ಬೆಂಗಳೂರು : ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ಸರ್ಕಾರ ಖರೀದಿಸಿರುವ ಲಸಿಕೆಯನ್ನು ಖಾಸಗಿಯಾಗಿ ಮಾರಾಟ ಮಾಡುತ್ತಿದ್ದು, ಇಂತಹ ಅಕ್ರಮ ವ್ಯವಹಾರ ತಪ್ಪಿಸಲು ಯುವ ಕಾಂಗ್ರೆಸ್ ಘಟಕ ಮುಂದಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ .ಡಿ.ಕೆ. ಶಿವಕುಮಾರ್ ಕರೆ ನೀಡಿದ್ದಾರೆ.
ಕೋವಿಡ್ ಸಂಕಷ್ಟದಲ್ಲಿರುವ ಬಡವರು, ಕೆಲಸವಿಲ್ಲದ ಕೂಲಿ ಕಾರ್ಮಿಕರಿಗೆ ಮಲ್ಲೇಶ್ವಘರಂ ಬ್ಲಾಕ್ ಕಾಂಗ್ರೆಸ್ ನಿಂದ ಸುಬ್ರಮಣ್ಯ ನಗರದಲ್ಲಿ ಪಡಿತರ ಕಿಟ್ ವಿತರಿಸಿ ಮಾತನಾಡಿದ ಅವರು, ಸರ್ಕಾರ ಖರೀದಿಸುವ ಲಸಿಕೆಯನ್ನು ಖಾಸಗಿ ಆಸ್ಪತ್ರೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಸರ್ಕಾರದ ಕೋವಿಡ್ ಲಸಿಕೆಯನ್ನು ರಾಜ್ಯ ಬಿಜೆಪಿ ಸರ್ಕಾರ ಖಾಸಗಿಯಾಗಿ ಮಾರಾಟ ಮಾಡುತ್ತಿದ್ದು, ಜನರ ಆರೋಗ್ಯ ರಕ್ಷಣೆ ವಿಚಾರದಲ್ಲಿ ಭಾರೀ ಮೋಸ ನಡೆಯುತ್ತಿದೆ. ಇದನ್ನು ತಪ್ಪಿಸಲು ಯುವ ಕಾಂಗ್ರೆಸ್ ಘಟಕ, ಮಹಿಳಾ ಕಾಂಗ್ರೆಸ್ ಲಸಿಕೆ ನೋಂದಣಿ ಅಭಿಯಾನ ಕೈಗೊಂಡು ಅರ್ಹರಿಗೆ ಲಸಿಕೆ ದೊರಕಿಸಿಕೊಡಬೇಕು ಎಂದು ಹೇಳಿದರು.
ಕೊರೋನಾ 3 ನೇ ಅಲೆ ಹಿನ್ನೆಲೆಯಲ್ಲಿ ಕೋವಿಡ್ ಲಸಿಕೆಯನ್ನು ಇದೀಗ ಮಕ್ಕಳಿಗೂ ಸಹ ನೀಡಬೇಕು ಎನ್ನುವ ಚರ್ಚೆ ನಡೆಯುತ್ತಿದೆ. ಕೋವಿಡ್ ಸೋಂಕು ವಿಚಾರದಲ್ಲಿ ಎಲ್ಲರೂ ಜಾಗೃತರಾಗಬೇಕು. ಆರೋಗ್ಯ ರಕ್ಷಣೆಗೆ ಪ್ರಧಾನ ಆದ್ಯತೆ ನೀಡಬೇಕು ಎಂದರು.
ಮಲ್ಲೇಶ್ವರಂನಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ. ಕಷ್ಟಪಟ್ಟು ದುಡಿದ ಹಣದಿಂದ ಆಹಾರ ಧಾನ್ಯ ವಿತರಣೆ ಮಾಡುತ್ತಿದ್ದು, ನಿಜಕ್ಕೂ ಇದು ಉತ್ತಮ ಬೆಳವಣಿಗೆ. ಕಾಂಗ್ರೆಸ್ ನ ಉತ್ತಮ ಕೆಲಸಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ, ಸಲೀಂ ಅಹಮದ್, ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಮಾಜಿ ಮೇಯರ್ .ಜಿ ಹುಚ್ಚಪ್ಪ, ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ, ರಾಷ್ಟ್ರೀಯ ಯುವ ಕಾಂಗ್ರೆಸ್ ನ ಕಾರ್ಯದರ್ಶಿ ಸುರಭಿ ದ್ವಿವೇದಿ, ಕೆ..ಪಿ.ವೈ.ಸಿ.ಸಿ ಪ್ರಧಾನ ಕಾರ್ಯದರ್ಶಿಗಳಾದ ವಿಶ್ವನಾಥ್, ಪ್ರದೀಪ್, ಸಿರಿಲ್ ಪ್ರಭು, ಆರೀಫ್, ಅತೀಕ್ ಖಾನ್ ಮತ್ತಿತರರು ಉಪಸ್ಥಿತರಿದ್ದರು.