ಸವಾಲುಗಳ ನಡುವೆ ಪ್ರಜಾತಂತ್ರ, ಗಣತಂತ್ರ ಮತ್ತು ಸಂವಿಧಾನ

Prasthutha|

-ನಾ.ದಿವಾಕರ

- Advertisement -

ಭಾರತ ತನ್ನ 72ನೆಯ ಗಣತಂತ್ರ ದಿನವನ್ನು ಆಚರಿಸಿತು. ಗಣತಂತ್ರದ ಮೂಲ ಆಶಯಗಳು ಮತ್ತು ದೇಶದ ಸಂವಿಧಾನದ ಮೌಲ್ಯಗಳು ಸತತ ಹಲ್ಲೆಗೊಳಗಾಗುತ್ತಿರುವ ಸಂದರ್ಭದಲ್ಲೇ ಪ್ರಜಾತಂತ್ರದ ಉಳಿವಿಗಾಗಿ ಜನಾಂದೋಲನ ರೂಪಿಸಬೇಕಾದ ವಿಷಮ ಸನ್ನಿವೇಶದಲ್ಲಿ ನಾವು ‘ಸಂವಿಧಾನದ ಶ್ರೇಷ್ಠತೆ’ಯ ಕುರಿತು ಪರಾಮರ್ಶೆ ಮಾಡುತ್ತಿದ್ದೇವೆ. ನಿಜ, ಭಾರತದ ಸಂವಿಧಾನ ವಿಶ್ವ ಮಾನ್ಯತೆ ಪಡೆದಿರುವ ಒಂದು ಆಡಳಿತ ಸೂತ್ರದ ಗ್ರಂಥ. ಆದರೆ ಈ ಸಂವಿಧಾನದ ಶ್ರೇಷ್ಠತೆ ಗ್ರಾಂಥಿಕ ರೂಪದಲ್ಲಿ ಸಕ್ಷಮವಾಗಿದೆ, ಸ್ಥಾವರ ರೂಪದಲ್ಲಿ ಸುರಕ್ಷಿತವಾಗಿದೆ, ಒಂದು ಪ್ರತಿಮೆಯ ರೂಪದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ‘ಸಂವಿಧಾನವನ್ನು ಬದಲಾಯಿಸಿಯೇ ತೀರುತ್ತೇವೆ’ ಎಂಬ ಗುಪ್ತ ಕಾರ್ಯಸೂಚಿಯೊಂದಿಗೆ ಅಧಿಕಾರಕ್ಕೆ ಬಂದಿರುವ ಬಲಪಂಥೀಯ ರಾಷ್ಟ್ರೀಯವಾದಿಗಳ ನಡುವೆಯೇ, ‘ಯಾವುದೇ ಕಾರಣಕ್ಕೂ ಸಂವಿಧಾನಕ್ಕೆ ಧಕ್ಕೆಯಾಗಲು ಅವಕಾಶ ನೀಡುವುದಿಲ್ಲ’ ಎಂದು ಘೋಷಿಸುವ ಬೃಹತ್ ಜನಸಮುದಾಯ ಇಂದು ಗಣತಂತ್ರದ ಆಶಯಗಳ ಬಗ್ಗೆ ಚಿಂತಿಸುವಂತಾಗಿದೆ.

1947ರಲ್ಲಿ ವಸಾಹತು ಆಳ್ವಿಕೆಯಿಂದ ಮುಕ್ತಿ ಪಡೆದ ಸಂದರ್ಭದಲ್ಲಿದ್ದ ಸಮಸ್ಯೆಗಳು ಸಾಕಷ್ಟು ಬಗೆಹರಿದಿವೆ. ಆದರೆ ಮೂಲತಃ ಭಾರತೀಯ ಸಮಾಜ ತನ್ನ ಸಮಾಜೋ-ಸಾಂಸ್ಕೃತಿಕ ಸಂಕೋಲೆಗಳಿಂದ ಮುಕ್ತವಾಗಿಲ್ಲ ಎನ್ನುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಸಂವಿಧಾನ ರಚನೆಯ ಸಂದರ್ಭದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ವ್ಯಕ್ತಪಡಿಸಿದ್ದ ಹಲವು ಆತಂಕಗಳು ಇಂದಿಗೂ ಪ್ರಸ್ತುತ ಎನಿಸುವುದೇ ಆದರೆ, ನಾವು ನಮ್ಮ 72 ವರ್ಷಗಳ ಹೆಜ್ಜೆಗಳನ್ನು ಮರುಪರಿಷ್ಕರಣೆ ಮಾಡಲೇಬೇಕಲ್ಲವೇ? ನಿಜ, ಭಾರತದ ಒಕ್ಕೂಟ ವ್ಯವಸ್ಥೆ ಉಳಿದುಕೊಂಡಿದೆ. ಪ್ರಜಾತಾಂತ್ರಿಕ ನೆಲೆಗಳು ಇನ್ನೂ ಉಸಿರಾಡುತ್ತಿವೆ, ಪ್ರಜಾ ಪ್ರಾತಿನಿಧ್ಯದ ಆಡಳಿತ ವ್ಯವಸ್ಥೆ ಮಂಡಲ ಗ್ರಾಮ ಪಂಚಾಯತಿಯಿಂದ ಲೋಕಸಭೆಯ ವರೆಗೆ ಜೀವಂತವಾಗಿದೆ. ಆದರೆ ಈ ಜೀವಂತಿಕೆಯ ನಡುವೆಯೇ ಪ್ರಜಾತಂತ್ರ ವ್ಯವಸ್ಥೆಯ ಆಂತಃಸತ್ವವನ್ನೇ ಹೊಸಕಿ ಹಾಕುವ ವಿದ್ಯಮಾನಗಳೂ ಸಂಭವಿಸುತ್ತಿವೆ. ಈ ಅಪಾಯಗಳನ್ನು ಗ್ರಹಿಸದೆ ಹೋದರೆ ಬಹುಶಃ ನಾವು ಸಂವಿಧಾನದ ಮೂಲ ಆಶಯಗಳನ್ನೂ ಕಳೆದುಕೊಳ್ಳುವ ಸಾಧ್ಯತೆ ಇದೆ.

