ಸಿಬಿಐ ಮಾಜಿ ನಿರ್ದೇಶಕರ ಆತ್ಮಹತ್ಯೆಯಲ್ಲಿ ಯಾರಿಗೂ ಆಸಕ್ತಿಯಿಲ್ಲವೇಕೆ ? ಶಿವಸೇನೆ ಪ್ರಶ್ನೆ

Prasthutha|

ಬಿಜೆಪಿ, ಮಾಧ್ಯಮಗಳು ಹಾಗೂ ಕಂಗನಾಳ ಕಾಲೆಳೆದ ಸೇನೆ

- Advertisement -

ಮುಂಬೈ: ಸಿಬಿಐ ಮಾಜಿ ನಿರ್ದೇಶಕ ಅಶ್ವನಿ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿರುವುದು ಆಘಾತಕಾರಿ ಯಾಗಿದ್ದು, ಅವರ ನಿಗೂಢ ಸಾವಿಗೆ ನಿಖರ ಕಾರಣ ವನ್ನು ತಿಳಿಯಲು ಯಾರೂ ಏಕೆ ಆಸಕ್ತಿ ತೋರುತ್ತಿಲ್ಲ ಎಂದು ಶಿವಸೇನೆ ಶುಕ್ರವಾರ ಬಿಜೆಪಿ ಮತ್ತದರ ಹಿಂಬಾಲಕರು ಹಾಗೂ ಕಂಗನಾ ರಾಣಾವತ್ ಅವರ ಹೆಸರು ಹೇಳದೆಯೇ ಕಾಲೆಳೆದಿದೆ.

ಶಿವಸೇನಾದ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿ, “ಸಿಬಿಐಯಲ್ಲಿ ಮತ್ತು ಹಿಮಾಚಲ ಪ್ರದೇಶದ ಡಿಜಿಪಿಯಾಗಿ ಮಾತ್ರವಲ್ಲ,  ನಾಗಾಲ್ಯಾಂಡ್ ಮತ್ತು ಮಣಿಪುರದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ ಕುಮಾರ್ ಅವರಂಥ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿದ್ದಾರೆ ಎಂದರೆ ನಂಬಲು ಅಸಾಧ್ಯ. ಎಸ್ ಪಿಜಿ (ವಿಶೇಷ ರಕ್ಷಣಾ ದಳ) ವಿಭಾಗದಲ್ಲಿ ಯೂ ಅವರು ಸೇವೆ ಸಲ್ಲಿಸಿದ್ದರು’ ಎಂದು ಹೇಳಿದೆ. ಕುಮಾರ್ ಬುಧವಾರ ಶಿಮ್ಲಾದಲ್ಲಿರುವ ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. 69 ವರ್ಷದ ಅಶ್ವನಿ ಕುಮಾರ್ ಆತ್ಮಹತ್ಯೆ ಪತ್ರವೊಂದನ್ನು ಬರೆದಿದ್ದು, ಅದರಲ್ಲಿ ನಾನು ಹೊಸ ಪಯಣಕ್ಕೆ ಹೊರಟಿರುವುದಾಗಿ ಬರೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

“ಇಂತಹಾ ಘನ ವ್ಯಕ್ತಿಯೋರ್ವರ ಆಘಾತಕಾರಿ ಸಾವನ್ನು ಯಾರೂ ಪ್ರಶ್ನಿಸದಿರುವುದು ಆಶ್ಚರ್ಯಕರವಾಗಿದೆ.  ಕಂಗನಾ ರಾಣಾವತ್ ಹೆಸರನ್ನು ಉಲ್ಲೇಖಿಸದೆ ‘ಸಾಮ್ನಾ’ ಸಂಪಾದಕೀಯದಲ್ಲಿ, “ಪ್ರಸ್ತುತ ಹಿಮಾಚಲ ಪ್ರದೇಶದಲ್ಲಿ ನೆಲೆಸಿರುವ ನಟಿಯೊಬ್ಬರು,  ಕುಮಾರ್ ನಿಜವಾಗಿಯೂ ತನ್ನ ಜೀವನದ ಬಗ್ಗೆ ಜಿಗುಪ್ಸೆ ಹೊಂದಿದ್ದರೇ ಅಥವಾ ಯಾವುದೋ ರೀತಿಯ ಒತ್ತಡಕ್ಕೆ ಒಳಗಾಗಿದ್ದರೇ ಎನ್ನುವುದರ ಕುರಿತು ಮಾತನಾಡಬೇಕು” ಎಂದು ಸಂಪಾದಕೀಯದಲ್ಲಿ ಕಂಗಾನಾಗೆ ಕುಟುಕಿದೆ.

