ಸುಳ್ಳು ಸುದ್ದಿ ತಡೆಗೆ ನಿಮ್ಮಲ್ಲಿ ಯಾವುದೇ ಕಾರ್ಯವಿಧಾನಗಳಿವೆಯೇ?

Prasthutha|

  • ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ: ಸಮಾಜದಲ್ಲಿ ಸುಳ್ಳು ಸುದ್ದಿ ಹರಡುವುದನ್ನು ತಡೆಯಲು ಯಾವುದೇ ಕಾರ್ಯವಿಧಾನಗಳು ಜಾರಿಯಲ್ಲಿವೆಯೇ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ದೂರದರ್ಶನ ಚಾನೆಲ್‌ಗಳ ಮೂಲಕ ಬರುವ ಸುಳ್ಳು ಸುದ್ದಿಗಳನ್ನು ಹೇಗೆ ತಡೆಯುತ್ತೀರಿ ಮತ್ತು ಅದನ್ನು ಎದುರಿಸಲು ಯಾವುದೇ ಕಾರ್ಯವಿಧಾನವು ಜಾರಿಯಲ್ಲಿದೆಯೇ ಎಂಬುದನ್ನು ಸ್ಪಷ್ಟಪಡಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ಕೇಳಿದೆ.

- Advertisement -

ವಿವಿಧ ಸಮಯಗಳಲ್ಲಿ ಸುಳ್ಳು ಸುದ್ದಿಗಳನ್ನು ನಿಯಂತ್ರಿಸಲು ಹೊರಡಿಸಿದ ಆದೇಶಗಳನ್ನು ಸಂಗ್ರಹಿಸಿ ಅಫಿಡವಿಟ್‌ನಲ್ಲಿ ಸೇರಿಸಿರುವುದರ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ದೂರದರ್ಶನ ಚಾನೆಲ್‌ಗಳು ಜನರ ಮೇಲೆ ಭಾರಿ ಪರಿಣಾಮ ಬೀರುತ್ತವೆ. ಅಂತಹ ಚಾನೆಲ್‌ಗಳ ಮೂಲಕ ಬರುವ ಸುಳ್ಳು ಸುದ್ದಿಗಳನ್ನು ನಿಯಂತ್ರಿಸಲು ಯಾವುದೇ ಕ್ರಮಗಳು ಅಥವಾ ಕಾರ್ಯ ವಿಧಾನಗಳು ಇದೆಯೇ ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ. ಇಂತಹ ದೂರುಗಳು ಬಂದರೆ ಏನು ಮಾಡುತ್ತೀರಿ? ಎಂದು ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೋಬ್ಡೆ ನೇತೃತ್ವದ ಮೂವರು ಸದಸ್ಯರ ಪೀಠವು ಕೇಂದ್ರವನ್ನು ಕೇಳಿದೆ. ಇದರ ಬಗ್ಗೆ ಅಫಿಡವಿಟ್ ಸಲ್ಲಿಸಲು ಮೂರು ವಾರಗಳ ಕಾಲಾವಕಾಶ ನೀಡಲಾಯಿತು.

ತಬ್ಲೀಗ್ ಜಮಾಅತ್ ವಿರುದ್ಧ ಸುಳ್ಳು ಸುದ್ದಿ ಹರಡುವುದರ ವಿರುದ್ಧ ಜಮಾತ್-ಎ-ಉಲೆಮಾ-ಎ-ಹಿಂದ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗೆ ಸ್ಪಂದಿಸುತ್ತಾ ನ್ಯಾಯಾಲಯವು ಈ ಪ್ರಶ್ನೆಯನ್ನು ಕೇಳಿದೆ. ದೇಶದಲ್ಲಿ ಕೋವಿಡ್ ಹರಡಲು ನಿಝಾಮುದ್ದೀನ್ ಮರ್ಕಝ್ ನಲ್ಲಿ ನಡೆದ ಕಾರ್ಯಕ್ರಮವು ಕಾರಣ ಎಂದು ಬಲಪಂಥೀಯ ಮಾಧ್ಯಮಗಳು ವ್ಯಾಪಕವಾಗಿ ವರದಿ ಮಾಡಿತ್ತು. ಇದರ ವಿರುದ್ಧ ಸಂಘಟನೆ ನ್ಯಾಯಾಲಯವನ್ನು ಸಂಪರ್ಕಿಸಿದೆ.

Join Whatsapp