ರಾಜ್ಯದಲ್ಲಿ 1600 ಅನಧಿಕೃತ ಶಾಲೆಗಳು: ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟ ಬೇಡ ಸರ್ಕಾರಕ್ಕೆ – ಅಬ್ದುಲ್ ಮಜೀದ್ ಎಚ್ಚರಿಕೆ

Prasthutha|

ಬೆಂಗಳೂರು: ರಾಜ್ಯದಲ್ಲಿ ಸುಮಾರು 1600ಕ್ಕೂ ಹೆಚ್ಚು ಅನಧಿಕೃತ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಮಾಧ್ಯಮ ವರದಿಗಳು ಬಹಿರಂಗಪಡಿಸಿವೆ. ಇಂತಹ ಶಾಲೆಗಳು ಮಕ್ಕಳ ಭವಿಷ್ಯಕ್ಕೆ ಕೊಳ್ಳಿ ಇಡುವಂತಹ ನೀಚ ಕಾರ್ಯ ಮಾಡುತ್ತಿವೆ. ಈ ಶಾಲೆಗಳ ಅಸ್ತಿತ್ವಕ್ಕೆ ಭ್ರಷ್ಟ ಬಿಜೆಪಿ ಸರ್ಕಾರವೆ ಹೊಣೆ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್’ಡಿಪಿಐ) ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ತಿಳಿಸಿದ್ದಾರೆ.

- Advertisement -


ಸಮಾಜದಲ್ಲಿ ಕೋಮುವಾದ ಬಿತ್ತಲು, ಪಠ್ಯಪುಸ್ತಕಗಳನ್ನು ಕೇಸರೀಕರಣಗೊಳಿಸಲು ತೋರಿದ ಆಸಕ್ತಿ, ಹುಮ್ಮಸ್ಸು ನಾಯಿ ಕೊಡೆಗಳಂತೆ ತಲೆಯೆತ್ತಿರುವ, ಆ ಮೂಲಕ ಮಕ್ಕಳ ಭವಿಷ್ಯವನ್ನು ನಾಶ ಮಾಡುತ್ತಿರುವ ಅನಧಿಕೃತ ಶಾಲೆಗಳನ್ನು ಪತ್ತೆ ಹಚ್ಚಿ ಅವುಗಳ ಮೇಲೆ ಕ್ರಮ ಕೈಗೊಳ್ಳುವುದರಲ್ಲಿ ಶಿಕ್ಷಣ ಸಚಿವ ನಾಗೇಶ್ ವಿಫಲರಾಗಿದ್ದಾರೆ, ಏಕೆಂದರೆ ಈ ಸರ್ಕಾರದ ಆದ್ಯತೆ ಶಾಲಾ ಮಟ್ಟದಿಂದಲೇ ಮಕ್ಕಳನ್ನು ಕೋಮು ದ್ವೇಷಗಳನ್ನಾಗಿಸಿ ಸಮಾಜವನ್ನು ಇಬ್ಬಾಗ ಮಾಡುವುದೆ ಹೊರತು ಅವರಿಗೆ ಉತ್ತಮ ಶಿಕ್ಷಣ ಒಡಗಿಸುವುದಲ್ಲ ಎಂದು ಮಜೀದ್ ಅವರು ತಮ್ಮ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.
ರಾಜ್ಯದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 18,300 ಕ್ಕೂ ಹೆಚ್ಚು ಖಾಸಗಿ ಶಾಲೆಗಳ ಪೈಕಿ ಸುಮಾರು 1600 ಕ್ಕೂ ಹೆಚ್ಚಿನ ಶಾಲೆಗಳು ಅನಧಿಕೃತ ಶಾಲೆಗಳಾಗಿವೆ ಎಂದು ವರದಿಗಳು ಹೇಳುತ್ತವೆ. ಇಷ್ಟು ದೊಡ್ಡ ಮಟ್ಟದಲ್ಲಿ ಬಹಿರಂಗವಾಗಿ ಅನಧಿಕೃತ ಶಾಲೆಗಳನ್ನು ನಡೆಸಲು ಅನುವು ಮಾಡಿಕೊಟ್ಟವರು ಯಾರು? ಇಷ್ಟು ವರ್ಷಗಳ ಕಾಲ ಸರ್ಕಾರ ಈ ವಿಚಾರದಲ್ಲಿ ಏಕೆ ಯಾವ ಕ್ರಮವನ್ನು ಕೈಗೊಂಡಿಲ್ಲ? ಎಂಬ ಪ್ರಶ್ನೆಗಳಿಗೆ ಉತ್ತರ, ಇಂತಹ ಶಾಲೆಗಳಿಂದ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಶಿಕ್ಷಣ ಸಚಿವರ ಮಟ್ಟದಲ್ಲಿ ಲಂಚ ಪಡೆಯುವ ಮೂಲಕ ಅವುಗಳನ್ನು ನಿರಾತಂಕವಾಗಿ ನಡೆಸಿಕೊಂಡು ಹೋಗಲು ಅನುವು ಮಾಡಿಕೊಟ್ಟಿರುವುದೆ ಆಗಿದೆ. ಇದರ ನೇರ ಹೊಣೆಗಾರಿಕೆ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಹೊರಬೇಕು ಎಂದು ಅವರು ಹೇಳಿದರು.


