ಫರೀದಾಬಾದ್: ಸಾರ್ವಜನಿಕ ವಲಯದ ಬ್ಯಾಂಕುಗಳ ಅಧಿಕಾರಿಗಳ ಸೋಗಿನಲ್ಲಿ ಓಡಾಡುತ್ತ ದೇಶದ 21 ರಾಜ್ಯಗಳಲ್ಲಿ 187 ಜನರಿಗೆ ಲಕ್ಷಾಂತರ ರೂಪಾಯಿ ಟೋಪಿ ಹಾಕಿದ 7 ಜನರನ್ನು ಫರೀದಾಬಾದ್ ಪೋಲೀಸರು ಬಂಧಿಸಿದ್ದಾರೆ.
ಕ್ರೆಡಿಟ್ ಕಾರ್ಡ್ ಮುಂದುವರಿಸುವ ಬಗ್ಗೆ ವ್ಯವಹರಿಸಲು ಬಂದ ಅಧಿಕಾರಿಗಳಂತೆ ಮಾತನಾಡಿ, ಅದರ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಆಮೇಲೆ ಅಂಥ ಖಾತೆಗಳಿಂದ ಹಣ ಲಪಟಾಯಿಸುತ್ತಿದ್ದರು.
ಬಂಧಿತ 7 ಆರೋಪಿಗಳಿಂದ 35 ಮೊಬೈಲ್ ಫೋನ್ ಗಳು, 109 ಸಿಮ್ ಕಾರ್ಡ್ ಗಳು, 15 ಎಟಿಎಂ ಕಾರ್ಡ್ ಗಳು, 22.6 ಲಕ್ಷ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ. ಫರೀದಾಬಾದ್ ನ ಮನೋಜ್ ಕುಮಾರ್ ಎನ್ನುವವರು ತನ್ನ ಖಾತೆಗೆ ರೂ. 1.57 ಲಕ್ಷ ವಂಚಿಸಿರುವುದಾಗಿ ದೂರು ನೀಡಿದ್ದು ಈ ವಂಚಕರನ್ನು ಪತ್ತೆ ಹಚ್ಚಲು ದಾರಿ ಮಾಡಿತು.
ಮಧ್ಯ ಪ್ರದೇಶದ ಮೊರೇನಾದ ಸೋನ್ ವೀರ್, ರಾಹುಲ್, ಉತ್ತರ ಪ್ರದೇಶದ ಎಟ್ಟಾವಾದ ಅಮನ್, ಬಿಹಾರದ ಶಕ್ತಿ ಮಿಶ್ರಾ, ಉತ್ತರ ಪ್ರದೇಶದ ಫರೂಕಾಬಾದಿನ ಸುಬಾನ್, ದೆಹಲಿಯ ಅಬ್ದುಲ್ಲಾ ಮತ್ತು ಪಂಕಜ್ ಬಂಧಿತ ಆರೋಪಿಗಳಾಗಿದ್ದಾರೆ.