ಬೆಂಗಳೂರು: ಸರ್ಕಾರದ ಅಧೀನದಲ್ಲಿರುವ 108-ಆರೋಗ್ಯ ಕವಚ ಯೋಜನೆಯಡಿ ಕಾರ್ಯಾಚರಿಸುವ ಮತ್ತು ಜಿ.ವಿ.ಕೆ ಸಂಸ್ಥೆಗೆ ಸೇರಿದ ಆ್ಯಂಬುಲೆನ್ಸ್ ಸಿಬ್ಬಂದಿಗೆ ಕಳೆದ ಎರಡು ತಿಂಗಳಿನಿಂದ ಸಂಬಳ ನೀಡಿಲ್ಲ ಎಂಬ ಕಾರಣಕ್ಕೆ ಸಾಮೂಹಿಕ ರಜೆಯಲ್ಲಿ ತೆರಳಲು ನೌಕರರು ತೀರ್ಮಾನಿಸಿದ್ದಾರೆ. ಇಂದಿನಿಂದಲೇ ರಜೆ ಹಾಕಲು ತೀರ್ಮಾನಿಸಿದ್ದರಾದರೂ ಹಬ್ಬದ ಹಿನ್ನೆಲೆಯಲ್ಲಿ ತಮ್ಮ ನಿರ್ಧಾರವನ್ನು ಮುಂದೂಡಿದ್ದಾರೆ ಎಂದು ಹೇಳಲಾಗಿದೆ.
ಸದ್ಯ ಈ ಸಂಸ್ಥೆಯಲ್ಲಿ 3000 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಇವರೆಲ್ಲರೂ ಸಾಮೂಹಿಕ ರಜೆ ಹಾಕಿದಲ್ಲಿ ಜನರ ಆರೋಗ್ಯ ಸಮಸ್ಯೆ ಗಂಭೀರ ಸ್ವರೂಪ ಪಡೆಯುವ ಸಾಧ್ಯತೆಯಿದೆ.
ಈ ಸಂಬಂಧ ಸಂಬಳ ಕೊಡದ ಜಿವಿಕೆ ಸಂಸ್ಥೆಯ ವಿರುದ್ಧ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದು, ಈ ಸಮಸ್ಯೆಯನ್ನು ಬರೆಹರಿಸುವ ನಿಟ್ಟಿನಲ್ಲಿ ಸರ್ಕಾರ ತಕ್ಷಣ ಮಧ್ಯ ಪ್ರವೇಶಿಸುವಂತೆ ಒತ್ತಾಯಿಸಿದ್ದಾರೆ. ಪ್ರಸಕ್ತ ಸಂಬಳ ನೀಡುವ ಬಗ್ಗೆ ಆರೋಗ್ಯ ಇಲಾಖೆಯ ಉಪ ನಿರ್ದೇಶಕ, ಡಾ. ನಾರಾಯಣ ಅವರು ಭರವಸೆ ನೀಡಿದ್ದು, ರಜೆ ಇರುವುದರಿಂದ ಕಟ್ಟುನಿಟ್ಟಿನ ಆದೇಶ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
108 ಆ್ಯಂಬುಲೆನ್ಸ್ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಪರಮಶಿವ ಪ್ರತಿಕ್ರಿಯಿಸುತ್ತಾ, ಆರೋಗ್ಯ ಕವಚ – 108 ಸೇವೆಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಕಳೆದ 2 ತಿಂಗಳನಿಂದ ಸಂಬಳ ಸಿಕ್ಕಿಲ್ಲ. ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರು ಇದನ್ನು ಬಗೆಹರಿಸುವ ನಿಟ್ಟಿನಲ್ಲಿ ಎದುರು ಬರಬೇಕು. ಇದೀಗ ನಾಡಹಬ್ಬ ದಸರಾ ನಡೆಯುತ್ತಿದ್ದು, ಇಡೀ ನಾಡು ಹಬ್ಬದ ಆಚರಣೆಯಲ್ಲಿರುವಾಗ ಸಿಬ್ಬಂದಿಯು ಸಂಬಳ ಸಿಗದೇ ಕಷ್ಟದಲ್ಲಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಜಿವಿಕೆ ಸಂಸ್ಥೆಗೆ ಹಣಕಾಸು ಬಿಡುಗಡೆ ಮಾಡಿದೆ. ಆದರೆ ಸಂಸ್ಥೆಯ ಭ್ರಷ್ಟಾಚಾರದಿಂದಾಗಿ ಇನ್ನೂ ನೌಕರರಿಗೆ ಸಂಬಳ ಸಿಕ್ಕಿಲ್ಲ. ಈ ಬಗ್ಗೆ ಸರ್ಕಾರ ಸಮಗ್ರ ತನಿಖೆ ನಡೆಸಿ, ಸಂಸ್ಥೆಯ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಬೇಕು. ಸಂಸ್ಥೆಯ ಪ್ರತಿಯೊಬ್ಬ ಸಿಬ್ಬಂದಿಗೂ ಸಂಬಳ ಸಿಗುವಂತಾಗಬೇಕು. ತಪ್ಪಿದ್ದಲ್ಲಿ ಹೋರಾಟ ಅನಿವಾರ್ಯವಾಗಲಿದೆ. ಶೀಘ್ರದಲ್ಲಿ ಸಿಬ್ಬಂದಿಗೆ ಸಂಬಳವನ್ನು ಕೊಡಿಸುವ ಕಾರ್ಯ ಮಾಡತ್ತೇವೆ ಎಂದು 108 ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಆಗ್ರಹಿಸಿದ್ದಾರೆ.