ಸಂಜು ಸ್ಯಾಮ್ಸನ್‌ ಹೋರಾಟ ವ್ಯರ್ಥ| ಆಫ್ರಿಕಾ ಎದುರು ಭಾರತಕ್ಕೆ ರೋಚಕ ಸೋಲು

Prasthutha|

ಲಕ್ನೋ: ಅಂತಿಮ ಓವರ್‌ವರೆಗೂ ಸಂಜು ಸ್ಯಾಮ್ಸನ್‌ ನಡೆಸಿದ ಏಕಾಂಗಿ ಹೋರಾಟದ ಹೊರತಾಗಿಯೂ, ದಕ್ಷಿಣ ಅಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 9 ರನ್‌ಗಳ ಅಂತರದಲ್ಲಿ ರೋಚಕ ಸೋಲು ಅನುಭವಿಸಿದೆ.

- Advertisement -

ಪ್ರವಾಸಿ ಪಡೆ, ನೀಡಿದ್ದ 250 ರನ್ ಗಳನ್ನು ಬೆನ್ನಟ್ಟುವ ವೇಳೆ, ಅಂತಿಮ 2 ಓವರ್‌ಗಳಲ್ಲಿ ಟೀಮ್‌ ಇಂಡಿಯಾ ಗೆಲುವಿಗೆ 38 ರನ್‌ಗಳ ಅಗತ್ಯವಿತ್ತು. ಆದರೆ 39ನೇ ಓವರ್‌ನಲ್ಲಿ ಸಂಜು ಸ್ಯಾಮ್ಸನ್‌ರನ್ನು ನಾನ್‌ ಸ್ಟ್ರೈಕ್‌ನಲ್ಲೇ ಉಳಿಸುವಲ್ಲಿ ಯಶಸ್ವಿಯಾದ ರಬಾಡ, ಕೇವಲ 7 ರನ್‌ ನೀಡಿ ಓವರ್‌ ಮುಗಿಸಿದರು. ಹೀಗಾಗಿ ಅಂತಿಮ ಓವರ್‌ನಲ್ಲಿ 31 ರನ್‌ಗಳ ಕಠಿಣ ಗುರಿ ಭಾರತದ ಮುಂದಿತ್ತು.

ಸ್ಪಿನ್ನರ್‌ ತಬ್ರೇಜ್‌ ಶಂಶಿ ಎಸೆದ ಅಂತಿಮ ಓವರ್‌ನಲ್ಲಿ ಸಂಜು, 3 ಬೌಂಡರಿ ಮತ್ತು 1 ಸಿಕ್ಸರ್‌ ಸಿಡಿಸಿದರಾದರೂ ಗೆಲುವಿನ ಗುರಿ ಮುಟ್ಟಲಾಗಲಿಲ್ಲ. ಅಂತಿಮವಾಗಿ ನಿಗದಿತ 40 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟದಲ್ಲಿ 240 ರನ್‌ ಗಳಿಸಲಷ್ಟೇ ಶಕ್ತವಾಯಿತು. 63 ಎಸೆತಗಳನ್ನು ಎದುರಿಸಿದ ಸಂಜು, 9 ಬೌಂಡರಿ ಮತ್ತು 3 ಸಿಕ್ಸರ್‌ಗಳ ನೆರವಿನಿಂದ 86 ರನ್‌ಗಳಿಸಿ ಅಜೇಯರಾಗುಳಿದರು.  ಶ್ರೇಯಸ್‌ ಅಯ್ಯರ್‌ 50 ರನ್‌ಗಳಿಸಿದ್ದ ವೇಳೆ ಎನ್‌ಗಿಡಿ ಬೌಲಿಂಗ್‌ನಲ್ಲಿ  ರಬಡಾಗೆ ಕ್ಯಾಚಿತ್ತು ನಿರ್ಗಮಿಸಿದರು.

- Advertisement -

ಲಕ್ನೋದ ಭಾರತರತ್ನ ಶ್ರೀಅಟಲ್ ಬಿಹಾರಿ ವಾಜಪೇಯಿ ಎಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯಕ್ಕೆ ಆರಂಭದಲ್ಲೇ ಮಳೆ ಅಡ್ಡಿಪಡಿಸಿತ್ತು. ಹೀಗಾಗಿ ಓವರ್‌ಗಳ ಸಂಖ್ಯೆಯನ್ನು 50ರ ಬದಲು 40ಕ್ಕೆ ಇಳಿಸಲಾಗಿತ್ತು. ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ್ದ ಪ್ರವಾಸಿ ಪಡೆ, 4 ವಿಕೆಟ್‌ ನಷ್ಟದಲ್ಲಿ 249 ರನ್ ಗಳಿಸಿತ್ತು.



Join Whatsapp