ಸೌದಿ ಅರೇಬಿಯಾ: ಸೌದೀಕರಣ ಭಾಗವಾಗಿ ರೆಸ್ಟೋರೆಂಟ್,ಕೆಫೆ,ಮಾಲ್ ಗಳಲ್ಲಿ ಸ್ಥಳೀಯರನ್ನು ಮಾತ್ರ ನೇಮಕ ಮಾಡಲಾಗುವುದರಿಂದಾಗಿ ಲಕ್ಷಾಂತರ ಭಾರತೀಯರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ವಿದೇಶೀ ಕೆಲಸಗಾರರಿಂದಲೇ ತುಂಬಿರುವ ಸೌದಿ ಕೆಫೆ,ರೆಸ್ಟೋರೆಂಟ್,ಮಾಲ್ ಮತ್ತು ಹೈಪರ್ ಮಾರ್ಕೆಟ್ ನಲ್ಲಿ ಅತಿ ಹೆಚ್ಚಾಗಿ ಭಾರತೀಯರೇ ದುಡಿಯುತ್ತಿದ್ದಾರೆ. ಆದರೆ ಇದೀಗ ನಿತಾಕತ್ ಯೋಜನೆಯಡಿಯಲ್ಲಿ ಸ್ಥಳೀಯರಿಗೆ ಮಾತ್ರ ಉದ್ಯೋಗಾವಕಾಶ ಕಲ್ಪಿಸುವ ಯೋಜನೆ ಘೋಷಿಸಿದೆ. ಈ ಹಿಂದೆ ಖಾಸಗಿ ವಲಯದಲ್ಲಿ ಹಾಗೂ ವಾಯು ಸಾರಿಗೆಯಲ್ಲಿ ಶೇಕಡಾವಾರು ಉದ್ಯೋಗವನ್ನು ಸ್ಥಳೀಯರಿಗೆ ಮೀಸಲಿಟ್ಟಿತ್ತು. ಇದರಿಂದಾಗಿ ಲಕ್ಷಾಂತರ ಭಾರತೀಯರು ನಿರುದ್ಯೋಗಿಗಳಾಗಿದ್ದರು. ಇದೀಗ ಮತ್ತೆ ಅಂಥಹದ್ದೇ ಭೀತಿ ಎದುರಾಗಿದೆ. ಲಕ್ಷಾಂತರ ಭಾರತೀಯರ ಉದ್ಯೋಗ ಕಿತ್ತುಕೊಂಡಿದ್ದ ನಿತಾಕತ್ ಯೋಜನೆಯ ಮುಂದುವರಿದ ಭಾಗ ಇದಾಗಿದೆ.
ಈ ನೀತಿಯನ್ನು ಘೋಷಿಸಿದ ಸಾಮಾಜಿಕ ಅಭಿವೃದ್ಧಿ ಸಚಿವ ಅಹ್ಮದ್ ಅಲ್ ರಾಜಿಹೀ ಸೌದಿಯ ಯುವಕ ಯುವತಿಯರಿಗೆ ಉದ್ಯೋಗವಕಾಶ ಕಲ್ಪಿಸಲು ನಾವು ಕಟಿಬದ್ಧರಾಗಿದ್ದೇವೆ. ಈ ಮೀಸಲಾತಿಯ ಮೂಲಕ ಅದನ್ನು ನಾವು ಜಾರಿಗೊಳಿಸುತ್ತೇವೆ ಎಂದು ಹೇಳಿದ್ದಾರೆ.