ರಾಮನಗರ: ಟೆಂಟ್ ನಡೆಸುತ್ತಿದ್ದವರು ಇಂದು 1,450 ಕೋಟಿ ಒಡೆಯರು. ಅಧಿಕೃತ ಆಸ್ತಿಯೇ ಇಷ್ಟು. ಅನಧಿಕೃತ ಅದೆಷ್ಟಿದೆಯೋ ಎಂದು ಡಿಕೆ ಬ್ರದರ್ಸ್ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಹೆಚ್‌ಡಿಕೆ ಅವಧಿಯಲ್ಲಿ ರಾಮನಗರ ಅಭಿವೃದ್ಧಿ ಆಗಿಲ್ಲ. ಕುಡಿಯುವ ನೀರಿನ ಯೋಜನೆಗೆ ಕಾಂಗ್ರೆಸ್ ಕೊಡುಗೆ ನೀಡಿದೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ರಾಮನಗರದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿಕೆ ಬ್ರದರ್ಸ್ ದೊಡ್ಡಾಲಹಳ್ಳಿ ಹಾಗೂ ಸಾತನೂರಿನಲ್ಲಿ ಟೆಂಟ್ ನಡೆಸುತ್ತಿದ್ದರು. ಈಗ 1,450 ಕೋಟಿ ಅಧಿಕೃತ ಆಸ್ತಿ. ಅನಧಿಕೃತ ಎಷ್ಟಿದೆಯೋ? ಇದೇ ಅವರ ಅಭಿವೃದ್ಧಿ. ಇಂತಹ ಅಭಿವೃದ್ಧಿ ನಾನು ಮಾಡಬೇಕಿತ್ತಾ? ಈ ತಾಲೂಕು ಹಾಗೂ ಜಿಲ್ಲೆಯ ಜನ ಇದನ್ನ ಅರ್ಥ ಮಾಡಿಕೊಳ್ಳಬೇಕು ಎಂದು ಹರಿಹಾಯ್ದರು
ದೇವೇಗೌಡರ ಕಾಲದಲ್ಲೇ ರಾಮನಗರ ಹಾಗೂ ಚನ್ನಪಟ್ಟಣಕ್ಕೆ ಕುಡಿಯುವ ನೀರು ತರಲಾಯಿತು. ರಾಮನಗರ ಬೆಳೆಯುತ್ತಿರುವ ನಿಟ್ಟಿನಲ್ಲಿ ನಾನು ಹಣಕಾಸು ಮಂತ್ರಿಯಾದಾಗ ಹೆಚ್ಚುವರಿ ಯೋಜನೆ ಮಾಡಿದ್ದೇವೆ. ಆದರೆ 2013ರಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಕುಡಿಯುವ ನೀರಿನ ಯೋಜನೆಗೆ ಇವರ ಕೊಡುಗೆ ಏನು? ಆಗ ಯಾಕೆ ನೀರು ತರಲಿಲ್ಲ? ಆ ಸಮಯದಲ್ಲಿ ಬಂಡೆ ಒಡೆದುಕೊಂಡು ಕೂತಿದ್ರಾ? ಅಥವಾ ಸಾಕ್ಷಿ ಗುಡ್ಡೆಗಳನ್ನು ರೆಡಿ ಮಾಡಿಕೊಂಡು ಕೂತಿದ್ದರಾ? ಅಭಿವೃದ್ಧಿ ಮಾಡಿರೋದರ ಬಗ್ಗೆ ಸಾಕ್ಷಿ ಗುಡ್ಡೆ ಕೇಳುತ್ತಿರಲಿಲ್ಲ. ಕುಮಾರಸ್ವಾಮಿಯ ಅಭಿವೃದ್ಧಿ ಸಾಕ್ಷಿಗುಡ್ಡೆ ಎಲ್ಲಾ ಕಡೆ ಇದೆ. ನಿಮ್ಮದು ಏನಿದೆ? ಕಲ್ಲು ಬಂಡೆಗಳನ್ನು ಒಡೆದು ಚೀನಾಗೆ ಸಾಗಿಸಿದ್ದೇ ಇವರ ಸಾಕ್ಷಿಗುಡ್ಡೆ. ಮೊದಲು ಲಘುವಾಗಿ ಮಾತನಾಡುವುದನ್ನು ಬಿಡಲಿ. ಅನಿತಾ ಕುಮಾರಸ್ವಾಮಿ ತಂದಿರೋ ಅನುದಾನದಲ್ಲಿ ಕೆಲಸ ಮಾಡುತ್ತಿರುವವರು ಇವರು. ಒಂದು ರೂಪಾಯಿ ಬಿಡುಗಡೆ ಮಾಡಿಸಿ ಕೆಲಸ ಮಾಡಿದ್ದಾರಾ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.