- Advertisement -

ಪ್ರಜಾಪ್ರಭುತ್ವವನ್ನು ಕುರಿತಂತೆ ಅಂಬೇಡ್ಕರ್ ಅವರ ಕೆಲವು ಮಾತುಗಳನ್ನು ನಾವಿಂದು ಪುನಮನನ ಮಾಡಿಕೊಳ್ಳಬೇಕಿದೆ. ಪ್ರಜಾತಂತ್ರ ಎಂದರೆ ಕೇವಲ ಒಂದು ಆಡಳಿತ ವ್ಯವಸ್ಥೆಯ ಸ್ವರೂಪ ಅಲ್ಲ, ಅಥವಾ ಒಂದು ಸರಕಾರ ಅಲ್ಲ ಬದಲಾಗಿ ಅದೊಂದು ಸಾಮಾಜಿಕ ಆಡಳಿತ ನಿರ್ವಹಣೆಯ ವಿಧಾನ ಎಂದು ಅಂಬೇಡ್ಕರ್ ಹೇಳುತ್ತಾರೆ. ಪ್ರಜೆಗಳ ನಡುವೆ ಏರ್ಪಡುವ ಸಾಮಾಜಿಕ ಸಂಬಂಧಗಳೇ ರಾಜಕೀಯ ಪ್ರಜಾಪ್ರಭುತ್ವದ ಮೂಲ ಬೇರುಗಳಂತೆ ಕಾರ್ಯನಿರ್ವಹಿಸುತ್ತವೆ ಎನ್ನುವುದು ಅಂಬೇಡ್ಕರ್ ಅವರ ದೃಢ ನಂಬಿಕೆಯಾಗಿತ್ತು. ಈ ಸಾಮಾಜಿಕ ಸಂಬಂಧಗಳು ಸೌಹಾರ್ದತೆ ಮತ್ತು ಭ್ರಾತತ್ವದೊಂದಿಗೆ ರೂಪುಗೊಂಡರೆ ಮಾತ್ರವೇ ರಾಜಕೀಯ ಪ್ರಜಾತಂತ್ರ ವ್ಯವಸ್ಥೆ ಊರ್ಜಿತವಾಗಲು ಸಾಧ್ಯ ಎಂದೂ ಅಂಬೇಡ್ಕರ್ ಪ್ರತಿಪಾದಿಸಿದ್ದರು. ಸಾಮಾಜಿಕ ಮತ್ತು ಆರ್ಥಿಕ ನೆಲೆಯಲ್ಲಿ ಸಮಾನತೆಯನ್ನು ಸಾಧಿಸಲಾಗದಿದ್ದರೆ, ತಾರತಮ್ಯಗಳನ್ನು ಹೋಗಲಾಡಿಸದಿದ್ದರೆ, ಶೋಷಣೆಯನ್ನು ಕೊನೆಗೊಳಿಸಲಾಗದಿದ್ದರೆ, ರಾಜಕೀಯ ನೆಲೆಯಲ್ಲಿ ಸ್ಥಾಪಿಸಲಾಗುವ ಪ್ರಜಾಪ್ರಭುತ್ವ ವಿಫಲವಾಗುತ್ತದೆ ಎಂದು ಅಂಬೇಡ್ಕರ್ ಹೇಳುತ್ತಾರೆ.

ಇಂದು ಭಾರತ ಕವಲು ಹಾದಿಯಲ್ಲಿ ನಿಂತಿದೆ. 73 ವರ್ಷಗಳ ಸ್ವತಂತ್ರ ಆಳ್ವಿಕೆಯಲ್ಲಿ ಏನು ಸಾಧಿಸಿದ್ದೇವೆ ಎಂಬ ಪ್ರಶ್ನೆ ಎದುರಾದಾಗ ನಮ್ಮ ಗಮನ ಷೇರು ಮಾರುಕಟ್ಟೆ, ಸೂಚ್ಯಂಕಗಳು ಮತ್ತು ನಗರೀಕರಣದ ಸುಂದರ ಚಿತ್ರಣಗಳತ್ತ ಹರಿಯುತ್ತದೆ. ಏಕೆಂದರೆ ಅಭಿವೃದ್ಧಿ ಮತ್ತು ಪ್ರಗತಿಯ ಮಾನದಂಡಗಳು ನಿಷ್ಕರ್ಷೆಯಾಗುತ್ತಿರುವುದೇ ಬಂಡವಾಳ ಮಾರುಕಟ್ಟೆ ಮತ್ತು ನಗರೀಕರಣದ ನೆಲೆಗಳಲ್ಲಿ. ತಳಮಟ್ಟದ ಮಾನವ ಸಂಬಂಧಗಳು ಮತ್ತು ಈ ಸಂಬಂಧಗಳ ಮೂಲಕ ಏರ್ಪಡುವ ಸಮಾಜೋ-ಸಾಂಸ್ಕೃತಿಕ ನೆಲೆಗಳು ಭಾರತದ ನೈಜ ಪ್ರಗತಿ, ಮುನ್ನಡೆ ಮತ್ತು ಅಭಿವೃದ್ಧಿಯನ್ನು ನಿರ್ಧರಿಸುತ್ತವೆ. ಈ ನೆಲೆಗಳು ಇಂದಿಗೂ ಸಹ ಮಾರುಕಟ್ಟೆಯ ಮೂಲಕ, ಬಂಡವಾಳದ ಮೂಲಕ ಮತ್ತು ಅಧಿಕಾರ ರಾಜಕಾರಣದ ಮೂಲಕ ಹಲ್ಲೆಗೊಳಗಾಗುತ್ತಿರುವುದನ್ನು ನಾಗರಿಕ ಸಮಾಜ ಗುರುತಿಸುತ್ತಿಲ್ಲ. ಗ್ರಾಮ ಪಂಚಾಯತಿ ಸ್ಥಾನಗಳನ್ನು ಹರಾಜು ಹಾಕುತ್ತಿರುವುದು ಮತ್ತು ಚುನಾಯಿತ ಜನಪ್ರತಿನಿಧಿಗಳು ಬಿಕರಿಯಾಗುತ್ತಿರುವುದು ಕೆಲವು ನಿರ್ದಿಷ್ಟ ನಿದರ್ಶನಗಳಾಗಿವೆ.

