ಹಥ್ರಾಸ್ ‘ಸಂಚು’ ಪಕರಣ: ಸುಪ್ರೀಂ ಆದೇಶ ಉಲ್ಲಂಘಿಸಿ ಪತ್ರಕರ್ತನನ್ನು ಭೇಟಿಯಾಗಲು ವಕೀಲರಿಗೆ ಅವಕಾಶ ನೀಡದ ಸಿ.ಜೆ.ಎಂ

Prasthutha|

► ಪತ್ರಕರ್ತರ ಸಂಘದ ಪದಾಧಿಕಾರಿಗಳಿಗೂ ಅವಕಾಶ ನಿರಾಕರಣೆ

- Advertisement -

► ಕುಟುಂಬದೊಂದಿಗೆ ದೂರಾವಾಣಿ ಸಂಪರ್ಕಕ್ಕೂ ಅವಕಾಶವಿಲ್ಲ

► ಪ್ರಜಾಪ್ರಭುತ್ವ ಮತ್ತು ಕಾನೂನಿನ ಅಂತ್ಯ: ಕಪ್ಪನ್ ವಕೀಲ

- Advertisement -

ಹೊಸದಿಲ್ಲಿ: ಹಥ್ರಾಸ್ ‘ಸಂಚು’ ಪ್ರಕರಣದಲ್ಲಿ ಬಂಧಿಸಲ್ಪಟ್ಟು ಪ್ರಸ್ತುತ ಮಥುರಾ ಜೈಲಿನಲ್ಲಿರುವ ಮಳಯಾಲ ಪತ್ರಕರ್ತ ಸಿದ್ದೀಕ್ ಕಪ್ಪನ್ ರನ್ನು ಭೇಟಿಯಾಗಲು ಅನುಮತಿ ಕೋರಿ ಕೇರಳ ಕಾರ್ಯನಿರತ ಪತ್ರಕರ್ತರ ಸಂಘ (ಕೆ.ಯು.ಡಬ್ಲ್ಯು.ಜೆ) ಸಲ್ಲಿಸ್ಲಿದ ಮನವಿಯನ್ನು ಮಥುರಾದ ಮುಖ್ಯ ಜ್ಯುಡೀಶಿಯಲ್ ಮ್ಯಾಜಿಸ್ಟ್ರೇಟ್ (ಸಿ.ಜೆ.ಎಂ) ಅಂಜು ರಜಪೂತ್ ತಿರಸ್ಕರಿಸಿದ್ದಾರೆ.

ಸುಪ್ರೀಂ ಕೋರ್ಟ್ ನಲ್ಲಿ ಬಾಕಿಯಿರುವ ಕಪ್ಪನ್ ರ ರಿಟ್ ಅರ್ಜಿಯನ್ನು ತಿದ್ದುವುದಕ್ಕಾಗಿ ಅವರನ್ನು ಭೇಟಿಯಾಗಲು ಅನುಮತಿಸುವಂತೆ ಕೋರಿ ಕಾರ್ಯನಿರತ ಪತ್ರರ್ತರ ಸಂಘದ ಪ್ರಸ್ತುತ ಮತ್ತು ಮಾಜಿ ಪದಾಧಿಕಾರಿಗಳು ಸಿಜೆಎಂ ಮುಂದೆ ಅರ್ಜಿ ಸಲ್ಲಿಸಿದ್ದರು. ಈ ಉದ್ದೇಶಕ್ಕಾಗಿ ಅಡ್ವೊಕೇಟ್ ವಿಲ್ಸ್ ಮ್ಯಾಥ್ಯೂಸ್ ರೊಂದಿಗೆ ಮಥುರಾ ಜೈಲಿನಲ್ಲಿದ್ದರು.

ಕಪ್ಪನ್ ರ 90ರ ಹರೆಯದ ತಾಯಿ ಖತೀಜ ಕುಟ್ಟಿ, ಅವರ ಪತ್ನಿ ರೈಹಾನತ್ ಮತ್ತು ಮಕ್ಕಳು ಅವರ ಬಂಧನದ ಕಾರಣವನ್ನು ತಿಳಿದಿಲ್ಲ ಮತ್ತು ಅವರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸ ಬಯಸುತ್ತಾರೆ. ಈ ಹಿಂದೆ ಅವರೊಂದಿಗೆ ಮಾತನಾಡಲು ಅನುಮತಿಸಲಾಗಿಲ್ಲ. ಕಪ್ಪನ್ ತಾಯಿಯ ಆರೋಗ್ಯ ಪರಿಸ್ಥಿತಿ ಗಂಭೀರವಾಗುತ್ತಿದೆ ಎಂದು ಪತ್ರಕರ್ತರ ಸಂಘವು ಸಿ.ಜೆ.ಎಂ ಗಮನಕ್ಕೆ ತಂದಿತ್ತು.

