ಪ್ರತಾಪಗಢ : ಮದುವೆ ಕಾರ್ಯವೊಂದರಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದ ವಾಹನವೊಂದು ನಿಂತಿದ್ದ ಟ್ರಕ್ ಒಂದಕ್ಕೆ ಢಿಕ್ಕಿ ಹೊಡೆದ ಪರಿಣಾಮ 6 ಮಕ್ಕಳೂ ಸೇರಿ 14 ಮಂದಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಪ್ರತಾಪಗಢದಲ್ಲಿ ಈ ದುರ್ಘಟನೆ ಸಂಭವಿಸಿದೆ. ಪ್ರಯಾಗ್ ರಾಜ್-ಲಕ್ನೋ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೊಲೆರೊ ವಾಹನ ಒಂದು ಟ್ರಕ್‌ಗೆ ಢಿಕ್ಕಿ ಹೊಡೆದಿದೆ. ಇದರಿಂದ ಬೊಲೆರೊದಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ.
ಗುರುವಾರ ರಾತ್ರಿ 11.45ರ ಸುಮಾರಿಗೆ ಮಾಣಿಕಪುರ ಪೊಲೀಸ್ ಠಾಣೆ ವ್ಯಾಪ್ತಿಯ ದೇಶರಾಜ್ ಇನಾರಾ ಗ್ರಾಮದ ಸಮೀಪ ಮಹೀಂದ್ರಾ ಬೊಲೆರೊ ವಾಹನ ಮತ್ತು ನಿಲ್ಲಿಸಿದ್ದ ಟ್ರಕ್ ನಡುವೆ ಢಿಕ್ಕಿ ಸಂಭವಿಸಿದೆ. ಅಪಘಾತದ ರಭಸಕ್ಕೆ ಬೊಲೆರೊದ ಮುಂಭಾಗದಲ್ಲಿದ್ದ ಪ್ರಯಾಣಿಕರು ಹಿಂಬದಿಯಿಂದ ಹೊರಗೆ ಬಿದ್ದಿದ್ದಾರೆ.
ಟೈರ್ ಪಂಕ್ಚರ್ ಆಗಿದ್ದ ಕಾರಣ ದಾರಿಯ ಬದಿಯಲ್ಲಿ ಟ್ರಕ್ ಅನ್ನು ನಿಲ್ಲಿಸಲಾಗಿತ್ತು. ವೇಗವಾಗಿ ಬಂದ ಬೊಲೆರೊ ವಾಹನ ನಿಂತಿದ್ದ ಟ್ರಕ್ ಗೆ ಹಿಂದಿನಿಂದ ಗುದ್ದಿದೆ. ವಾಹನದ ಅರ್ಧದಷ್ಟು ಭಾಗ ಟ್ರಕ್ ಅಡಿ ಸಿಲುಕಿ ನಜ್ಜುಗುಜ್ಜಾಗಿದೆ. ಬಳಿಕ ಅದನ್ನು ಪೊಲೀಸರು ಹೊರ ತೆಗೆದಿದ್ದಾರೆ ಎಂದು ಪ್ರತಾಪಗಢ ಎಸ್‌ಪಿ ಅನುರಾಗ್ ಆರ್ಯ ತಿಳಿಸಿದ್ದಾರೆ.
ಮದುವೆ ಸಮಾರಂಭವೊಂದಲ್ಲಿ ಪಾಲ್ಗೊಂಡಿದ್ದ ದುರ್ದೈವಿಗಳು ಗೊಂಡಾದಲ್ಲಿನ ತಮ್ಮ ಹಳ್ಳಿಗೆ ವಾಪಸಾಗುತ್ತಿದ್ದರು.