ಹಾಥರಸ್ ದಲಿತ ಮಹಿಳೆಯ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ಎಫ್.ಐ.ಆರ್ ಮತ್ತು ತನಿಖೆಯ ಹೊಣೆ ವಹಿಸಿಕೊಳ್ಳುವ ಕುರಿತಾದ ಪತ್ರಿಕಾ ಪ್ರಕಟನೆಯನ್ನು ಪೋಸ್ಟ್ ಮಾಡಿದ ಗಂಟೆಗೊಳಗಾಗಿ ಸಿಬಿಐ ಅದನ್ನು ತನ್ನ ವೆಬ್ ಸೈಟ್ ನಿಂದ ತೆಗೆದುಹಾಕಿದೆ.
ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಪ್ರಕರಣದ ತನಿಖೆಗಾಗಿ ಅಧಿಕೃತ ಪಡಿಸುವ ಅಧಿಸೂಚನೆಯೊಂದನ್ನು ಹೊರಡಿಸಿದ ಬಳಿಕ ಸಿಬಿಐ ಈ ಪ್ರಕರಣವನ್ನು ಔಪಚಾರಿಕವಾಗಿ ಕೈಗೆತ್ತಿಕೊಂಡಿತ್ತು ಮತ್ತು ಸೆಕ್ಷನ್ 307 (ಕೊಲೆ ಯತ್ನ) 376 (ಡಿ) (ಸಾಮೂಹಿಕ ಅತ್ಯಾಚಾರ), ಮತ್ತು ಐಪಿಸಿಯ 302 (ಕೊಲೆ) ಮತ್ತು ಎಸ್ಸಿ / ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆ 1989 ರ ಸೆಕ್ಷನ್ 3 (2) (ವಿ) ಅಡಿಯಲ್ಲಿ ರವಿವಾರ ಎಫ್.ಐ.ಆರ್ ದಾಖಲಿಸಿತ್ತು.
ಸಿಬಿಐನ ಗಾಝಿಯಾಬಾದ್ ಘಟಕದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ವು ಈ ಪ್ರಕರಣದಲ್ಲಿ “ಅತ್ಯಾಚಾರ, ಕೊಲೆ ಯತ್ನ, ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ (ಇತರ)” ಶಂಕಿತ ಅಪರಾಧಗಳೆಂದು ಉಲ್ಲೇಖಿಸಿತ್ತು. ಈ ಎಫ್ಐಆರ್ ಮತ್ತು ಪತ್ರಿಕಾ ಪ್ರಕಟನೆಯನ್ನು ಏಜೆನ್ಸಿಯ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿತ್ತು.
ಆದರೆ ನಂತರ ಎಫ್ಐಆರ್ ಅನ್ನು ತೆಗೆದುಹಾಕಲಾಗಿದ್ದು, ಮಧ್ಯಾಹ್ನದ ವೇಳೆ ಹೊಸ ಪ್ರಕಟನೆಯನ್ನು ಪೋಸ್ಟ್ ಮಾಡಲಾಗಿದೆ. “ಉತ್ತರ ಪ್ರದೇಶದ ಹಥ್ರಾಸ್ ಜಿಲ್ಲೆಯ ಚಂಡ್ಪ ಪೊಲೀಸ್ ಠಾಣೆಯಲ್ಲಿ ದಾಖಲಾದ ಅಪರಾಧ ಸಂಖ್ಯೆ 136/2020ರ ಪ್ರಕರಣವನ್ನು ಏಜೆನ್ಸಿಯು ಎತ್ತಿಕೊಂಡಿದ್ದು, ಆರೋಪಿಯ ವಿರುದ್ಧ ಪ್ರಕರಣವನ್ನು ದಾಖಲಿಸಿದೆ. ದೂರುದಾರರ ಪ್ರಕಾರ, ಆರೋಪಿಯು ದಿನಾಂಕ 14-09-2020ರಂದು ರಾಗಿ ಹೊಲದಲ್ಲಿ ದೂರುದಾರನ ಸಹೋದರಿಯ ಕತ್ತು ಹಿಸುಕಲು ಪ್ರಯತ್ನಿಸಿದ್ದ. ಉತ್ತರ ಪ್ರದೇಶ ಸರಕಾರ ಮತ್ತು ನಂತರದಲ್ಲಿ ಭಾರತದ ಸರಕಾದ ಕೋರಿಕೆಯ ಮೇರೆಗೆ ಸಿಬಿಐ ಕೇಸು ದಾಖಲಿಸಿದೆ” ಎಂದು ಹೊಸ ಪ್ರಕಟನೆಯಲ್ಲಿ ಉಲ್ಲೇಖಿಸಲಾಗಿದೆ.