ಸಾಮಾಜಿಕ ಮತ್ತು ಆರ್ಥಿಕ ನೆಲೆಯಲ್ಲಿ ಪ್ರಜಾಪ್ರಭುತ್ವವನ್ನು ಸ್ಥಾಪಿಸುವುದರಿಂದಲೇ ರಾಜಕೀಯ ಪ್ರಜಾಪ್ರಭುತ್ವ ವ್ಯವಸ್ಥೆ ಸುಸ್ಥಿರವಾಗಿರಲು ಸಾಧ್ಯ ಎನ್ನುವುದನ್ನು ಮನಗಂಡೇ ಭಾರತದ ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯನ್ನು ರೂಪಿಸಲಾಗಿತ್ತು. ಸಾಮಾಜಿಕ ಸಮಾನತೆ, ಸೌಹಾರ್ದತೆ, ಭ್ರಾತೃತ್ವವನ್ನು ಸಾಧಿಸುವುದರೊಂದಿಗೇ, ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಅಂತರ್ಗತವಾಗಿದ್ದ ಶೋಷಣೆ, ದೌರ್ಜನ್ಯ ಮತ್ತು ದಬ್ಬಾಳಿಕೆಯನ್ನು ಕೊನೆಗೊಳಿಸುವುದು ಸಮಾಜವಾದಿ ಚಿಂತನೆಯ ಒಂದು ಆಶಯವಾಗಿತ್ತು. ಮತ್ತೊಂದೆಡೆ ಈ ಜಾತಿ ಶ್ರೇಣೀಕರಣದ ಪರಿಣಾಮವಾಗಿಯೇ ಸೃಷ್ಟಿಯಾಗಿದ್ದ ಆರ್ಥಿಕ ಅಸಮಾನತೆ ಮತ್ತು ಆರ್ಥಿಕ ಶೋಷಣೆಯನ್ನು ಕೊನೆಗಾಣಿಸುವುದು ಮತ್ತೊಂದು ಆಶಯವಾಗಿತ್ತು. ಈ ಹಿನ್ನೆಲೆಯಲ್ಲೇ ಡಾ.ಬಿ.ಆರ್.ಅಂಬೇಡ್ಕರ್, ಸಂವಿಧಾನಾತ್ಮಕ ಸಮಾಜವಾದವನ್ನು ಪ್ರತಿಪಾದಿಸಿದ್ದರು. ಆದರೆ ಅಂತಿಮ ಘಳಿಗೆಯಲ್ಲಿ ಪ್ರಭುತ್ವ ಸಮಾಜವಾದಕ್ಕೆ ಮನ್ನಣೆ ನೀಡಿ, ಸಮಾಜವಾದಿ ರಾಷ್ಟ್ರ ನಿರ್ಮಾಣದ ಚಿಂತನೆ ನಿರ್ದೇಶಕ ತತ್ವಗಳಲ್ಲಿ ಸೇರಿಕೊಂಡಿತ್ತು.

 ಸಂವಿಧಾನಾತ್ಮಕ ಸಮಾಜವಾದವನ್ನು ಒಪ್ಪಿಕೊಳ್ಳುವ ಮೂಲಕ ಯಾವುದೇ ರೀತಿಯ ಸರಕಾರಗಳು ಅಧಿಕಾರಕ್ಕೆ ಬಂದರೂ, ಸಮಾಜವಾದಿ ತತ್ವಗಳಿಂದ ವಿಮುಖವಾಗದಂತೆ ಮಾಡುವ ಅಂಬೇಡ್ಕರರ ಆಲೋಚನೆಗೆ ಆ ಸಂದರ್ಭದಲ್ಲಿ ಅನುಮೋದನೆ ದೊರೆಯಲಿಲ್ಲ. ಅದಕ್ಕೆ ಅಂದಿನ ಸಮಾಜೋ ಆರ್ಥಿಕ ಸಂದರ್ಭಗಳೂ ಕಾರಣವಿರಬಹುದು. ಪ್ರಭುತ್ವ ಸಮಾಜವಾದವನ್ನು ಅಂಗೀಕರಿಸುವ ಮೂಲಕ ಭಾರತ ಕ್ರಮೇಣ ಮಿಶ್ರ ಆರ್ಥಿಕ ನೀತಿಯನ್ನು ಅನುಸರಿಸಿತ್ತು. ನಂತರದ ದಿನಗಳಲ್ಲಿ ಈ ಅರೆ ಸಮಾಜವಾದಿ ನೀತಿಗಳು ಪ್ರಭುತ್ವ ಬಂಡವಾಳವಾದದೆಡೆಗೆ ಹೊರಳಿದ್ದನ್ನು ನೋಡಿದ್ದೇವೆ. ಇಂದು ಈ ಸಮಾಜವಾದಿ ತಳಪಾಯವೇ ಅಪಾಯದಲ್ಲಿರುವುದನ್ನೂ ನೋಡುತ್ತಿದ್ದೇವೆ. ನವ ಉದಾರವಾದ ಮತ್ತು ಬಲಪಂಥೀಯ ರಾಜಕಾರಣ ಭಾರತದ ಜಾತ್ಯತೀತ ತತ್ವಗಳನ್ನೂ ಗಾಳಿಗೆ ತೂರುತ್ತಿರುವುದನ್ನೂ ನೋಡುತ್ತಿದ್ದೇವೆ.

