ಆ್ಯಶಸ್ ಟೆಸ್ಟ್: ಇಂಗ್ಲೆಂಡ್ ನಾಟಕೀಯ ಕುಸಿತ, 9 ವಿಕೆಟ್ ಅಂತರದಲ್ಲಿ ಗೆದ್ದ ಆಸ್ಟ್ರೇಲಿಯಾ

Prasthutha|

ಬ್ರಿಸ್ಬೇನ್: ಆಸ್ಟ್ರೇಲಿಯಾ ವಿರುದ್ಧ 4ನೇ ದಿನದಾಟದಲ್ಲಿ ನಾಟಕೀಯ ಕುಸಿತ ಕಂಡ ಪ್ರವಾಸಿ ಇಂಗ್ಲೆಂಡ್, ಆ್ಯಶಸ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ 9 ವಿಕಟ್’ಗಳ ಅಂತರದಲ್ಲಿ ಪ್ಯಾಟ್ ಕಮ್ಮಿನ್ಸ್ ಪಡೆಗೆ ಶರಣಾಗಿದೆ.

- Advertisement -

ಗಾಬಾ ಮೈದಾನದಲ್ಲಿ ಮೂರನೇ ದಿನದಾಟದ ಅಂತ್ಯಕ್ಕೆ ಎರಡು ವಿಕೆಟ್ ನಷ್ಟದಲ್ಲಿ 220 ರನ್’ಗಳಿಸಿ ಸುಸ್ಥಿತಿಯಲ್ಲಿದ್ದ ಆಂಗ್ಲಪಡೆ, 4ನೇ ದಿನದಾಟದಲ್ಲಿ ಕೇವಲ 77 ರನ್ ಸೇರಿಸಲಷ್ಟೇ ಶಕ್ತವಾಯಿತು. ಆ ಮೂಲಕ ತಂಡದ ಮೊತ್ತ 297 ರನ್ ತಲುಪುವಷ್ಟರಲ್ಲಿ ಸರ್ವ ಪತನ ಕಂಡಿತು. ಗೆಲುವಿಗಾಗಿ ಕೇವಲ 20 ರನ್ ಗುರಿ ಪಡೆದ ಆಸ್ಟ್ರೇಲಿಯಾ 5.1 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ ಒಂದು ದಿನ ಬಾಕಿಯಿರುವಾಗಲೇ ಗೆಲುವಿನ ನಗೆ ಬೀರುವ ಮೂಲಕ 5 ಪಂದ್ಯಗಳ ಪ್ರತಿಷ್ಠಿತ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.

ಮೊದಲ ಇನ್ನಿಂಗ್ಸ್’ನಲ್ಲಿ 278 ರನ್‌’ಗಳ ಹಿನ್ನಡೆ ಅನುಭವಿಸಿದ್ದ ಇಂಗ್ಲೆಂಡ್, ಮೂರನೇ ದಿನದಾಟದ ಮೊದಲ ಅವಧಿಯಲ್ಲೇ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಬಳಿಕ ಜೊತೆಗೂಡಿದ ಡೇವಿಡ್ ಮಲಾನ್ ಹಾಗೂ ನಾಯಕ ಜೋ ರೂಟ್ ತಂಡದ ಮೊತ್ತವನ್ನು 220ಕ್ಕೇರಿಸಿದ್ದರು. ನಾಲ್ಕನೇ ದಿನದಾಟದ ಆರಂಭದಲ್ಲಿ ಮೂರು ರನ್ ಗಳಿಸುವಷ್ಟರಲ್ಲೇ ಮಿಡ್‌ ಆಫ್‌’ನಲ್ಲಿದ್ದ ಮಾರ್ನಸ್ ಲಾಬುಶೇನ್‌’ಗೆ ಕ್ಯಾಚ್ ನೀಡಿ ಡೇವಿಡ್ ಮಲಾನ್ ಮರಳಿದರು. ನಂತರ 6 ರನ್ ಸೇರಿಸುವಷ್ಟರಲ್ಲಿ 89 ರನ್’ಗಳಿಸಿದ್ದ ರೂಟ್ ಕೂಡ ಕೀಪರ್’ಗೆ ಕ್ಯಾಚಿತ್ತು ನಿರ್ಗಮಿಸಿದರು.

- Advertisement -

ಡೇವಿಡ್ ಮಲಾನ್ ಹಾಗೂ ಜೋ ರೂಟ್ ವಿಕೆಟ್ ಪತನವಾಗುತ್ತಲೇ ಆಸೀಸ್ ಪಾಳೆಯದಲ್ಲಿ ಗೆಲುವಿನ ಭರವಸೆ ಮೂಡಿತ್ತು. ಬೆನ್ ಸ್ಟೋಕ್ಸ್ 14, ಪೋಪ್ 4, ಬಟ್ಲರ್ 23 ಹಾಗೂ ಕ್ರಿಸ್ ವೋಕ್ಸ್ 16 ರನ್’ಗಳಿಸಲಷ್ಟೇ ಶಕ್ತರಾದರು. ಅಂತಿಮವಾಗಿ ಇಂಗ್ಲೆಂಡ್ 297 ರನ್’ಗಳಿಗೆ ಆಲೌಟ್ ಆಗಿತ್ತು. ಆಸ್ಟ್ರೇಲಿಯಾ ಪರ ಸ್ಪಿನ್ನರ್ ನಥನ್ ಲಿಯಾನ್ 4 ವಿಕೆಟ್ ಪಡೆದು ಮಿಂಚಿದರು. ಆ ಮೂಲಕ ಟೆಸ್ಟ್ ಕ್ರಿಕೆಟ್’ನಲ್ಲಿ 400 ವಿಕೆಟ್ ಪಡೆದ ಸಾಧನೆ ಮಾಡಿದರು. ಮೊದಲ ಇನ್ನಿಂಗ್ಸ್’ನಲ್ಲಿ ಭರ್ಜರಿ ಶತಕ ಸಿಡಿಸಿದ್ದ ಟ್ರಾವಿಸ್ ಹೆಡ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನಾರದರು.

5 ಟೆಸ್ಟ್ ಪಂದ್ಯಗಳ ಸರಣಿಯ ಎರಡನೇ ಪಂದ್ಯ ಡಿಸೆಂಬರ್ 16ರಿಂದ ಅಡಿಲೇಡ್ ಓವಲ್ ಮೈದಾನದಲ್ಲಿ ಆರಂಭವಾಗಲಿದೆ

Join Whatsapp