ತ್ರಿಪುರಾದಲ್ಲಿ ಬಿಜೆಪಿ – ಟಿಎಂಸಿ ಘರ್ಷಣೆ: 19 ಮಂದಿಗೆ ಗಾಯ, ನಿಷೇಧಾಜ್ಞೆ ಜಾರಿ

Prasthutha|

ಅಗರ್ತಲಾ: ತ್ರಿಪುರಾ ಖೋವೈ ಜಿಲ್ಲೆಯ ತೆಲಿಯಮುರಾದಲ್ಲಿ ಬಿಜೆಪಿ – ಟಿಎಂಸಿ ಬೆಂಬಲಿಗರ ನಡುವೆ ಘರ್ಷಣೆ ನಡೆದು ಕನಿಷ್ಠ 19 ಮಂದಿ ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಘಟನಾ ಸ್ಥಳದಲ್ಲಿ ಸಿ.ಆರ್.ಪಿ.ಸಿ ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

- Advertisement -

ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಮೊದಲು ನಡೆದ ಘರ್ಷಣೆಯಲ್ಲಿ ಇಬ್ಬರು ಪೊಲೀಸರು ಸೇರಿದಂತೆ ಒಟ್ಟು 19 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ತೆಲಿಯಮುರ ಪುರಸಭೆಯ ವಾರ್ಡ್ ಸಂಖ್ಯೆ 13,14,15 ರಲ್ಲಿ ಸೆಕ್ಷನ್ ಗೆ ಆದೇಶ ನೀಡಿದ್ದು, ಶುಕ್ರವಾರದಿಂದ ನವೆಂಬರ್ 24 ರ ವರೆಗೆ ಸೆಕ್ಷನ್ ಜಾರಿಯಲ್ಲಿರುತ್ತದೆ ಎಂದು ತೆಲಿಯಮುರ ಉಪವಿಭಾಗಾಧಿಕಾರಿ ಎಂ.ಡಿ ಸಜ್ಜದ್ ತಿಳಿಸಿದ್ದಾರೆ.

- Advertisement -

ಕಳೆದ ಬುಧವಾರ ರಾತ್ರಿ ಸುಮಾರು 9.30 ಕ್ಕೆ ಕಲಿಟಿಲಾದಲ್ಲಿ ಟಿಎಂಸಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದನ್ನು ನೆಪವಾಗಿಟ್ಟು ಪ್ರಾರಂಭವಾದ ಘರ್ಷಣೆ ನಂತರ ಬಿಜೆಪಿ ಕಚೇರಿ ಬಳಿಗೆ ವ್ಯಾಪಿಸಿತ್ತು ಎಂದು ಸಹಾಯಕ ಪೊಲೀಸ್ ಮಹಾ ನಿರೀಕ್ಷಕ ಸುಬ್ರತಾ ಚಕ್ರವರ್ತಿ ತಿಳಿಸಿದ್ದಾರೆ.

ಪರಿಸ್ಥಿತಿ ಕೈ ಮೀರಿದಾಗ ಲಘು ಲಾಠಿಚಾರ್ಜ್ ಮತ್ತು ಅಶ್ರುವಾಯು ಸಿಡಿಸಲಾಯಿತು ಎಂದು ಚಕ್ರವರ್ತಿ ತಿಳಿಸಿದರು.
ಘಟನೆಗೆ ಸಂಬಂಧಿಸಿದಂತೆ ತೆಲಿಯಮುರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಕೊಲೆಯತ್ನ, ಅಕ್ರಮ ಕೂಟ ಸೇರಿದಂತೆ ವಿವಿಧ ಕಾಯ್ದೆಯಡಿಯಲ್ಲಿ ಮೂರು ಪ್ರತ್ಯೇಕ ಪ್ರಕರಣವನ್ನು ದಾಖಲಿಸಲಾಗಿದೆ. ಮಾತ್ರವಲ್ಲ ಈ ಸಂಬಂಧ ಐವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಆರೋಪಿಗಳಿಗೆ ನವೆಂಬರ್ 30 ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಮಧ್ಯೆ ನವೆಂಬರ್ ರಂದು ನಡೆಯುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ರೀತಿಯಲ್ಲಿ ನಡೆಸಬೇಕೆಂದು ಸುಪ್ರೀಮ್ ಕೋರ್ಟ್ ನ ಆದೇಶವಿದ್ದರೂ ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಗಂಭೀರವಾಗಿ ಹಲ್ಲೆ ನಡೆಸಲಾಗುತ್ತಿದೆ ಎಂದು ಟಿಎಂಸಿ ಮುಖಂಡೆ ಸುಶ್ಮಿತಾ ದೇವ್ ಆರೋಪಿಸಿದ್ದಾರೆ.

Join Whatsapp