ಇಂದು ಭಾರತ ತನ್ನ ಅಂತಃಸತ್ವವನ್ನು ಮರುಶೋಧಿಸುವತ್ತ ಗಮನಹರಿಸಬೇಕಿದೆ. ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯ ಉಳಿವಿಗೆ ಸಂವಿಧಾನಾತ್ಮಕ ಸಾಂಸ್ಥಿಕ ನೆಲೆಗಳ ಪ್ರಾಮಾಣಿಕ ಕಾರ್ಯನಿರ್ವಹಣೆ ಮತ್ತು ನಿಷ್ಪಕ್ಷಪಾತ ಧೋರಣೆ ಮುಖ್ಯ ಎನ್ನುವುದನ್ನು ಮನಗಂಡೇ ಭಾರತದ ಸಂವಿಧಾನದಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗದ ಕಾರ್ಯವೈಖರಿಯನ್ನೂ ಪರಾಮರ್ಶಿಸುವ ಅಧಿಕಾರವನ್ನು ನ್ಯಾಯಾಂಗಕ್ಕೆ ನೀಡಲಾಗಿತ್ತು. ಕಳೆದ 71 ವರ್ಷಗಳಲ್ಲಿ ಭಾರತದ ನ್ಯಾಯಾಂಗ ನೀಡಿರುವ ಮಹತ್ವದ, ಚಾರಿತ್ರಿಕ ತೀರ್ಪುಗಳೇ ಈ ದೇಶದ ಜನಸಾಮಾನ್ಯರಲ್ಲಿ ಪ್ರಜಾತಂತ್ರದ ಬಗ್ಗೆ ವಿಶ್ವಾಸವನ್ನು ಉಳಿಸಿಕೊಂಡುಬಂದಿರುವುದೂ ಸತ್ಯ. ಆದರೆ ಇಂದು ಈ ವಿಶ್ವಾಸ ಕ್ಷೀಣಿಸುತ್ತಿದೆ. ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರಾತಿನಿಧಿಕ ಬಹುಮತವೇ ಅಧಿಕಾರ ಕೇಂದ್ರಗಳ ನಿರ್ವಹಣೆಯನ್ನು ನಿರ್ಧರಿಸುವುದಾದರೂ, ಈ ಅಧಿಕಾರ ರಾಜಕಾರಣ ಲಕ್ಷ್ಮಣ ರೇಖೆಯನ್ನು ದಾಟುವ ಪ್ರತಿಯೊಂದು ಸಂದರ್ಭವನ್ನೂ ಗಮನಿಸಲು ಮತ್ತು ನಿಯಂತ್ರಿಸಲು ಸಂವಿಧಾನಾತ್ಮಕ ಸಾಂಸ್ಥಿಕ ನೆಲೆಗಳು ನಮ್ಮ ನಡುವೆ ಇದೆ.

ಈ ಸಾಂಸ್ಥಿಕ ನೆಲೆಗಳನ್ನು ಹಂತಹಂತವಾಗಿ ನಾಶಪಡಿಸುತ್ತಾ ಬರುತ್ತಿರುವುದನ್ನು ಕಳೆದ ಐವತ್ತು ವರ್ಷಗಳಿಂದಲೂ ಗಮನಿಸುತ್ತಲೇ ಬಂದಿದ್ದೇವೆ. ಇಂದು ಯಾವುದೇ ಸಂವಿಧಾನಾತ್ಮಕ ಸಂಸ್ಥೆಯೂ ಸಾರ್ವಭೌಮ ಪ್ರಜೆಗಳ ಆಶಯಗಳನ್ನು ಮತ್ತು ಸಾಂವಿಧಾನಿಕ ಆಶಯಗಳನ್ನು ಪ್ರತಿನಿಧಿಸುತ್ತಿಲ್ಲ ಎನ್ನುವುದನ್ನು ವಿಷಾದದಿಂದಲೇ ಹೇಳಬೇಕಿದೆ. ಐದು ವರ್ಷಕ್ಕೊಮ್ಮೆ, ಮೂರು ವರ್ಷಕ್ಕೊಮ್ಮೆ ಚುನಾವಣೆಗಳನ್ನು ನಡೆಸುವುದು ಪ್ರಜಾಪ್ರಭುತ್ವದ ಒಂದು ಮಾರ್ಗವಷ್ಟೆ. ಈ ಚುನಾವಣೆಗಳಲ್ಲಿ ಸಾರ್ವಭೌಮ ಪ್ರಜೆಗಳ ಪ್ರಾತಿನಿಧಿತ್ವಕ್ಕೆ ಇರುವ ಅಂತರಿಕ ಮೌಲ್ಯವನ್ನು ಸಂರಕ್ಷಿಸುವುದರಲ್ಲಿ ಪ್ರಜಾಪ್ರಭುತ್ವದ ಭವಿಷ್ಯ ಅಡಗಿದೆ. ಆದರೆ ಇಂದು ಚುನಾವಣಾ ಆಯೋಗ ಎನ್ನುವ ಒಂದು ಸಂವಿಧಾನಾತ್ಮಕ ಸಂಸ್ಥೆಯೇ ಆಡಳಿತಾರೂಢ ಪಕ್ಷಗಳ, ಕಾರ್ಯಾಂಗದ ಕೈಗೊಂಬೆಯಂತೆ ವರ್ತಿಸುತ್ತಿದೆ. ಚುನಾವಣಾ ಸುಧಾರಣೆಗಳ ಕಲ್ಪನೆಯೇ ಮರೆಯಾಗಿದ್ದು, ಜನಪ್ರತಿನಿಧಿಗಳು ಹರಾಜು ಮಾರುಕಟ್ಟೆಯಲ್ಲಿ ಬಿಕರಿಯಾಗುವುದು ಬಹುಪಾಲು ಸ್ವೀಕತವಾಗಿಬಿಟ್ಟಿದೆ.