ಪತ್ರಕರ್ತರ ಸಂಘದ ಮೂವರು ಹಾಲಿ ಮತ್ತು ಮಾಜಿ ಪದಾಧಿಕಾರಿಗಳಾದ ಪಿ.ಕೆ.ಮಣಿಕಂಠನ್, ಪ್ರಶಾಂತ್ ಎಂ ನಾಯರ್ ಮತ್ತು ಅನಿಲ್ ವಿ ಆನಂದ್ ಅಡ್ವೊಕೇಟ್ ಮ್ಯಾಥ್ಯೂಸ್ ರೊಂದಿಗೆ ಕಪ್ಪನ್ ಭೇಟಿ ಮಾಡಲು ಅನುಮತಿಯನ್ನು ನೀಡಬೇಕೆಂದು ಸಿ.ಜೆ.ಎಂ ಮುಂದೆ ಕೋರಿದ್ದರು. ಕಪ್ಪನ್ ಮತ್ತು ಅವರ ಪತ್ನಿ ಹಾಗೂ ತಾಯಿಯನ್ನು ವಾಟ್ಸಪ್ ವೀಡಿಯೊ ಕಾಲ್ ಮೂಲಕ ಸಂಪರ್ಕಿಸಲು ವ್ಯವಸ್ಥೆ ಮಾಡಬೇಕೆಂದೂ ಮನವಿ ಮಾಡಿದ್ದರು. ಸಿಜೆಎಂ ಈ ಮನವಿಯನ್ನು ನಿರಾಕರಿಸಿದ್ದಾರೆ.

ಮಾಧ್ಯಮದಲ್ಲಿ 10 ವರ್ಷಗಳ ಅನುಭವ ಹೊಂದಿದ್ದ, ಪ್ರಸ್ತುತ www.azhimukham.com ನ್ಯೂಸ್ ಪೋರ್ಟಲ್ ನಲ್ಲಿ ಕೆಲಸ ಮಾಡುತ್ತಿದ್ದ ಕಪ್ಪನ್ ರನ್ನು ಅ.5ರಂದು ಹಥ್ರಾಸ್ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ವರದಿ ಮಾಡಲು ಹೋಗುತ್ತಿದ್ದಾಗ ಬಂಧಿಸಲಾಗಿದ್ದು ಇದು ದೇಶಾದ್ಯಂತ ಮಾಧ್ಯಮ ವಿಭಾಗದಲ್ಲಿ ಆಘಾತವನ್ನುಂಟುಮಾಡಿತ್ತು.

ಡಿ.ಕೆ.ಬಸು ಮತ್ತು ಪಶ್ಚಿಮಬಂಗಾಳ ರಾಜ್ಯಗಳ ನಡುವಿನ ಪ್ರಕರಣದಲ್ಲಿ  ಸುಪ್ರೀಂ ಕೋರ್ಟ್ ನೀಡಿದ ಆದೇಶ ಒಳಗೊಂಡಂತೆ ಸುಪ್ರೀಂ ಕೋರ್ಟ್ ನ ಹಲವು ಮಾರ್ಗ ದರ್ಶಿಗಳನ್ನುಕಪ್ಪನ್ ಬಂಧನ ಪ್ರಕರಣದಲ್ಲಿ ಗಾಳಿಗೆ ತೂರಲಾಗಿದೆಯೆಂದು ಸುಪ್ರೀಂ ಕೋರ್ಟ್ ಮುಂದೆ ಹಾಕಲಾದ ಅರ್ಜಿಯಲ್ಲಿ ಪತ್ರಕರ್ತರ ಸಂಘ ಉಲ್ಲೇಖಿಸಿತ್ತು.

