ಕೊಲ್ಕತಾ : 2018ರ ಟ್ರಿಬ್ಯೂನಲ್ ನಲ್ಲಿ ಪೌರತ್ವ ಸಾಬೀತು ಪಡಿಸಲಾಗದೆ ವಿದೇಶಿ ಎಂದು ಘೋಷಿಸಲ್ಪಟ್ಟಿದ್ದ ಅಸ್ಸಾಂನ 104ರ ಹರೆಯದ ಚಂದ್ರಾಧರ್ ದಾಸ್ ನಿಧನರಾಗಿದ್ದಾರೆ. ತನ್ನ ಪೌರತ್ವವನ್ನು ಕೊನೆಗೂ ಸಾಬೀತು ಪಡಿಸಲಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಕ್ಯಾಚಾರ್ ಜಿಲ್ಲೆಯ ಆಮ್ರಾಘಟ್ ಪ್ರದೇಶದ ತನ್ನ ನಿವಾಸದಲ್ಲಿ ಚಂದ್ರಾಧರ್ ಭಾನುವಾರ ರಾತ್ರಿ ನಿಧನರಾಗಿದ್ದಾರೆ. ಅವರಿಗೆ ಹೃದಯಾಘಾತವಾಗಿತ್ತು ಎಂದು ವರದಿಗಳು ತಿಳಿಸಿವೆ.
ತನ್ನ ಪೌರತ್ವ ಸಾಬೀತುಪಡಿಸಲು 2018ರ ಜನವರಿಯಲ್ಲಿ ಟ್ರಿಬ್ಯೂನಲ್ ಮುಂದೆ ಹಾಜರಾಗಲು ದಾಸ್ ವಿಫಲರಾಗಿದ್ದರು. ಮಾರ್ಚ್ ನಲ್ಲಿ ಅವರನ್ನು ಸಿಲ್ಚಾರ್ ಜೈಲಿಗೆ ಕಳುಹಿಸಲಾಗಿತ್ತು. ಆದರೆ, ಅವರ ಬಂಧನದ ವಿರುದ್ಧ ಸಾರ್ವಜನಿಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ, ಜೂನ್ ನಲ್ಲಿ ಅವರನ್ನು ಬಿಡುಗಡೆ ಮಾಡಲಾಗಿತ್ತು.
ತನ್ನ ಪೌರತ್ವ ಸ್ಥಾನಮಾನದಿಂದಾಗಿ, ಅವರ ಮೂವರು ಮಕ್ಕಳು ಮತ್ತು ಮೊಮ್ಮಕ್ಕಳು ಕೂಡ ಎನ್ ಆರ್ ಸಿಯಲ್ಲಿ ಹೊರಗಿಡಲ್ಪಟ್ಟಿದ್ದಾರೆ.
ತನ್ನ ಭಾರತೀಯ ಪೌರತ್ವ ಸಾಬೀತುಪಡಿಸಿ ಸಾಯಬೇಕು ಎಂದು ಅವರು ಬಯಸಿದ್ದರು. ನಾವು ಅದಕ್ಕಾಗಿ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದೇವೆ. ಕೋರ್ಟ್ ನಿಂದ ಕೊರ್ಟ್ ಗೆ, ನ್ಯಾಯವಾದಿಗಳಿಂದ ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ಎಲ್ಲರೆಡೆಗೂ ನಾವು ಓಡಾಡಿದ್ದೇವೆ. ಎಲ್ಲಾ ದಾಖಲೆಗಳನ್ನೂ ಸಲ್ಲಿಸಿದ್ದೇವೆ. ಕಾನೂನಿನ ದೃಷ್ಟಿಯಲ್ಲಿ ನಾವು ವಿದೇಶಿಯರೇ ಆಗಿದ್ದೇವೆ. ಪೌರತ್ವ ತಿದ್ದುಪಡಿ ಕಾಯ್ದೆಗೂ ನಮಗೂ ಏನೂ ಸಂಬಂಧವಿಲ್ಲ. ಹೊಸ ಕಾನೂನು ತಮ್ಮನ್ನು ಭಾರತೀಯರನ್ನಾಗಿಸುತ್ತದೆ ಎಂಬ ಭರವಸೆ ತಮ್ಮ ತಂದೆಗಿತ್ತು ಎಂದು ಚಂದ್ರಾಧರ್ ದಾಸ್ ಅವರ ಮಗಳು ನ್ಯೂತಿ ದಾಸ್ ಹೇಳಿದ್ದಾರೆ.
1955ರಲ್ಲಿ ಪಾಕಿಸ್ತಾನ ವಿಭಜನೆಯ ಬಳಿಕ ದಾಸ್ ಬಾಂಗ್ಲಾದಿಂದ ಭಾರತಕ್ಕೆ ಬಂದಿದ್ದರು. ಅವರಿಗೆ ತ್ರಿಪುರಾದಲ್ಲಿ ನಿರಾಶ್ರಿತ ದೃಢೀಕರಣ ಪತ್ರವೂ ದೊರೆತಿತ್ತು. ಆದರೆ, ಅಧಿಕಾರಿಗಳು ಅದನ್ನು ಪರಿಶೀಲಿಸಿಲ್ಲ. ಆದಾಗ್ಯೂ, ಅಸ್ಸಾಂನಲ್ಲಿ 1971ಕ್ಕಿಂತಲೂ ಮೊದಲಿನಿಂದಲೂ ವಾಸಿಸುವವರನ್ನು ಭಾರತೀಯ ಪ್ರಜೆಗಳೆಂದು ಪರಿಗಣಿಸಬೇಕಾಗಿದೆ.
2019, ಆ.31ರಂದು ಪ್ರಕಟವಾದ ಪೌರರ ಅಂಕಿಅಂಶಗಳ ಅಂತಿಮ ಪಟ್ಟಿಯಲ್ಲಿ 3.3 ಕೊಟಿ ಜನಸಂಖ್ಯೆಯಲ್ಲಿ 19 ಲಕ್ಷ ಮಂಡಿಯ ಹೆಸರು ಕೈಬಿಡಲಾಗಿತ್ತು. ಅಸ್ಸಾಂನ ಜನಸಂಖ್ಯೆ ಶೇ.6ರಷ್ಟು ಮಂದಿಯನ್ನು ಈ ಪಟ್ಟಿಯಿಂದ ಕೈಬಿಡಲಾಗಿದೆ.