ಕಾನೂನು ವ್ಯವಸ್ಥೆಯನ್ನು ಸಂರಕ್ಷಿಸುವ, ಪ್ರಜೆಗಳ ಮೂಲಭೂತ ಹಕ್ಕುಗಳಿಗೆ ಚ್ಯುತಿ ಬಾರದಂತೆ ಎಚ್ಚರವಹಿಸಬೇಕಾದ, ಕಟ್ಟಕಡೆಯ ಪ್ರಜೆಯ ಸಾಮಾಜಿಕ-ಆರ್ಥಿಕ ಹಕ್ಕುಗಳಿಗೂ ರಕ್ಷಣೆ ನೀಡಬೇಕಾದ ಭಾರತದ ಸಾಂಸ್ಥಿಕ ನೆಲೆಗಳು ಇಂದು ಸಂಸದೀಯ ಬಹುಮತದ ನಿಯಂತ್ರಣಕ್ಕೆ ಒಳಪಡುತ್ತಿರುವುದನ್ನು ಗಮನಿಸಬೇಕಿದೆ. 1975ರ ತುರ್ತುಪರಿಸ್ಥಿತಿಯಲ್ಲಿ ಪ್ರಜೆಗಳ ಮೂಲಭೂತ ಹಕ್ಕುಗಳನ್ನೇ ಕಸಿದುಕೊಳ್ಳಲಾಗಿತ್ತು ಎಂದು ದೂಷಿಸುತ್ತಲೇ ಐದು ದಶಕಗಳಷ್ಟು ಮುನ್ನಡೆದಿರುವ ನಾವು, ಇಂದು ಪ್ರತಿಯೊಂದು ಹಂತದಲ್ಲೂ ಈ ಹಕ್ಕುಗಳ ಉಲ್ಲಂಘನೆಯಾಗುತ್ತಿರುವುದನ್ನು ನಿರ್ಲಿಪ್ತತೆಯಿಂದ ನೋಡುತ್ತಾ, ನಿಷ್ಕ್ರಿಯರಾಗುತ್ತಿದ್ದೇವೆ. ಕಾನೂನು ವ್ಯವಸ್ಥೆ ಈ ನಿಷ್ಕ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಲು ಸಾಂವಿಧಾನಿಕ ಸಂಸ್ಥೆಗಳನ್ನೇ ಬಳಸುತ್ತಿರುವುದನ್ನೂ ಗಮನಿಸಬೇಕಿದೆ. ಸಂಸದೀಯ ವ್ಯವಸ್ಥೆಯ ಶಾಸನಸಭೆಗಳು ಪ್ರಜೆಗಳ ಸಾಂವಿಧಾನಿಕ ಹಕ್ಕುಗಳನ್ನು ಮೊಟಕುಗೊಳಿಸುವ ವೇದಿಕೆಗಳಾಗಿ ಪರಿಣಮಿಸುತ್ತಿವೆ.

ಇದೀಗ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಮುಷ್ಕರದ ಹಿನ್ನೆಲೆಯಲ್ಲಿ ಇದನ್ನು ಸ್ಪಷ್ಟವಾಗಿ ಗ್ರಹಿಸಬಹುದು. ಶಾಸನಸಭೆಗಳಲ್ಲಿ ಚರ್ಚೆಗೊಳಪಡಿಸದೆಯೇ ಕಾಯ್ದೆ ಕಾನೂನುಗಳನ್ನು ತಿದ್ದುಪಡಿ ಮಾಡುವ ಅಸಾಂವಿಧಾನಿಕ ಕ್ರಮಗಳು ಒಂದೆಡೆಯಾದರೆ ಮತ್ತೊಂದೆಡೆ ಜನಪ್ರತಿನಿಧಿಗಳ ವಿರೋಧದ ಹೊರತಾಗಿಯೂ ಸುಗ್ರೀವಾಜ್ಞೆಗಳ ಮೂಲಕ ಜನವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸುವ ಧೋರಣೆ ಹೆಚ್ಚಾಗುತ್ತಿದೆ. ಇದು ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಅನಿವಾರ್ಯ ಎನ್ನುವ ಆಡಳಿತಾರೂಢ ಪಕ್ಷಗಳ ವಾದದ ಹಿಂದೆ, ಸಾಂವಿಧಾನಿಕ ಆಶಯಗಳ ಸಮಾಧಿ ಮಾಡುವ ಇಂಗಿತ ಇರುವುದನ್ನೂ ನಾವು ಗಮನಿಸಬೇಕಿದೆ. ಕೃಷಿ ಮಸೂದೆ, ವಿದ್ಯುತ್ ಮಸೂದೆ, ಹೊಸ ಶಿಕ್ಷಣ ನೀತಿ ಮತ್ತು ಕಾರ್ಮಿಕ ಕಾನೂನುಗಳ ತಿದ್ದುಪಡಿ, ಗೋಹತ್ಯೆ ನಿಷೇಧ ಕಾಯ್ದೆ ಇವೆಲ್ಲವೂ ಭಾರತದ ಬಹುಸಂಖ್ಯೆಯ ಜನತೆಯ ಪಾಲಿಗೆ ಮರಣಶಾಸನಗಳಂತೆ ಎದುರಾಗಿವೆ. ಈ ಕಾಯ್ದೆ, ತಿದ್ದುಪಡಿಗಳನ್ನು ಜನತೆಯ ಮೇಲೆ ಹೇರಲಾಗುತ್ತಿದೆ. ಈ ಸಂದರ್ಭದಲ್ಲಿ ಜನತೆಯ ರಕ್ಷಣೆಗೆ ಮುಂದಾಗಬೇಕಾದ ನ್ಯಾಯಾಂಗ ಮತ್ತಿತರ ಸಂವಿಧಾನಾತ್ಮಕ ಸಂಸ್ಥೆಗಳು ನಿಷ್ಕ್ರಿಯವಾಗಿವೆ.

ಕಾಶ್ಮೀರದ ಜನತೆಯ ಮೇಲೆ ಹೇರಲಾಗಿರುವ ದಿಗ್ಬಂಧನ, ಸಂವಹನ ಮಾಧ್ಯಮಗಳನ್ನು ನಿರ್ಬಂಧಿಸುವ ಅಮಾನುಷ ಪ್ರವೃತ್ತಿ, ಪೌರತ್ವ ತಿದ್ದುಪಡಿ ಕಾಯ್ದೆಯ ಮೂಲಕ ಪ್ರಜೆಗಳಿಗೆ ತಮ್ಮ ಪೌರತ್ವ ನಿರೂಪಿಸಲು ದಾಖಲೆ ನೀಡಬೇಕೆನ್ನುವ ನೀತಿ, ಪ್ರತಿಭಟನೆಗಳಿಗೆ ಅವಕಾಶ ನಿರಾಕರಿಸುವ ಆಡಳಿತ ನೀತಿಗಳು, ಪ್ರತಿರೋಧವನ್ನು ಹತ್ತಿಕ್ಕಲು ಸಂವಿಧಾನಾತ್ಮಕ ಸಂಸ್ಥೆಗಳನ್ನೇ ಬಳಸಿಕೊಳ್ಳುವ ವಿಧಾನಗಳು, ಸರಕಾರದ ವಿರುದ್ಧ ಮಾತನಾಡುವುದನ್ನೇ ದೇಶದ್ರೋಹ ಎಂದು ಪರಿಗಣಿಸುವ ಧೋರಣೆ, ಪ್ರಭುತ್ವ ವಿರೋಧಿ ದನಿಗಳನ್ನು ದಮನಿಸಲು ಅಮಾನುಷ ದೇಶದ್ರೋಹ ಕಾಯ್ದೆಯ ಬಳಕೆ ಇವೆಲ್ಲವೂ ನಾವು ಸುರಕ್ಷಿತವಾಗಿದೆ ಎಂದು ಭಾವಿಸುವ ಶ್ರೇಷ್ಠ ಸಂವಿಧಾನದ ಚೌಕಟ್ಟಿನಲ್ಲೇ ನಡೆಯುತ್ತಿದೆ. ಹಾಗಾದರೆ ನಾವು ಸಂರಕ್ಷಿಸಿರುವುದು ಏನನ್ನು? ಸಂವಿಧಾನ ಎನ್ನುವ ಒಂದು ಗ್ರಾಂಥಿಕ ಪ್ರತಿಮೆಯನ್ನೋ ಅಥವಾ ಅಂಬೇಡ್ಕರ್ ಕನಸಿನ ಸಾಂವಿಧಾನಿಕ ಆಶಯ ಮೌಲ್ಯಗಳನ್ನೋ? ಈ ಪ್ರಶ್ನೆ ನಮ್ಮನ್ನು ಕಾಡಲೇಬೇಕಿದೆ.

ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನಾತ್ಮಕ ಸಮಾಜವಾದವನ್ನು ಪ್ರತಿಪಾದಿಸುವ ಸಂದರ್ಭದಲ್ಲಿ ದೇಶದ ಪ್ರಮುಖ ಕೈಗಾರಿಕೆಗಳು, ಭೂಮಿ ಮತ್ತು ಹಣಕಾಸು ಕ್ಷೇತ್ರದ ರಾಷ್ಟ್ರೀಕರಣವನ್ನು ಬಲವಾಗಿ ಪ್ರತಿಪಾದಿಸುತ್ತಾರೆ. ಖಾಸಗಿ ಬಂಡವಾಳಿಗರ ಅಧಿಪತ್ಯದಲ್ಲಿ ಭಾರತದ ಶೋಷಿತ ಜನಸಮುದಾಯಗಳಿಗೆ ಸಾಮಾಜಿಕ ನ್ಯಾಯವಾಗಲೀ, ಆರ್ಥಿಕ ನ್ಯಾಯವಾಗಲೀ ಲಭಿಸುವುದಿಲ್ಲ ಎಂಬ ದೃಢ ನಂಬಿಕೆಯೊಂದಿಗೆ ಅಂಬೇಡ್ಕರ್ ಸಮಾಜವಾದವನ್ನು ಬಯಸುತ್ತಾರೆ. ಇದು ಮಾರ್ಕ್ಸ್‌ವಾದಿಗಳ ನಿಲುವೂ ಆಗಿದೆಯಲ್ಲವೇ? ಆದರೆ ಇಂದು ಭಾರತ ತನ್ನ ಸಮಾಜವಾದದ ಪೊರೆಯನ್ನು ಸಂಪೂರ್ಣವಾಗಿ ಕಳಚಿಕೊಳ್ಳುತ್ತಿದೆ. ಕೃಷಿ ಭೂಮಿಯನ್ನು ಮಾತ್ರವೇ ಅಲ್ಲದೆ, ಇಡೀ ಕೃಷಿ ವ್ಯವಸ್ಥೆಯನ್ನು, ಬೇಸಾಯ ಚಟುವಟಿಕೆಯನ್ನು ಮತ್ತು ಆಹಾರ ಉತ್ಪಾದನೆ, ಸಂಸ್ಕರಣ, ಸಂಗ್ರಹಣೆ, ಸಾಗಾಣಿಕೆಯನ್ನು ಕಾರ್ಪೊರೇಟ್ ಉದ್ಯಮಿಗಳಿಗೆ ವಹಿಸಲು ಮರಣ ಶಾಸನಗಳನ್ನು ಜಾರಿಗೊಳಿಸಲಾಗಿದೆ.

71 ವರ್ಷಗಳ ಗಣತಂತ್ರದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಭಾರತದಲ್ಲಿ ಮಾತನಾಡುವ ಹಕ್ಕು ಅಪಾಯಕ್ಕೆ ಸಿಲುಕಿದೆ. ಮಾನವ ಹಕ್ಕುಗಳಿಗಾಗಿ, ಶೋಷಿತ ಸಮುದಾಯಗಳ ಹಕ್ಕುಗಳಿಗಾಗಿ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಹೋರಾಡುವ ನೂರಾರು ಕಾರ್ಯಕರ್ತರು ಇಂದು ಜಾಮೀನು ಪಡೆಯಲಾಗದೆ ಸೆರೆವಾಸ ಅನುಭವಿಸುತ್ತಿದ್ದಾರೆ. ಸರಕಾರಗಳ ವಿರುದ್ಧ, ರಾಜಕೀಯ ನಾಯಕರ ವಿರುದ್ಧ ಟೀಕೆ ಮಾಡುವುದೂ ಸಹ ದೇಶದ್ರೋಹ ಕಾಯ್ದೆಯ ವ್ಯಾಪ್ತಿಗೊಳಪಡುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ವರಾವರರಾವ್, ಆನಂದ್ ತೇಲ್ತುಂಬ್ಡೆ, ಸಾಯಿಬಾಬ, ಸುಧಾ ಭರದ್ವಾಜ್, ಉಮರ್ ಖಾಲೀದ್ ಹೀಗೆ ಪ್ರಜಾತಂತ್ರ ಮೌಲ್ಯಗಳ ರಕ್ಷಣೆಗಾಗಿ ಹೋರಾಡುವ ಬೃಹತ್ ದಂಡು ಇಂದು ಸೆರೆಮನೆಯಲ್ಲಿದೆ. ಯಾವುದೇ ಅಪರಾಧ ಎಸಗದ ಈ ಹೋರಾಟಗಾರರಿಗೆ ಜಾಮೀನು ನೀಡಲು ನಿರಾಕರಿಸಲಾಗುತ್ತಿದೆ. ಆದರೆ ಹತ್ಯಾಕಾಂಡ, ಕೊಲೆ, ಎನ್ಕೌಂಟರ್, ಬಾಂಬ್ ಸ್ಫೋಟಗಳಲ್ಲಿ ಭಾಗಿಯಾಗಿರುವವರು ಜಾಮೀನು ಪಡೆದು ಅಧಿಕಾರ ಕೇಂದ್ರಗಳಲ್ಲಿ ರಾರಾಜಿಸುತ್ತಿದ್ದಾರೆ.