ಪತ್ರಕರ್ತನಾಗಿ ತನ್ನ ಕರ್ತವ್ಯವೆಸಗುವುದನ್ನು ಅಡ್ಡಿ ಪಡಿಸುವುದಕ್ಕಾಗಿ ಈ ಬಂಧನವನ್ನು ಮಾಡಲಾಗಿದೆ. ಅವರ ಬಂಧನ ಮತ್ತು ಬಂಧನದ ಸ್ಥಳದ ಕುರಿತು ಅವರ ಕುಟುಂಬ ಸದಸ್ಯರು ಮತ್ತು ಸಹೋದ್ಯೋಗಿಗಳಿಗೆ ಮಾಹಿತಿ  ನೀಡಿಲ್ಲವಾದ್ದರಿಂದ ಕಪ್ಪನ್ ರನ್ನು ಸುಪ್ರೀಂ ಕೋರ್ಟ್ ಮುಂದೆ ಪ್ರದರ್ಶಿಸಲು ಮತ್ತು ಅವರನ್ನು ಅಕ್ರಮ ಬಂಧನದಿಂದ ಮುಕ್ತಿಗೊಳಿಸುವ ಹೇಬಿಯಸ್ ಕಾರ್ಪಸ್ ಶೈಲಿಯ ರಿಟ್ ಆದೇಶವನ್ನು ಪತ್ರಕರ್ತರ ಸಂಘ ಕೋರಿತ್ತು.

ಆದರೆ ಉತ್ತರ ಪ್ರದೇಶ ಪೊಲೀಸರು ನಂತರದಲ್ಲಿಕಪ್ಪನ್ ವಿರುದ್ಧ ಭಾರತೀಯ ದಂಡ ಸಂಹಿತೆಯ 153-ಎ, 295-ಎ, 124-ಎ ಮತ್ತು ಯುಎಪಿಎ ಕಾಯ್ದೆಯ 14, ಮಾಹಿತಿ ಹಕ್ಕು ಕಾಯ್ದೆಯ 65, 72 ಮತ್ತು 76ನೆ ವಿಧಿಯಡಿ ಆರೋಪವನ್ನು ದಾಖಲಿಸಿರುವುದರಿಂದ ಸುಪ್ರೀಂ ಕೋರ್ಟ್ ಮುಂದೆ ಬಾಕಿಯಿದ್ದ ರಿಟ್ ಅರ್ಜಿಗೆ ತಿದ್ದುಪಡಿಯ ಅಗತ್ಯವಿತ್ತು. ಆ ಉದ್ದೇಶದಿಂದ ವಕೀಲರ ಜೊತೆಗೂಡಿ ಜೈಲಿನಲ್ಲಿ ಕಪ್ಪನ್ ರನ್ನು ಭೇಟಿಯಾಗಲು ಪತ್ರಕರ್ತರ ಸಂಘದ ಪದಾಧಿಕಾರಿಗಳು ಬಯಸಿದ್ದರು.

ಅಕ್ಟೋಬರ್ 12ರಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ಮತ್ತು ನ್ಯಾ.ಎ.ಎಸ್.ಬೋಬಣ್ಣ, ವಿ.ರಾಮಸುಬ್ರಹ್ಮಣ್ಯಂ ನೇತೃತ್ವದ ಪೀಠವು ಕಪ್ಪನ್ ರ ಬಿಡುಗಡೆಗಾಗಿ ಅಲಹಾಬಾದ್ ಹೈಕೋರ್ಟ್ ಅನ್ನು ಸಂಪರ್ಕಿಸುವಂತೆ ಹೇಳಿತ್ತು. ಆದರೆ ಪೀಠವು ಅರ್ಜಿಯನ್ನು ಬಾಕಿಯುಳಿಸಿದ್ದು, 4 ವಾರದ ನಂತರಕ್ಕೆ ಅದನ್ನು ಪಟ್ಟಿಮಾಡಲು ಸೂಚಿಸಿತ್ತು. ರಿಟ್ ಅರ್ಜಿಯನ್ನು ತಿದ್ದುಪಡಿಗೊಳಿಸಲು ಪೀಠವು ಅನುಮತಿಯನ್ನು ನೀಡಿತ್ತು.

