ಕೊಲ್ಕತಾ : ಪಶ್ಚಿಮ ಬಂಗಾಳದಲ್ಲಿ ಮುಂದಿನ ಬಾರಿ ನಾವೇ ಗೆಲ್ಲುತ್ತೇವೆ ಎಂದು ಬಿಜೆಪಿ ಭಾರೀ ಬೀಗುತ್ತಿದೆ. ಆದರೆ, ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ನಡುವೆ, ಕಳೆದ ಲೋಕಸಭಾ ಚುನಾವಣೆ ವೇಳೆ ನೀಡಲಾಗಿದ್ದ ಭರವಸೆ ಈಡೇರಿಸದ್ದಕ್ಕೆ ಬಿಜೆಪಿ ಸಂಸದರಿಬ್ಬರ ವಿರುದ್ಧ ಗ್ರಾಮವೊಂದರ ಮಹಿಳೆಯರು ಮುತ್ತಿಗೆ ಹಾಕಿದ ಘಟನೆ ನಡೆದಿದೆ.
ಬಿಜೆಪಿ ಸಂಸದರಿಗೆ ಪಶ್ಚಿಮ ಬಂಗಾಳದ ಜಾರ್ಗ್ರಾಮ್ ನ ಹೆದ್ದಾರಿ ತಡೆದು ಮಹಿಳೆಯರು ಮುತ್ತಿಗೆ ಹಾಕಿದ್ದಾರೆ. ಮನೆಗಳಿಗೆ ಕುಡಿಯುವ ನೀರಿನ ಪೂರೈಕೆ ಭರವಸೆ ನೀಡಿದ್ದ ಸಂಸದರು, ಭರವಸೆ ಈಡೇರಿಸಿಲ್ಲ ಎಂದು ಮುತ್ತಿಗೆ ಹಾಕಿದ ಮಹಿಳೆಯರು ಆಪಾದಿಸಿದ್ದಾರೆ.
ಪುರುಲಿಯಾದ ಬಿಜೆಪಿ ಸಂಸದ ಜ್ಯೋತಿರ್ಮೊಯ್ ಸಿಂಗ್ ಮಹಾತೊ, ಮತ್ತು ಸ್ಥಳೀಯ ಸಂಸದ ಕುನಾರ್ ಹೇಮ್ ಬ್ರಮ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಪ್ರತಿಭಟನಾ ನಿರತ ಮಹಿಳೆಯರು ಸಂಸದರನ್ನು 40 ನಿಮಿಷಗಳ ಕಾಲ ತಡೆ ಹಿಡಿದಿದ್ದರು ಎನ್ನಲಾಗುತ್ತಿದೆ. ಆದರೆ, ಸಂಸದರು ಅಂತದ್ದೇನೂ ನಡೆದಿಲ್ಲ ಎಂದಿದ್ದಾರೆ. ಸಂಸದರನ್ನು ಘೇರಾವ್ ನಿಂದ ರಕ್ಷಿಸಲು ಭದ್ರತಾ ಸಿಬ್ಬಂದಿ ಮತ್ತೆ ಪೊಲೀಸರು ಹರಸಾಹಸ ಪಡಬೇಕಾಯಿತು ಎಂದು ಮೂಲಗಳು ತಿಳಿಸಿವೆ.
ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರಬೇಕು ಎಂದು ಮಹಿಳೆಯರು ಪಟ್ಟುಹಿಡಿದಿದ್ದ ಬಗ್ಗೆ ವರದಿಗಳು ತಿಳಿಸಿವೆ.