₹20 ಲಕ್ಷ ಲಂಚ| ಗೌರಿಬಿದನೂರು ನಗರಸಭೆ ಅಧ್ಯಕ್ಷೆ ಪತಿ ಸೇರಿ ನಾಲ್ವರು ಲೋಕಾಯುಕ್ತ ಬಲೆಗೆ

Prasthutha|

ಗೌರಿಬಿದನೂರು: ನಗರಸಭೆಯಿಂದ ಭೂ ಪರಿವರ್ತನೆಗೆ ಸಂಬಂಧಿಸಿದ ದಾಖಲೆ ಕೊಡಿಸಲು ಬೆಂಗಳೂರಿನ ರಿಯಲ್‌ ಎಸ್ಟೇಟ್‌ ಉದ್ಯಮಿಯೊಬ್ಬರಿಂದ ₹20 ಲಕ್ಷ ಲಂಚ ಪಡೆಯುತ್ತಿದ್ದ ಗೌರಿಬಿದನೂರು ನಗರಸಭೆ ಅಧ್ಯಕ್ಷೆ ಎಸ್. ರೂಪಾ ಅವರ ಪತಿ ಕೆ.ಎಸ್. ಅನಂತರಾಜು ಹಾಗೂ ಸದಸ್ಯ ಆರ್.ಪಿ. ಗೋಪಿನಾಥ್ ಸೇರಿದಂತೆ ನಾಲ್ವರನ್ನು ಲೋಕಾಯುಕ್ತ ಪೊಲೀಸರು ಶನಿವಾರ ಬಂಧಿಸಿದ್ದಾರೆ.

- Advertisement -

ನಗರಸಭೆ ಸದಸ್ಯೆ ರಾಜೇಶ್ವರಿ ಅವರ ಪತಿ ಮೈಲಾರಿ ಮತ್ತು ಮತ್ತೊಬ್ಬ ಸದಸ್ಯೆ ವರಲಕ್ಷ್ಮಿ ಅವರ ಪತಿ ಮಂಜುನಾಥ್ ಅವರನ್ನೂ ಬಂಧಿಸಲಾಗಿದೆ.

ಬೆಂಗಳೂರಿನ ರಾಜಾನುಕುಂಟೆಯ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ ರೆಡ್ಡಿ ಎಂಬುವರು ಗೌರಿಬಿದನೂರು ಸಮೀಪ ಎಂಟು ಎಕರೆ ಕೃಷಿ ಜಮೀನು ಖರೀದಿಸಿದ್ದರು.

- Advertisement -

ಈ ಜಮೀನಿನಲ್ಲಿ 133 ವಸತಿ ನಿವೇಶನಗಳ ಬಡಾವಣೆ ನಿರ್ಮಾಣ ಮಾಡಿದ್ದರು. ಉದ್ಯಮಿಯನ್ನು ಸಂಪರ್ಕಿಸಿದ್ದ ಆರೋಪಿಗಳು ನಗರಸಭೆಯಿಂದ ಅನುಮೋದನೆ ಕೊಡಿಸಲು ಪ್ರತಿ ಎಕರೆಗೆ ₹5 ಲಕ್ಷದಂತೆ ಒಟ್ಟು ₹40 ಲಕ್ಷ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. 

ಉದ್ದಮಿ ರೆಡ್ಡಿ ಅವರು ಈ ಬಗ್ಗೆ ಲೋಕಾಯುಕ್ತ ಬಿ.ಎಸ್.ಪಾಟೀಲ ಅವರಿಗೆ ದೂರು ನೀಡಿದ್ದರು. ನಂತರ ರಾಜಾನುಕುಂಟೆ ಬಳಿಯ ರೆಸಾರ್ಟ್‌ಗೆ ಬಂದು ಹಣ ಪಡೆಯುವಂತೆ ಆರೋಪಿಗಳಿಗೆ ತಿಳಿಸಿದ್ದರು. ನಾಲ್ವರೂ ರೆಸಾರ್ಟ್‌ಗೆ ಬಂದು ₹20 ಲಕ್ಷ‌ ಪಡೆಯುವಾಗ ಲೋಕಾಯುಕ್ತ ಡಿವೈಎಸ್‌ಪಿ ಭೂತೇಗೌಡ ನೇತೃತ್ವದ ತಂಡ ಅವರನ್ನು ಬಂಧಿಸಿದೆ. 



Join Whatsapp