ತಪ್ಪೊಪ್ಪಿಕೊಳ್ಳಲು ಒತ್ತಾಯಿಸಿ ಆರೋಪಿಯ ಖಾಸಗಿ ಅಂಗಗಳಿಗೆ ಪೊಲೀಸರಿಂದ ವಿದ್ಯುತ್ ಶಾಕ್!
Prasthutha: October 12, 2020

ಕಳ್ಳತನ ಪ್ರಕರಣದ ಆರೋಪಿಯೋರ್ವನ ಖಾಸಗಿ ಅಂಗಗಳಿಗೆ ಪೊಲೀಸ್ ಅಧಿಕಾರಿಯೋರ್ವ ವಿದ್ಯುದಾಘಾತ ನೀಡಿದ ಘಟನೆ ಜಾರ್ಖಂಡ್ ನ ಮೆದಿನಿ ನಗರದಲ್ಲಿ ನಡೆದಿದೆ.
ಕಳ್ಳತನ ಪ್ರಕರಣದಲ್ಲಿ ತಪ್ಪೊಪ್ಪಿಗೆ ಪಡೆಯುವುದಕ್ಕಾಗಿ ಆರೋಪಿಗೆ ವಿದ್ಯುದಾಘಾತ ನೀಡಿದ ಪ್ರಕರಣ ಬೆಳಕಿಗೆ ಬರುವುದರೊಂದಿಗೆ ರವಿವಾರದಂದು ಜಾರ್ಖಂಡ್ ನ ಪಲಾಮು ಜಿಲ್ಲೆಯಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ ಎಂದು ಪಿಟಿಐ ವರದಿ ಮಾಡಿದೆ.
ಚೈನ್ಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದೆ. ಠಾಣೆಯ ಎಸ್.ಎಚ್.ಒ ಸುಮಿತ್ ಕುಮಾರ್ ಆರೋಪಿಗೆ ವಿದ್ಯುದಾಘಾತ ನೀಡಿರವುದಾಗಿ ದೂರು ಸ್ವೀಕರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋನುಪುರ್ವ ಗ್ರಾಮದ ರಜನೀಕಾಂತ್ ದುಬೆ (35) ಎಂಬಾತನನ್ನು ಪೊಲೀಸರು ಕಳ್ಳತನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 8 ರಂದು ಬಂಧಿಸಿ, ದೌರ್ಜನ್ಯವೆಸಗಿದ್ದರು.
ಪ್ರಕರಣದ ತಪ್ಪೊಪ್ಪಿಕೊಳ್ಳುವಂತೆ ಎಸ್.ಎಚ್.ಒ ತನಗೆ ಒತ್ತಡ ಹೇರಿದ್ದು, ನಿರಾಕರಿಸಿದ್ದಕ್ಕಾಗಿ ಮರುದಿನ ಬಿಡುಗಡೆಗೊಳಿಸಲಾಯಿತು. ಘಟನೆಯ ಕುರಿತು ಯಾರಿಗಾದರೂ ಹೇಳಿದರೆ ಪರಿಣಾಮವು ನೆಟ್ಟಗಿರದು ಎಂದು ತನಗೆ ಬೆದರಿಕೆ ಹಾಕಲಾಗಿತ್ತು ಎಂದು ರಜನೀಕಾಂತ್ ದುಬೆ ಹೇಳಿದ್ದಾನೆ.
