ಮಂಗಳೂರು: ಉಡುಪಿ, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿಈಡಿಗ ಅಥವಾ ಬಿಲ್ಲವ ಸಮುದಾಯದವರ ಸಂಖ್ಯೆ ಹೆಚ್ಚಿದ್ದು, ಈ ಜಿಲ್ಲೆಗಳ ಒಟ್ಟು ಕನಿಷ್ಠ 14 ವಿಧಾನಸಭಾ ಕ್ಷೇತ್ರಗಳಲ್ಲಿ ಈ ಸಮು ದಾಯದವರಿಗೇ ಟಿಕೆಟ್ ನೀಡಬೇಕು ಎಂದು ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿ ಒತ್ತಾಯಿಸಿದರು.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗದಲ್ಲಿ ತಲಾ 4, ಉಡುಪಿಯಲ್ಲಿ 3 ಹಾಗೂ ಉತ್ತರ ಕನ್ನಡದಲ್ಲಿ ಎರಡು ಕ್ಷೇತ್ರಗಳಲ್ಲಿ ನಮ್ಮ ಸಮುದಾಯದ ವರಿಗೆ ಟಿಕೆಟ್ ನೀಡಬೇಕು ಎಂದು ನಾವು ಎರಡೂ ರಾಷ್ಟ್ರೀಯ ಪಕ್ಷಗಳನ್ನು ಒತ್ತಾಯಿಸುತ್ತೇವೆ. ಟಿಕೆಟ್ ಕೊಡದಿದ್ದರೆ ಏನು ಮಾಡಬೇಕು ಎಂಬ ಬಗ್ಗೆಯೂ ಈಗಾಗಲೇ ಚಿಂತನೆ ಆರಂಭಿಸಿದ್ದೇವೆ. ಅದಕ್ಕೆ ರಾಜಕೀಯ ಪಕ್ಷಗಳು ಅವಕಾಶ ಕೊಡಬಾರದು’ ಎಂದು ಎಚ್ಚರಿಕೆ ನೀಡಿದರು.
‘ನಮ್ಮ ಸಮುದಾಯದ ಅನೇಕ ಶಾಸಕರು, ಸಚಿವರು ಈಗಾಗಲೇ ಇದ್ದಾರೆ. ಆದರೆ, ಅವರು ಸಮುದಾಯದ ಒಟ್ಟಾರೆ ಅಭಿವೃದ್ಧಿಗೆ ಶ್ರಮಿಸಿಲ್ಲ. ಬದಲಿಗೆ ಒಡೆದು ಅಳುವ ಕೆಲಸದಲ್ಲಿ ತೊಡಗಿದ್ದಾರೆ. ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದು, ನಾರಾಯಣ ಗುರು ಅಭಿವೃದ್ಧಿ ನಿಗಮ ಸ್ಥಾಪನೆ ಹಾಗೂ ಶೇಂದಿ ಇಳಿಸಿ ಮಾರಾಟ ಮಾಡುವ ಕುಲಕಸುಬನ್ನು ಮುಂದುವರಿಸಲು ಅವಕಾಶ ನೀಡುವ ವಿಚಾರದಲ್ಲಿ ಇವರೆಲ್ಲರೂ ಮೌನವಾಗಿದ್ದಾರೆ. ಇದನ್ನು ಸಹಿಸಿಕೊಂಡಿರಲು ಸಮುದಾಯ ಸಿದ್ಧವಿಲ್ಲ. ಈ ಮೂರು ಬೇಡಿಕೆಗಳೂ ಸೇರಿದಂತೆ ಒಟ್ಟು 10 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜನವರಿ 6ರಿಂದ ಕುದ್ರೋಳಿಯ ಗೋಕರ್ಣನಾಥ ಕ್ಷೇತ್ರ ದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ’ ಎಂದು ಅವರು ತಿಳಿಸಿದರು.