ಇತ್ತಿಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವೀಡಿಯೋ ಬಹಳಷ್ಟು ಸದ್ದು ಮಾಡಿತ್ತು. ಮದುವೆ ಸಮಾರಂಭದ ಸುಮಧುರ ಕ್ಷಣಗಳನ್ನು ತನ್ನ ಕ್ಯಾಮರಾ ಕಣ್ಣಲ್ಲಿ ಸೆರೆ ಹಿಡಿಯಲು ಬಂದಿದ್ದ ಫೋಟೋಗ್ರಾಫರ್, ವಧು ವರರು ವೇದಿಕೆಯಲ್ಲಿದ್ದಾಗ ಫೋಟೋ ತೆಗೆಯುತ್ತಲೇ ವರನನ್ನು ಸ್ವಲ್ಪ ಸರಿದು ನಿಲ್ಲುವಂತೆ ಹೇಳುತ್ತಾನೆ. ಮೊದಲಿಗೆ ಏನನ್ನೂ ಯೋಚಿಸದ ವರ, ದೂರ ಸರಿದು ನಿಲ್ಲುತ್ತಾನೆ. ಆ ನಂತರ ಫೋಟೋಗ್ರಾಫರ್, ವಧುವಿನ ಫೋಟೋ ತೆಗೆಯುವ ನೆಪದಲ್ಲಿ ಮುಂದುವರಿದು ಆಕೆಯ ಜೊತೆ ಅನುಚಿತವಾಗಿ ವರ್ತಿಸುತ್ತಾನೆ. ಮದುವೆಯ ದಿನವೇ ನಡೆದ ಘಟನೆಯಿಂದ ವರ ಕೋಪಗೊಂಡು ಆ ಫೋಟೊಗ್ರಾಫರನ ಮೇಲೆ ವೇದಿಕೆಯಲ್ಲಿಯೇ ಹಲ್ಲೆ ನಡೆಸುತ್ತಾನೆ. ಈ ವೀಡಿಯೋ ವೈರಲ್ ಆಗಿತ್ತು.
ಜಾಲತಾಣಿಗರಿಗೂ ಈ ವೀಡೀಯೋದ ಸತ್ಯಾಸತ್ಯತೆಯ ಕುರಿತು ಪ್ರಶ್ನೆಗಳಿತ್ತು. ಆ ಫೋಟೋಗ್ರಾಫರನ ಕುರಿತು ಕೆಲವರು ಆಕ್ರೋಶದ ಮಾತುಗಳನ್ನೂ ಆಡಿದ್ದರು. ಆದರೆ ಇದೀಗ ಆ ವೀಡೀಯೋದ ವಾಸ್ತವಾಂಶ ಬಯಲಿಗೆ ಬಂದಿದ್ದು, ಅದೊಂದು ಸಿನೆಮಾದ ದೃಶ್ಯವಾಗಿದೆ ಎನ್ನುವ ಅಂಶ ಬಹಿರಂಗವಾಗಿದೆ. ಈ ಕುರಿತು ವೀಡಿಯೋ ದೃಶ್ಯದಲ್ಲಿ ವಧುವಾಗಿ ನಿಂತುಕೊಂಡಿದ್ದ ಛತ್ತೀಸ್ಗಢದ ನಟಿ ಅನಿಕೃತಿ ಚೌಹಾನ್ ವಿವರಣೆ ನೀಡಿದ್ದು, “ಇದು ನನ್ನ ‘ಡಾರ್ಲಿಂಗ್ ಪ್ಯಾರ್ ಜುಕ್ತಾ ನಹೀ’ ಎಂಬ ಸಿನೆಮಾದ ಶೂಟಿಂಗ್ ದೃಶ್ಯವಾಗಿದೆ” ಎಂದು ಟ್ವಿಟ್ಟರ್ ನಲ್ಲಿ ಹೇಳಿದ್ದಾರೆ.
ಆ ಮೂಲಕ ಹಲವರ ಕುತೂಹಲಕ್ಕೆ ತೆರೆ ಬಿದ್ದಂತಾಗಿದೆ. ಸಾಮಾಜಿಕ ಜಾಲತಾಣದ ವೀಡಿಯೋಗಳು ಕೆಲವೊಮ್ಮೆ ಹಲವಾರು ತಲೆಬರಹಗಳೊಂದಿಗೆ ವೈರಲ್ ಆಗುವ ಕಾಲ ಇದಾಗಿದ್ದು. ಇದಕ್ಕೆ ಈ ವೀಡೀಯೋ ಕೂಡಾ ಹೊರತಾಗಿರಲಿಲ್ಲ. ಕೊನೆಗೆ ಅಲ್ಲಿ ನಟಿಸಿದ್ದ ನಟಿಯ ವಿವರಣೆಯ ಮೂಲಕವೇ ಹಲವರ ಪ್ರಶ್ನೆಗಳಿಗೆ ಉತ್ತರ ಸಿಕ್ಕಂತಾಗಿದೆ.