ಈಗ ಅನಧಿಕೃತ ಶಾಲೆಗಳ ಪಟ್ಟಿ ಸಿದ್ಧವಾಗಿದ್ದರು ಕೂಡ ಅದನ್ನು ಪ್ರಕಟಿಸಲು ನೀತಿ ಸಹಿತ ಅಡ್ಡಿಯಾಗುತ್ತದೆ ಎಂದು ಹೇಳುವ ಮೂಲಕ ಅಧಿಕಾರಿಗಳು ಈ ಅನಧಿಕೃತ ಶಾಲೆಗಳನ್ನು ಮತ್ತೊಂದಷ್ಟು ದಿನ ನಡೆಸಿಕೊಂಡು ಹೋಗಲು ಅನುವು ಮಾಡಿಕೊಡುತ್ತಿದ್ದಾರೆ. ಈಗ ವಿದ್ಯಾರ್ಥಿಗಳ ಪ್ರವೇಶದ ಸಂದರ್ಭವಾಗಿರುವುದರಿಂದ ಈ ಶಾಲೆಗಳ ಪಟ್ಟಿಯನ್ನು ಸಾರ್ವಜನಿಕಗೊಳಿಸದೆ ಹೋದರೆ ಮತ್ತೊಂದು ವರ್ಷ ವಿದ್ಯಾರ್ಥಿಗಳು ಈ ಅನಧಿಕೃತ ಶಾಲೆಗಳ ಚಕ್ರವ್ಯೂಹದಲ್ಲಿ ಸಿಲುಕಲಿದ್ದಾರೆ. ಆದ್ದರಿಂದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕುಂಟು ನೆಪ ಹೇಳದೆ ತಕ್ಷಣವೇ ಈ 1600 ಕ್ಕೂ ಹೆಚ್ಚು ಅನಧಿಕೃತ ಶಾಲೆಗಳ ಪಟ್ಟಿಯನ್ನು ಸಾರ್ವಜನಿಕಗೊಳಿಸಬೇಕು ಮತ್ತು ಆ ಎಲ್ಲಾ ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅಬ್ದುಲ್ ಮಜೀದ್ ಅವರು ಸರ್ಕಾರ ಮತ್ತು ಶಿಕ್ಷಣ ಇಲಾಖೆಯನ್ನು ತಮ್ಮ ಪ್ರಕಟಣೆಯ ಮೂಲಕ ಒತ್ತಾಯಿಸಿದ್ದಾರೆ.

Join Whatsapp