  2019ರಲ್ಲಿ ಚುನಾಯಿತರಾದ 17ನೆಯ ಲೋಕಸಭೆಯ 539 ಸಂಸದರ ಪೈಕಿ 233 ಸಂಸದರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿವೆ. 2009ರ ಲೋಕಸಭೆಗೆ ಹೋಲಿಸಿದರೆ ಇದು ಶೇ.44 ರಷ್ಟು ಹೆಚ್ಚಾಗಿದೆ(ಇದೇ ಅವಧಿಯಲ್ಲಿ ನಿರುದ್ಯೋಗ ಪ್ರಮಾಣವೂ ಶೇ.45ರಷ್ಟಾಗಿರುವುದು ಕಾಕತಾಳೀಯ ದುರಂತ). ಸುಪ್ರೀಂ ಕೋರ್ಟ್‌ ಗೆ ಸಲ್ಲಿಸಿರುವ ಮಾಹಿತಿಯ ಅನುಸಾರ ಸ್ವಚ್ಛ ಹಿನ್ನೆಲೆಯಿರುವ ಅಭ್ಯರ್ಥಿಗಳ ಗೆಲುವಿನ ಸಾಧ್ಯತೆ ಶೇ.4.7ರಷ್ಟಿದ್ದರೆ, ಅಪರಾಧದ ಹಿನ್ನೆಲೆ ಇರುವವರ ಗೆಲುವಿನ ಸಾಧ್ಯತೆ ಶೇ.15ರಷ್ಟಿದೆ. ಅರ್ಧಕ್ಕೂ ಹೆಚ್ಚು ಅಪರಾಧಿಗಳಿರುವ ಒಂದು ಸಂಸತ್ತು ದೇಶದ ರೈತರ ಪಾಲಿಗೆ ಮರಣಶಾಸನವಾದ ಮೂರು ಮಸೂದೆಗಳನ್ನು ಯಾವುದೇ ಚರ್ಚೆ ಇಲ್ಲದೆ ಅನುಮೋದಿಸುತ್ತದೆ. ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ಮತ್ತೊಂದು ಪ್ರಮಾಣ ಪತ್ರದಲ್ಲಿ, 22 ರಾಜ್ಯಗಳ 2556 ಶಾಸಕರು ಮತ್ತು ಸಂಸದರು ಕ್ರಿಮಿನಲ್ ಹಿನ್ನೆಲೆಯುಳ್ಳವರಾಗಿದ್ದಾರೆ. ಮಾಜಿ ಸಂಸದ ಶಾಸಕರನ್ನೂ ಒಳಗೊಂಡರೆ ಇವರ ಸಂಖ್ಯೆ 4442ರಷ್ಟಾಗುತ್ತದೆ. 174 ಹಾಲಿ ಸಂಸದರ ವಿರುದ್ಧ ಇರುವ ಕ್ರಿಮಿನಲ್ ಮೊಕದ್ದಮೆಗಳಲ್ಲಿ ಜೈಲುಶಿಕ್ಷೆಯ ಸಾಧ್ಯತೆಗಳಿವೆ ಎಂದೂ ಅಮಿಕಸ್ ಕ್ಯೂರಿ ವಿಜಯ್ ಹನ್ಸಾರಿಯಾ ಸುಪ್ರೀಂ ಕೋರ್ಟ್‌ ಗೆ ತಿಳಿಸಿದ್ದಾರೆ.(ಮೂಲ: ಇಂಡಿಯಾ ಟುಡೆ ಮೇ 25, 2019 ಮತ್ತು ದ ವೈರ್ ಸೆಪ್ಟಂಬರ್ 9, 2020).

ಹಥ್ರಾಸ್ ನಲ್ಲಿ ಅತ್ಯಾಚಾರಕ್ಕೊಳಗಾಗಿ, ಹತ್ಯೆಗೊಳಗಾಗಿ, ಪೊಲೀಸರಿಂದಲೇ ಸುಡಲ್ಪಟ್ಟ ಅಮಾಯಕ ಮಹಿಳೆಯ ಸಾಂವಿಧಾನಿಕ ಹಕ್ಕುಗಳಿಗಾಗಿ ಹೋರಾಡುವ ಕೇರಳದ ಪತ್ರಕರ್ತ ಸಿದ್ದೀಖ್ ಕಪ್ಪನ್ ದೇಶದ್ರೋಹದ ಆಪಾದನೆಯ ಮೇಲೆ, ಯುಎಪಿಎ ಕಾಯ್ದೆಯಡಿ ಬಂಧನಕ್ಕೊಳಗಾಗುತ್ತಾರೆ. ಸಂತ್ರಸ್ತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ದುಷ್ಕರ್ಮಿಗಳು ಯಾವುದೇ ಶಿಕ್ಷೆಗೊಳಗಾಗದೆ ಹೊರಬಂದರೂ ಅಚ್ಚರಿಪಡಬೇಕಿಲ್ಲ. ಇಂತಹ ಉದಾಹರಣೆಗಳು ಹೇರಳವಾಗಿವೆ. ಅಪರಾಧಗಳ ಹೊರೆ ಹೊತ್ತ ಹಲವು ಜನಪ್ರತಿನಿಧಿಗಳು ಇಂದು ಭಾರತದ ಪವಿತ್ರ ಸಂವಿಧಾನವನ್ನು ಪ್ರಾತಿನಿಧಿಕವಾಗಿ ಸಂರಕ್ಷಿಸುವ ಸಾಂವಿಧಾನಿಕ ಜವಾಬ್ದಾರಿ ಹೊತ್ತಿದ್ದಾರೆ. ಸಂವಿಧಾನದ ಮೂಲ ಆಶಯಗಳ ಸಂರಕ್ಷಣೆಗಾಗಿ ಹೋರಾಡುವವರು ಜಾಮೀನು ಪಡೆಯಲಾರದೆ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.

