ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿ ಡಿ ಪ್ರಕರಣಕ್ಕೆ ಸಂಬಂಧಿಸಿದ ತನಿಖಾ ವರದಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲು ಅನುಮತಿ ನೀಡುವಂತೆ ವಿಶೇಷ ತನಿಖಾ ತಂಡ (ಎಸ್ಐಟಿ) ಕರ್ನಾಟಕ ಹೈಕೋರ್ಟ್ ಗೆ ಗುರುವಾರ ಮನವಿ ಮಾಡಿತು.
ಪ್ರಕರಣದ ತನಿಖೆಗೆ ಎಸ್ಐಟಿ ರಚಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹೊರಡಿಸಿರುವ ಆದೇಶ ಪ್ರಶ್ನಿಸಿ ವಕೀಲೆ ಗೀತಾ ಮಿಶ್ರಾ ಹಾಗೂ ಪ್ರಕರಣದ ಸಂತ್ರಸ್ತೆ ಎನ್ನಲಾದ ಯುವತಿ ಸಲ್ಲಿಸಿರುವ ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ಬಿ ವೀರಪ್ಪ ಮತ್ತು ಎಂ ಜಿ ಉಮಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಎಸ್ಐಟಿ ಪರ ಹಿರಿಯ ವಕೀಲ ಅಶೋಕ ಹಾರನಹಳ್ಳಿ ಅವರು “ಸಿ ಡಿ ಪ್ರಕರಣದ ತನಿಖೆ ಪೂರ್ಣಗೊಂಡಿದ್ದು, ಹೈಕೋರ್ಟ್ ನಿರ್ಬಂಧವಿರುವ ಕಾರಣ ಅಂತಿಮ ವರದಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲಾಗಿಲ್ಲ. ಮಧ್ಯಂತರ ಆದೇಶ ತೆರವುಗೊಳಿಸುವಂತೆ ಕೋರಿ ಎಸ್ಐಟಿ ಅರ್ಜಿ ಸಲ್ಲಿಸಿದೆ. ಅದನ್ನು ಪರಿಗಣಿಸಿ, ಸಂಬಂಧಪಟ್ಟ ವಿಚಾರಣಾ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಲು ಅನುಮತಿ ನೀಡಬೇಕು” ಎಂದು ಪೀಠಕ್ಕೆ ಮನವಿ ಮಾಡಿದರು.
ಯುವತಿ ಪರ ವಾದ ಮಂಡಿಸುತ್ತಿರುವ ಸುಪ್ರೀಂಕೋರ್ಟ್ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಅವರ ಕಿರಿಯ ವಕೀಲರು “ಇಂದಿರಾ ಜೈಸಿಂಗ್ ಕೋವಿಡ್ ಸೋಂಕಿನಿಂದ ಬಳಲುತ್ತಿದ್ದು, ಇನ್ನೂ ಕೋವಿಡ್ ಎಂದು ದೃಢಪಟ್ಟಿಲ್ಲ. ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ಸಂಬಂಧ ಅವರೇ ವಾದ ಮಂಡಿಸಲಿದ್ದಾರೆ. ಆದ್ದರಿಂದ, ವಿಚಾರಣೆ ಮುಂದೂಡಬೇಕು” ಎಂದು ಕೋರಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರಮೇಶ್ ಜಾರಕಿಹೊಳಿ ಪರ ಹಿರಿಯ ವಕೀಲ ಸಿ ವಿ ನಾಗೇಶ್ ಅವರು “ಈಗಾಗಲೇ ಸಾಕಷ್ಟು ಬಾರಿ ಅನಾರೋಗ್ಯದ ಕಾರಣ ಹೇಳಿ, ಕಾಲಾವಕಾಶ ಪಡೆದುಕೊಂಡಿದ್ದಾರೆ. ಪ್ರಕರಣದ ವಿಚಾರಣೆ ವಿಳಂಬವಾಗುತ್ತಿದ್ದು, ಮತ್ತೆ ಕಾಲಾವಕಾಶ ನೀಡಬಾರದು” ಎಂದು ಕೋರಿದರು. ಅಂತಿಮವಾಗಿ ಪೀಠವು ವಿಚಾರಣೆಯನ್ನು ಜನವರಿ 13ಕ್ಕೆ ಮುಂದೂಡಿತು.