► ಮೇ 5ರಿಂದ 13ರ ವರೆಗೂ ಪ್ರಯಾಣಿಕರನ್ನು ಕಾಡಲಿದೆ ಬಸ್ಗಳ ಕೊರತೆ
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಕಾರ್ಯಕ್ಕೆ ಬೇಕಾದ ಬಸ್ಗಳ ವ್ಯವಸ್ಥೆಗೆ ಚುನಾವಣಾ ಅಧಿಕಾರಿಗಳು ಈಗಾಗಲೇ ಬುಕಿಂಗ್ ಮಾಡಿಕೊಳ್ಳುತ್ತಿದ್ದು, ಈಗಾಗಲೇ ರಾಜ್ಯಾದ್ಯಂತ 10 ಸಾವಿರ ಸರ್ಕಾರಿ ಬಸ್ಸುಗಳನ್ನು ಬುಕ್ಕಿಂಗ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಹೀಗಾಗಿ ಬಸ್ ಕೊರತೆ ಉಂಟಾದಲ್ಲಿ ಪ್ರಯಾಣಿಕರ ಸಂಚಾರಕ್ಕೂ ಬಿಸಿ ತಟ್ಟಲಿದೆ.
ಚುನಾವಣಾ ಅಧಿಕಾರಿಗಳು ಚುನಾವಣೆಗೆ ಬೇಕಾದ ಸಕಲ ಸಿದ್ದತೆಗಳನ್ನ ಮಾಡಿಕೊಳ್ಳುತ್ತಿದ್ದು, ಎಲೆಕ್ಷನ್ ಸಿದ್ದತೆಗೆ ಬೇಕಾದ ಸಾರಿಗೆ ವ್ಯವಸ್ಥೆಗೆ ರಾಜ್ಯಾದ್ಯಂತ ಅಂದಾಜು 10 ಸಾವಿರ ಬಿಎಂಟಿಸಿ, ಕೆಎಸ್ಆರ್ಟಿಸಿ ಹಾಗೂ ಆರ್ಟಿಒ ವಾಹನಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ.
ಈ ಬಾರಿ ಮೇ 5 ರಿಂದ ಮೇ 13 ರ ವರೆಗೂ ಚುನಾವಣಾ ಕೆಲಸಕ್ಕೆ ಬಸ್ಸುಗಳ ಅವಶ್ಯಕತೆ ಇರುತ್ತದೆ. ಹೀಗಾಗಿ ಚುನಾವಣಾ ಅಧಿಕಾರಿಗಳು ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ಬಸ್ಸುಗಳನ್ನ ಬುಕಿಂಗ್ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಸರ್ಕಾರಿ ಬಸ್ಸುಗಳನ್ನು ಪೊಲೀಸ್ ಇಲಾಖೆ, ಬಿಬಿಎಂಪಿ, ಆರ್ಟಿಒ, ಸಾರಿಗೆ ಇಲಾಖೆಗಳ ಸಿಬ್ಬಂದಿಗೆ ಪಿಕಪ್-ಡ್ರಾಪ್ ಹಾಗೂ ಹಲವು ಚುನಾವಣಾ ಕೆಲಸಗಳ ನಿಮಿತ್ತ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸದ್ಯ ಈ ಬಸ್ಸುಗಳನ್ನ ಮೇ 5 ರಿಂದ ಮೇ 13 ರವರೆಗೂ ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದ್ದು, ಸಾರ್ವಜನಿಕರಿಗೆ ಬಸ್ಸುಗಳ ಕೊರತೆಯಾಗುವ ಸಾಧ್ಯತೆಗಳಿವೆ.