“ಅಕ್ಟೋಬರ್ 12ರ ಸುಪ್ರೀಂ ಕೋರ್ಟ್ ನ ಆದೇಶ ಪ್ರತಿಯೊಂದಿಗೆ ನಮ್ಮ ಅರ್ಜಿ ಮತ್ತು ನನ್ನಸುಪ್ರೀಂ ಕೋರ್ಟಿನ ಗುರುತಿನ ಚೀಟಿಯನ್ನು ನ್ಯಾಯಾಲಯದಲ್ಲಿ ಲಗತ್ತಿಸಿ ಕೊಡಲಾಗಿದ್ದು, ಅದು ಸ್ವತ: ವಿವರಣಾತ್ಮಕವಾಗಿತ್ತು” ಎಂದು ವಕೀಲ ಮ್ಯಾಥ್ಯೂ ಹೇಳಿರುವುದಾಗಿ ‘ದಿ ವೈರ್’ ವರದಿ ಮಾಡಿದೆ.

“ತಮ್ಮ ಕೆಲಸ ನಿರ್ವಹಿಸಿದ್ದಕ್ಕಾಗಿ ಪತ್ರಕರ್ತರನ್ನು ಬಂಧಿಸಿದರೆ, ವಕೀಲರಿಗೆ ಅವರ ಕಕ್ಷಿದಾರರನ್ನು ಭೇಟಿಯಾಗುವ ಅವಕಾಶ ನಿರಾಕರಿಸಿದರೆ ಇದು ಪ್ರಜಾಪ್ರಭುತ್ವ ಮತ್ತು ಕಾನೂನಿನ ಅಂತ್ಯವಾಗಿದೆ. ತೀವ್ರಗಾಮಿ ಅಪರಾಧಿಗಳಿಗೂ ನೀವು ಕಾನೂನು ಸೇವೆಯನ್ನು ನಿರಾಕರಿಸುವಂತಿಲ್ಲ. ನ್ಯಾಯವಾದಿಯು ಕಕ್ಷಿದಾರನನ್ನು ಭೇಟಿಯಾಗುವುದು ಕಾನೂನಿನ ಅಡಿಪಾಯವಾಗಿದೆ. ಹಾಗಾಗಿ ಸಿ.ಜೆ.ಎಂ ಆದೇಶವು ಕಾನೂನು ಬಾಹಿರವಾಗಿದೆ ಮತ್ತು ಸಾಂವಿಧಾನಿಕ ಮೌಲ್ಯಗಳು ಮತ್ತು ನೈತಿಕತೆಯ ವಿರುದ್ಧವಾಗಿದೆ. ಸುಪ್ರೀಂ ಕೋರ್ಟ್ ಆದೇಶವನ್ನು ಪೂರೈಸಲು ಅಗತ್ಯವಿರುವ ವಕಾಲತ್ತುನಾಮ ಪಡೆಯಲು ಸಾಧ್ಯವಾಗಲಿಲ್ಲ ಮತ್ತು ಕಕ್ಷಿದಾರನ ಭೇಟಿ ಸಾಧ್ಯವಾಗಲಿಲ್ಲ. ಕೂಡಲೇ ಆದೇಶದ ಪ್ರತಿಯನ್ನು ನೀಡಲೂ ಕೋರ್ಟ್ ನಿರಾಕರಿಸಿತು” ಎಂದು ಅವರು ಹೇಳಿದ್ದಾರೆ.

“ಕಕ್ಷಿದಾರನನ್ನು ಭೇಟಿಯಾಗಲು ಕೋರಿ ನೀಡುವ ಮನವಿಯ ವಿಲೇವಾರಿಗೆ ಎರಡು ಅಥವಾ ಮೂರು ಸೆಕೆಂಡ್ ಗಳೂ ಸಾಕು. ಹೆಚ್ಚೆಂದರೆ 30 ಸೆಕೆಂಡುಗಳು. ಆದರೆ ಮಥುರಾ ಸಿ.ಜೆ.ಎಂ ಶುಕ್ರವಾರದಂದು ಈ ಅರ್ಜಿಯನ್ನು ವಜಾಗೊಳಿಸಲು 5 ಗಂಟೆಗಳನ್ನು ತೆಗೆದುಕೊಂಡರು. ವಕೀಲನಿಗೆ ತನ್ನ ಕಕ್ಷಿದಾರನನ್ನು ಭೇಟಿಯಾಗಲು ಅವಕಾಶ ನಿರಾಕರಿಸುವುದು ಮಾನವ ಹಕ್ಕಿನ ಗಂಭೀರ ಉಲ್ಲಂಘನೆಯಾಗಿದೆ” ಎಂದು ಅವರು ತಿಳಿಸಿದ್ದಾರೆ.

Join Whatsapp