ಯಾವುದು ಸತ್ತಿದೆ, ಯಾವುದು ಬದುಕಿದೆ? ಆಡಳಿತ ವ್ಯವಸ್ಥೆ ತನ್ನ ಎಲ್ಲ ಜೀವಂತಿಕೆಯೊಡನೆ ಸಕ್ರಿಯವಾಗಿದೆ. ಈ ವ್ಯವಸ್ಥೆಯ ಮೇಲೆ ನಿಗಾ ವಹಿಸಬೇಕಾದ ಸಂವಿಧಾನಾತ್ಮಕ ಸಾಂಸ್ಥಿಕ ನೆಲೆಗಳು ಸತ್ತಿವೆ ಅಥವಾ ಪ್ರಜ್ಞಾಹೀನ ಸ್ಥಿತಿ ತಲುಪಿವೆ. ಭಾರತದ ಸಾರ್ವಭೌಮ ಪ್ರಜೆಗಳಾದ ನಾವು, ಇದೇ ದಿನ, 1950ರಂದು ನಮ್ಮ ಪವಿತ್ರ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡ ನಾವು, ಬದುಕಿಯೂ ಸತ್ತಂತಿದ್ದೇವೆ. ಹಾಗೆನಿಸುವುದಿಲ್ಲವೇ? ‘ಯಾವುದೇ ಕಾರಣಕ್ಕೂ ಸಂವಿಧಾನ ಬದಲಾಯಿಸಲು ಬಿಡುವುದಿಲ್ಲ’ ಎಂದು ಗಟ್ಟಿದನಿಯಲ್ಲಿ ಹೇಳೋಣ, ಆದರೆ ಹೀಗೆ ಹೇಳುವುದಕ್ಕೂ ಮುನ್ನ ವಾಸ್ತವ ಸನ್ನಿವೇಶಕ್ಕೆ ಕಣ್ತೆರೆಯೋಣ. ಹೀಗೆನಿಸುವುದಿಲ್ಲವೇ? ಈಗಲೂ ಹೀಗೆನಿಸದಿದ್ದರೆ ನಾವು ಸಂಪೂರ್ಣ ನಿಷ್ಕ್ರಿಯರಾಗಿದ್ದೇವೆ ಎಂದೇ ಅರ್ಥ. ನಮ್ಮ ನಡುವಿನ ಎಲ್ಲ ಅಸ್ಮಿತೆಗಳನ್ನೂ ಬದಿಗಿಟ್ಟು, ಐಕಮತ್ಯದಿಂದ ಹೋರಾಡಿದರೆ ಎಂತಹ ಸರ್ವಾಧಿಕಾರದ ವಿರುದ್ಧವಾದರೂ ಗೆಲ್ಲಲು ಸಾಧ್ಯ ಎನ್ನುವುದನ್ನು ಜಗತ್ತಿನ ಅನೇಕ ಘಟನೆಗಳು ನಿರೂಪಿಸಿವೆ, ಇಂದು ನಮ್ಮ ಮುಂದಿನ ರೈತಾಪಿ ಮುಷ್ಕರವೇ ನಿರೂಪಿಸುತ್ತಿದೆ. ನಾವು, ಅಂದರೆ ಪ್ರಜ್ಞಾವಂತ ನಾಗರಿಕ ಪ್ರಜೆಗಳು, ಮಸೂರಗಳನ್ನು ಬದಿಗಿಟ್ಟು ಮುಕ್ತ ಮನಸ್ಸಿನಿಂದ ನೋಡಬೇಕಷ್ಟೆ. ನೋಡೋಣವೇ?

ಹೀಗೆ ನೋಡುವುದಕ್ಕೂ ಮುನ್ನ ಡಾ.ಬಿ.ಆರ್.ಅಂಬೇಡ್ಕರ್, ಸಂವಿಧಾನ ಕರಡು ಸಮಿತಿಯ ಅಧ್ಯಕ್ಷ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸಿದ ನಂತರ 1949ರಲ್ಲಿ ಆಡಿದ ಈ ಎಚ್ಚರಿಕೆಯ ಮಾತುಗಳನ್ನು ಮತ್ತೆ ಮತ್ತೆ ಮನನ ಮಾಡಿಕೊಳ್ಳೋಣವೇ?:

  ‘‘1950ರ ಜನವರಿ 26ರಂದು(ಸಂವಿಧಾನವನ್ನು ಅಧಿಕೃತವಾಗಿ ಘೋಷಿಸುವ ದಿನ) ನಾವು ಹೊಸ ವಿರೋಧಾಭಾಸಗಳ ಪರ್ವವನ್ನು ಪ್ರವೇಶಿಸಲಿದ್ದೇವೆ. ರಾಜಕಾರಣದಲ್ಲಿ ಸಮಾನತೆಯನ್ನು ಹೊಂದಿರುತ್ತೇವೆ. ಸಾಮಾಜಿಕ ಮತ್ತು ಆರ್ಥಿಕ ಜೀವನದಲ್ಲಿ ಅಸಮಾನತೆ ಇರುತ್ತದೆ (….). ಈ ವಿರೋಧಾಭಾಸವನ್ನು ಆದಷ್ಟು ಬೇಗನೆ ನಾವು ತೊಡೆದುಹಾಕಬೇಕು. ಇಲ್ಲವಾದರೆ ಅಸಮಾನತೆಯಿಂದ ನೊಂದ ಜನರು, ಈ ಸಮಿತಿ ಅತ್ಯಂತ ಕಾಳಜಿ ಮತ್ತು ಪರಿಶ್ರಮದ ಮೂಲಕ ನಿರ್ಮಿಸಿರುವ ರಾಜಕೀಯ ಪ್ರಜಾಪ್ರಭುತ್ವದ ಸಂರಚನೆಯನ್ನೇ ಸ್ಫೋಟಿಸಿ ಬಿಡುತ್ತಾರೆ.’’(ಅಂಬೇಡ್ಕರ್ ಬರಹಗಳು ಸಂಪುಟ 12 1993).



Join Whatsapp