ಬೆಂಗಳೂರು: ಸೆ.7ರಂದು ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯ ವಿವೇಕಾನಂದ ಪ್ರತಿಮೆ, ತಿರುವಳ್ಳುವರ್ ಪ್ರತಿಮೆ, ಮಹಾತ್ಮಾ ಗಾಂಧಿ ಮಂಟಪ, ಕಾಮರಾಜ್ ಅವರ ಪ್ರತಿಮೆಗೆ ಗೌರವ ಸಲ್ಲಿಸಿ ಮಧ್ಯಾಹ್ನ ಪಾದಯಾತ್ರೆ ಆರಂಭವಾಗಲಿದೆ. 19 ದಿನಗಳ ಕಾಲ ಕೇರಳ, 4 ದಿನಗಳ ಕಾಲ ತಮಿಳುನಾಡಿನಲ್ಲಿ ಪಾದಯಾತ್ರೆ ಮಾಡಲಾಗುವುದು. ಸೆ.29 ಅಥವಾ 30ರಂದು ಗುಂಡ್ಲುಪೇಟೆ ಮೂಲಕ ಕರ್ನಾಟಕ ಪ್ರವೇಶಿಸಲಿದ್ದಾರೆ ಎಂದು ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರ ಜತೆ 125 ಮಂದಿ ಭಾರತ ಯಾತ್ರಿಗಳು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 12 ರಾಜ್ಯಗಳು ಹಾಗೂ 2 ಕೇಂದ್ರಾಡಳಿತ ಪ್ರದೇಶಗಳಲ್ಲಿ 3500 ಕಿ.ಮೀ ಹೆಜ್ಜೆ ಹಾಕಲಿದ್ದಾರೆ ಎಂದರು.
ಕರ್ನಾಟಕ ರಾಜ್ಯದ 125 ಕಾಂಗ್ರೆಸ್ ನಾಯಕರು ರಾಜ್ಯ ಪಾದಯಾತ್ರಿಗಳಾಗಿ ರಾಜ್ಯದ 511 ಕಿ.ಮೀ ನಡೆಯಲಿದ್ದಾರೆ. ಇನ್ನು ನೆರೆ ರಾಜ್ಯದ 125 ನಾಯಕರಿಗೆ ಅತಿಥಿ ಯಾತ್ರಿಗಳಾಗಿ ಅವಕಾಶ ನೀಡಲಾಗುವುದು. ನಿತ್ಯ ಬೆಳಗ್ಗೆ 7 ಗಂಟೆಗೆ ಸ್ಥಳೀಯವಾಗಿ ಪಾದಯಾತ್ರೆ ಆರಂಭವಾಗಲಿದೆ. 11 ಗಂಟೆವರೆಗೂ ಹಳ್ಳಿ ಹಾಗೂ ಗ್ರಾಮಸ್ಥರ ಜತೆ ಪಾದಯಾತ್ರೆ. ನಂತರ 11ರಿಂದ ಮಧ್ಯಾಹ 2 ಗಂಟೆವರೆಗೂ ಸ್ಥಳೀಯ ಸಾಹಿತಿಗಳು, ಕಲಾವಿದರು, ವಕೀಲರು, ಶಿಕ್ಷಕರು, ವಿದ್ಯಾರ್ಥಿಗಳು, ಯುವಕರು ಹಾಗೂ ಮಹಿಳೆಯರ ಜತೆ ಸಂಭಾಷಣೆ ನಡೆಸುತ್ತಾರೆ. ನಂತರ ಸುಮಾರು 20 ಸಾವಿರ ಜನ ಸ್ಥಳೀಯರು ರಾಹುಲ್ ಗಾಂಧಿ ಅವರ ಜತೆ ಹೆಜ್ಜೆ ಹಾಕಲಿದ್ದಾರೆ ಎಂದು ತಿಳಿಸಿದರು.
ಚಾಮರಾಜನಗರ, ಮೈಸೂರು, ಮಂಡ್ಯ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ರಾಯಚೂರುವರೆಗೂ ಪಾದಯಾತ್ರೆ ಸಾಗಿ ತೆಲಂಗಾಣಕ್ಕೆ ಪ್ರವೇಶಿಸುವುದು ಎಂದರು.