ಇದೇ ವೇಳೆ ಶಿವಸೇನೆ, ಅಶ್ವನಿ ಕುಮಾರ್ ಅವರ ಆತ್ಮಹತ್ಯೆಗೆ ಕಾರಣವಾದ ಸನ್ನಿವೇಶಗಳ ಬಗ್ಗೆ ಸುದ್ದಿ ವಾಹಿನಿಗಳು ಕೂಡಾ ಮಾತನಾಡಬೇಕು ಎಂದು ಹೇಳಿದೆ. ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಮಾಧ್ಯಮಗಳು ಎತ್ತಿದ್ದ ಪ್ರಶ್ನೆಗಳು ಸಿಬಿಐ ಮಾಜಿ ಮುಖ್ಯಸ್ಥ ಅಶ್ವನಿ ಕುಮಾರ್ ಪ್ರಕರಣದಲ್ಲೂ ಪ್ರಸಕ್ತವಾಗಬಹುದು ಎಂದು ಶಿವಸೇನಾ ಪ್ರಕಟಣೆ ತಿಳಿಸಿದೆ.

ಸುಶಾಂತ್ ಸಿಂಗ್ ‘ರೀಲ್ ಲೈಫ್’ ನ ಹೀರೋ ಆದರೆ ಅಶ್ವನಿ ಕುಮಾರ್ ‘ರಿಯಲ್ ಲೈಫ್’ ನ ಹೀರೋ ಎಂದು ಸೇನೆ ಹೇಳಿದೆ. ವೈದ್ಯಕೀಯ ಪುರಾವೆಗಳ ಹೊರತಾಗಿಯೂ, ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಒಪ್ಪಿಕೊಳ್ಳಲು ಕೆಲವರು ಸಿದ್ಧರಿಲ್ಲ ಎಂದು ಸಾಮ್ನಾದ ಸಂಪಾದಕೀಯದಲ್ಲಿ ಹೇಳಲಾಗಿದೆ. ಆದರೆ ಈ ರಹಸ್ಯವನ್ನು ಅಶ್ವನಿ ಕುಮಾರ್ ಸಾವಿನ ಹಿಂದಿರುವ ರಹಸ್ಯವನ್ನು ತಿಳಿದುಕೊಳ್ಳುವ ಆಸಕ್ತಿ ಯಾರಿಗೂ ಇದ್ದಂತಿಲ್ಲ. ಕಾಲ ಬಹಳ ಕೆಟ್ಟು ಹೋಗಿದೆ ಎಂದು ‘ಸಾಮ್ನಾ’ದ ಸಂಪಾದಕೀಯ, ಸುಶಾಂತ್ ಸಿಂಗ್ ಸಾವಿನ ಸಮಯದಲ್ಲಿ ಶಿವಸೇನೆ ಸರ್ಕಾರವನ್ನು ಆರೋಪಿ ಸ್ಥಾನದಲ್ಲಿ ತೋರಿಸಿದ್ದ ಬಿಜೆಪಿ, ಮಾಧ್ಯಮಗಳು ಹಾಗೂ ಕಂಗಾನಾಳನ್ನು ಹೆಸರಿಸದೆಯೇ ಪ್ರಶ್ನಿಸಿದೆ



Join Whatsapp