಿ ಎಂದು ಗೋರಖ್ ಪುರ ಜಿಲ್ಲಾ ನ್ಯಾಯಾಲಯದ ತೀರ್ಪು ನೀಡಿದೆ. ಅಲ್ಲದೆ, ಮತ್ತೊಬ್ಬ ಸಹ ಆರೋಪಿ ಸೇರಿದಂತೆ ಪರ್ವೇಜ್ ಗೆ ಜೀವಾವಧಿ ಶಿಕ್ಷೆ ಘೋಷಿಸಿದೆ.

- Advertisement -

2007ರಲ್ಲಿ ಗೋರಖ್ ಪುರ ಸಂಸದರಾಗಿದ್ದ ಯೋಗಿ ಆದಿತ್ಯನಾಥ್ ವಿರುದ್ಧ ದ್ವೇಷ ಭಾಷಣದ ಆರೋಪದಲ್ಲಿ ಪರ್ವೇಜ್ ಎಫ್ ಐಆರ್ ದಾಖಲಿಸಿದ್ದರು. 2018ರಲ್ಲಿ ಈಗ ಮುಖ್ಯಮಂತ್ರಿಯಾಗಿರುವ ಯೋಗಿ ಆದಿತ್ಯನಾಥ್ ವಿರುದ್ಧ ವಿಚಾರಣೆ ನಡೆಸದಿರುವ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ಅನುಮತಿಸಿದ್ದ ಹಿನ್ನೆಲೆಯಲ್ಲಿ ಪರ್ವೇಜ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. 2018 ಜೂ.3ರಂದು ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು 40ರ ಹರೆಯದ ಮಹಿಳೆಯೊಬ್ಬರು 2018ರ ಸೆಪ್ಟಂಬರ್ ನಲ್ಲಿ ಪರ್ವೇಜ್ ಮತ್ತು ಮತ್ತೋರ್ವ 66ರ ಹರೆಯದ ಮೆಹಮೂದ್ ಅಲಿಯಾಸ್ ಜುಮ್ಮಾನ್ ಬಾಬಾ ಎಂಬವರ ಮೇಲೆ ದೂರು ದಾಖಲಿಸಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ಸೆಶನ್ಸ್ ನ್ಯಾಯಾಧೀಶ ಗೋವಿಂದ್ ವಲ್ಲಭ್ ಶರ್ಮಾ ತೀರ್ಪು ಪ್ರಕಟಿಸಿದ್ದು, ಪರ್ವೇಜ್ ಮತ್ತು ಮೆಹಮೂದ್ ಅವರನ್ನು ದೋಷಿಗಳೆಂದು ಪರಿಗಣಿಸಿದ್ದಾರೆ. ಇಬ್ಬರಿಗೂ ಜೀವಾವಧಿ ಶಿಕ್ಷೆ ಘೋಷಿಸಿರುವುದಲ್ಲದೆ, ತಲಾ 25,000 ರು. ದಂಡ ಪಾವತಿಸುವಂತೆ ಮತ್ತು ಅದರಲ್ಲಿ 40,000 ರು. ಸಂತ್ರಸ್ತೆಗೆ ಪರಿಹಾರವಾಗಿ ನೀಡುವಂತೆ ತೀರ್ಪಿನಲ್ಲಿ ನಿರ್ದೇಶಿಸಲಾಗಿದೆ.

- Advertisement -

ಆದಾಗ್ಯೂ, ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ಪರ್ವೇಜ್ ರ ನ್ಯಾಯವಾದಿ ಮಿಫ್ತಾಹುಲ್ ಇಸ್ಲಾಮ್, ನ್ಯಾಯಾಲಯವು ತಮಗೆ ಲಿಖಿತ ವಾದವನ್ನು ಮಂಡಿಸಲೂ ಅವಕಾಶ ನೀಡಿಲ್ಲ ಎಂದು ಹೇಳಿದ್ದಾರೆ. “ವಾದವು ಪೂರ್ಣಗೊಳ್ಳುವುದಕ್ಕೆ ಮೊದಲೇ ತೀರ್ಪನ್ನು ಘೋಷಿಸಲಾಗಿದೆ. ವಾದ ಇರಲಿಲ್ಲ ಮತ್ತು ನಮ್ಮ ಲಿಖಿತ ವಾದ ಸಲ್ಲಿಕೆಗೂ ಅವಕಾಶ ನೀಡಿರಲಿಲ್ಲ’’ ಎಂದು ಇಸ್ಲಾಮ್ ಹೇಳಿದ್ದಾರೆ. ಆದರೆ, ವಾದಕ್ಕೆ ಸಾಕಷ್ಟು ಅವಕಾಶ ನೀಡಲಾಗಿದೆ ಎಂದು ಸರ್ಕಾರಿ ನ್ಯಾಯವಾದಿ ಹೇಳಿದ್ದಾರೆ.

2017ರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಅಧಿಕಾರ ಸ್ವೀಕರಿಸಿದ ಬಳಿಕ, 2007ರ ದ್ವೇಷ ಭಾಷಣ ಪ್ರಕರಣದಲ್ಲಿ ಆದಿತ್ಯನಾಥ್ ಮತ್ತು ಇತರ ನಾಲ್ವರು ಬಿಜೆಪಿ ನಾಯಕರ ವಿರುದ್ಧದ ವಿಚಾರಣೆಗೆ ಅನುಮತಿ ನಿರಾಕರಿಸಲಾಗಿತ್ತು. 2014ರಲ್ಲಿ ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾದ ಪ್ರಕರಣಕ್ಕೆ ಸಂಬಂಧಿಸಿದ ವೀಡಿಯೊ ಸಾಕ್ಷಿ ತಿರುಚಲಾಗಿದೆ ಎಂದು ಸರ್ಕಾರ ಪ್ರತಿಪಾದಿಸಿತ್ತು. ಆದಿತ್ಯನಾಥ್ ಮತ್ತು ಇತರರ ವಿರುದ್ಧದ ವಿಚಾರಣೆಗೆ ನಿರಾಕರಿಸಿದ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಪರ್ವೇಜ್ ಮತ್ತು ಅವರ ಸಹೋದ್ಯೋಗಿ ಅಸಾದ್ ಹಯಾತ್ 2018 ಫೆಬ್ರವರಿಯಲ್ಲಿ ಅಲಹಾಬಾದ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ. ಹೈಕೋರ್ಟ್ ಈ ಅರ್ಜಿಯನ್ನು ವಜಾ ಮಾಡಿತ್ತು. ಈ ಹಿನ್ನೆಲೆಯಲ್ಲಿ ಅವರು ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ವಿಶೇಷ ದಾವೆ ಹೂಡಿದ್ದರು. ಈ ಪ್ರಕರಣದ ಸುಪ್ರೀಂ ಕೋರ್ಟ್ ನಲ್ಲಿ ಇನ್ನೂ ಬಾಕಿಯಿದೆ.



Join Whatsapp