ಮಡಿಕೇರಿ: ಜಾತ್ಯಾತೀತ ಜನತಾದಳ(ಜೆಡಿಎಸ್) ಪಕ್ಷದ ಕೊಡಗು ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿ ಜಾಸೀರ್ ಮೂರ್ನಾಡು ಆಯ್ಕೆಯಾಗಿದ್ದಾರೆ.
ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಜಾಸೀರ್ ಮೂರ್ನಾಡು ಅವರಿಗೆ ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನ ಒಲಿದಿದ್ದು, ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಮತಗಳನ್ನು ಸೆಳೆಯಲು ಪಕ್ಷವು ಈ ನಿರ್ಧಾರವನ್ನು ಕೈಗೊಂಡಿದೆ ಎಂದೇ ಹೇಳಲಾಗುತ್ತಿದೆ.
ಈಗಾಗಲೇ ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಬಿರುಸುಗೊಳ್ಳುತ್ತಿದೆ.
ಅಭ್ಯರ್ಥಿಗಳು ಅಬ್ಬರದ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.
ಒಂದೆಡೆ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರದಲ್ಲಿ ನಿರ್ಣಾಯಕ ಮತಗಳಾದ ಅಲ್ಪಸಂಖ್ಯಾತರನ್ನು ಸೆಳೆಯಲು ಎಲ್ಲಾ ಪಕ್ಷಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.
ಏತನ್ಮಧ್ಯೆ ಕೊಡಗು ಜಿಲ್ಲಾ ಜೆಡಿಎಸ್ ಪಕ್ಷವು ಯುವಕ ಹಾಗೂ ಜಿಲ್ಲಾ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಜಾಸೀರ್ ಮೂರ್ನಾಡು ಅವರಿಗೆ ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನವನ್ನು ನೀಡಿ, ಜಿಲ್ಲೆಯಲ್ಲಿ ಯುವ ಜನತೆಯ ಹಾಗೂ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಮತಗಳನ್ನು ಸೆಳೆಯಲು ಮುಂದಾಗಿದ್ದಾರೆ. ಕೊಡಗು ಜಿಲ್ಲೆಯ ಮಡಿಕೇರಿ ಕ್ಷೇತ್ರದಲ್ಲಿ 32 ಸಾವಿರಕ್ಕೂ ಅಧಿಕ ಹಾಗೂ ವಿರಾಜಪೇಟೆ ಕ್ಷೇತ್ರದಿಂದ 47 ಸಾವಿರಕ್ಕೂ ಅಧಿಕ ಅಲ್ಪಸಂಖ್ಯಾತ ಮತದಾರರು ಇದ್ದಾರೆ.
ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮತಗಳನ್ನು ಜೆಡಿಎಸ್ ಪರವಾಗಿ ಚಲಾವಣೆಗೊಂಡಲ್ಲಿ, ಸುಲಭವಾಗಿ ಗೆಲುವು ಸಾಧಿಸಬಹುದೆಂದ ಲೆಕ್ಕಾಚಾರದಲ್ಲಿ ಉತ್ಸಾಹಿ ಯುವಕ ಹಾಗೂ ಸಂಘಟನಾ ಚತುರ ಜಾಸೀರ್ ಮೂರ್ನಾಡು ಅವರಿಗೆ ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತ ಅಧ್ಯಕ್ಷ ಸ್ಥಾನದ ಪಟ್ಟ ನೀಡಲಾಗಿದೆ ಎಂದು, ಜೆಡಿಎಸ್ ಪಕ್ಷದ ವಿಶ್ವಾಸನೀಯ ಮೂಲಗಳಿಂದ ತಿಳಿದು ಬಂದಿದೆ.
ಕೊಡಗು ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿದ್ದ ಇಸ್ಹಾಕ್ ಖಾನ್ ರವರು ಜಿಲ್ಲಾ ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿ ನೇಮಕವಾಗಿರುವುದರಿಂದ, ತೆರವಾದ ಜೆಡಿಎಸ್ ಅಲ್ಪಸಂಖ್ಯಾತ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಕೊಡಗಿನ ಯುವ ನಾಯಕ ಹಾಗೂ ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಾಸೀರ್ ಅವರನ್ನು ಆಯ್ಕೆ ಮಾಡಲಾಗಿದೆ.
ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ ಗಣೇಶ್, ಮಡಿಕೇರಿ ಕ್ಷೇತ್ರದ ಅಭ್ಯರ್ಥಿ ನಾಪಂಡ ಮುತ್ತಪ್ಪ, ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಶರೀಫ್ ಸುಂಟ್ಟಿಕೊಪ್ಪ, ಕರೀಮ್ ಸುಂಟ್ಟಿಕೊಪ್ಪ ಅವರುಗಳು , ಜೆಡಿಎಸ್ ಧ್ವಜ ನೀಡುವ ಮೂಲಕ ಜಾಸೀರ್ ಅವರಿಗೆ ಅಧಿಕಾರ ನೀಡಿದ್ದಾರೆ.