2002 ರ ಮುಸ್ಲಿಮರ ನರಮೇಧದ ನಂತರ ಗುಜರಾತ್ ಅಶಾಂತಿಯುತವಾಗಿಯೇ ಉಳಿದಿದೆ: ಅಧ್ಯಯನ ವರದಿ

Prasthutha|

- Advertisement -

ಹೊಸದಿಲ್ಲಿ: ಸುಮಾರು 2000 ಜನರನ್ನು ಬಲಿಪಡೆದ 2002 ರ ಮುಸ್ಲಿಮರ ಜನಾಂಗೀಯ ಹತ್ಯಾಕಾಂಡದ ನಂತರ ಗುಜರಾತ್ ಶಾಂತವಾಗಿದೆ ಎಂದು ಬಿಜೆಪಿ ನಾಯಕರ ಹೇಳಿಕೆಯು ಶುದ್ಧ ಸುಳ್ಳೆಂದು ಪುರಾವೆ ನೀಡುವ ಅಧ್ಯಯನ ವರದಿಯಾಗಿದೆ.  2019 ರಲ್ಲಿ ವರದಿಯಾದ ಆರು ಕೋಮು ಗಲಭೆಗಳು ಮತ್ತು ಎರಡು ಜನಾಂಗೀಯ ಹಿಂಸಾಚಾರಗಳು 2014 ರಲ್ಲಿ ಮೋದಿ ಅಧಿಕಾರ ವಹಿಸಿಕೊಂಡಾಗಿನಿಂದ ಗ್ರಾಮೀಣ ಪ್ರದೇಶಗಳು ನಿರಂತರ ಕೋಮು ಸಂಘರ್ಷಗಳಿಗೆ ಸಾಕ್ಷಿಯಾಗುತ್ತಿದೆ ಎಂಬುದನ್ನು ತೋರಿಸುತ್ತದೆ ಎಂದು ಅಹಮದಾಬಾದ್ ಮೂಲದ ನಾಗರಿಕ ಸಮಾಜ ಸಂಘಟನೆಯಾದ ಬುನಿಯಾದ್ ಬಿಡುಗಡೆ ಮಾಡಿದ ವರದಿಯು ಆರೋಪಿಸಿದೆ. 16 ಪುಟಗಳ 2019 ರ ವಾರ್ಷಿಕ ಅಧ್ಯಯನ ವರದಿಯಲ್ಲಿ ಈ ಗಂಭೀರ ಆರೋಪವನ್ನು ಮಾಡಲಾಗಿದೆ. ರಾಜ್ಯದಲ್ಲಿ ಕೋಮು ಸಂಘರ್ಷ ಸಾಮಾನ್ಯವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

1946, 1969, 1981-82, 1985, 1990, 1992, 2002 ಮತ್ತು 2006 ರಲ್ಲಿ ಅಹಮದಾಬಾದ್, ವಡೋದರಾ ಮತ್ತು ಸೂರತ್‌ ಸೇರಿದಂತೆ ಪ್ರಮುಖ ನಗರಗಳಲ್ಲಿ  ದೊಡ್ಡ ಪ್ರಮಾಣದ ಕೋಮು ಘರ್ಷಣೆಗಳು ವರದಿಯಾಗಿದ್ದರೂ ಕಳೆದ ಕೆಲವು ವರ್ಷಗಳಿಂದ ಚತ್ರಲ್, ವಡವುಲಿ, ಖಂಪತ್, ಹಿಮ್ಮತ್‌ನಗರ, ಇಡಾರ್, ಖೇಡಾ ಮತ್ತು ಹಲ್ವಾಡ್ ಎಂಬ ಗ್ರಾಮೀಣ ಪ್ರದೇಶಗಳಲ್ಲಿ ಕೋಮು ಉದ್ವಿಗ್ನತೆ ಮರುಕಳಿಸುತ್ತಲೇ ಇದೆ ಎಂದು ವರದಿಯು ಆರೋಪಿಸಿದೆ. ಕೋಮು ಗಲಭೆಗಳ ಬಗ್ಗೆ ರಾಜ್ಯವು ಅಧಿಕೃತ ಅಂಕಿಅಂಶಗಳನ್ನು ಬಿಡುಗಡೆ ಮಾಡುತ್ತಿಲ್ಲ ಮತ್ತು ಜನಾಂಗೀಯ ಹಿಂಸಾಚಾರಗಳ ಸಂಖ್ಯೆಯನ್ನು ಕಡಿಮೆ ಮಾಡಿ ತೋರಿಸುತ್ತಿದೆ ಎಂದು ವರದಿ ಹೇಳುತ್ತದೆ. 2002 ರ ಕ್ರೂರ ನರಮೇಧದ ನಂತರ ಗುಜರಾತ್ ಕೋಮು ಗಲಭೆಗಳಿಲ್ಲದ ಶಾಂತಿಯುತ ರಾಜ್ಯವಾಗಿ ಮಾರ್ಪಟ್ಟಿದೆ ಎಂದು ಬಿಜೆಪಿ ವ್ಯಾಪಕವಾಗಿ ಪ್ರಚಾರ ಮಾಡುತ್ತಿದೆ. ಕೋಮು ಐಕ್ಯತೆ ಮತ್ತು ಶಾಂತಿಯುತ ಸಹಕಾರದ ಭ್ರಮೆಯನ್ನು ಸೃಷ್ಟಿಸಲು ಸುಳ್ಳನ್ನು ನಿರಂತರವಾಗಿ ಪ್ರಚಾರಪಡಿಸಲಾಗುತ್ತಿದೆ ಎಂದು ರಾಜ್ಯದಲ್ಲಿ ಕೋಮು ಉದ್ವಿಗ್ನತೆಯ ಬಗ್ಗೆ ಅಧ್ಯಯನ ಮಾಡಿದ ನಾಗರಿಕ ಸಮಾಜ ಸಂಘಟನೆಯಾದ ಬುನಿಯಾದ್ ತನ್ನ ವರದಿಯಲ್ಲಿ ಹೇಳಿದೆ.

Join Whatsapp