ರೈತರ ದೂಷಣೆ ಅಕ್ಷಮ್ಯ, ಘಾತುಕ ಶಕ್ತಿಗಳು ಹೇಗೆ ಬಂದವು ಎಂಬುದರ ಕುರಿತು ತನಿಖೆಯಾಗಲಿ; ಕುಮಾರಸ್ವಾಮಿ

Prasthutha|

ರೈತರ ಐತಿಹಾಸಿಕ ಹೋರಾಟದ ವೇಳೆ ದೆಹಲಿಯಲ್ಲಿ ನಡೆದ ಘಟನೆ ದುರದೃಷ್ಟಕರ. ರೈತರ ಸೋಗಿನಲ್ಲಿ ಅನ್ಯ ಶಕ್ತಿಗಳು ಇದರಲ್ಲಿ ಸೇರಿರಬಹುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ನ್ಯಾಯಯುತ ತಮ್ಮ ಉದ್ದೇಶವನ್ನು ಈಡೇರಿಸಿಕೊಳ್ಳಲು ಚಳಿ, ಗಾಳಿಯನ್ನೂ ಲೆಕ್ಕಿಸದೇ ಹೋರಾಡುತ್ತಿರುವ ರೈತರು ಇಂತಹ ಕೃತ್ಯಕ್ಕೆ ಕೈಹಾಕಲಾರರು ಎಂಬುದು ಸತ್ಯವಾಗಿದ್ದು, ಘಟನೆಗೆ ರೈತರನ್ನು ದೂಷಿಸುವಂಥ ಹೇಳಿಕೆಗಳು, ಅಭಿಪ್ರಾಯಗಳನ್ನು ಕೇಳಿ ಮನಸ್ಸಿಗೆ ನೋವಾಗಿದೆ. ಘಟನೆ ಏಕೆ ಹೇಗಾಯಿತು?, ಘಾತುಕ ಶಕ್ತಿಗಳು ಹೇಗೆ ಬಂದವು ಎಂಬುದರ ಕುರಿತು ತನಿಖೆಯಾಗದೇ, ರೈತರನ್ನು ದೂಷಣೆ ಮಾಡುವುದು ಅಕ್ಷಮ್ಯ. ಕೆಂಪು ಕೋಟೆಯ ಬಳಿ ನಡೆದ ಹಿಂಸಾಚಾರದ ಕಳಂಕವನ್ನು ದೇಶದ ಯಾರೊಬ್ಬರೂ ರೈತನ ತಲೆಗೆ ಕಟ್ಟಬಾರದು. ನಾಲ್ವರು ರೈತ ಮುಖಂಡರನ್ನು ಕೊಲ್ಲಲೆಂದು ಸಂಚು ನಡೆಸಿದ ಘಟನೆಗಳು ಈಗಾಗಲೇ ನಡೆದು ಹೋಗಿದೆ. ಅದಕ್ಕೆ ಸಂಬಂಧಪಟ್ಟಂತೆ ಒಬ್ಬ ವ್ಯಕ್ತಿಯನ್ನು ಹಿಡಿದು ರೈತರೇ ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನು ರೈತರ ಹೋರಾಟವನ್ನೇ ತಲೆಕೆಳಗು ಮಾಡಲು ಪ್ರಯತ್ನಗಳು ನಡೆಯದೇ ಇರುತ್ತವೆಯೇ? ಖಂಡಿತವಾಗಿಯೂ ಅನ್ಯ ಶಕ್ತಿಗಳು ಇದರ ಹಿಂದೆ ಇರುವ ಸಾಧ್ಯತೆಗಳಿವೆ ಎಂದು ಕುಮಾರಸ್ವಾಮಿ ಸಂಶಯ ವ್ಯಕ್ತಪಡಿಸಿದ್ದಾರೆ.
ಇದು ಸೂಕ್ತ ಮಾತುಕತೆ ಮೂಲಕ ಬಗೆಹರಿಯುವ ಸಮಸ್ಯೆ. ಸುಪ್ರೀಂ ಕೋರ್ಟ್‌ ಕೂಡ ಇದನ್ನೇ ಹೇಳಿದೆ. ಆದರೆ, ಹಾಗೆ ಆಗದೇ ಇರುವುದು ಬೇಸರದ ಸಂಗತಿ. ಈ ಘಟನೆಯನ್ನು ಆಡಳಿತದಲ್ಲಿರುವವರು ತಪ್ಪಿಸಬಹುದಿತ್ತು. ಘಟನೆ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಕಪ್ಪುಚುಕ್ಕೆಯಾಗಿ ಪರಿಣಮಿಸಿದೆ. ಈಗಲೂ ಕಾಲ ಮಿಂಚಿಲ್ಲ. ಸೌಹಾರ್ದ ಮಾರ್ಗ ಇದಕ್ಕೆ ಮದ್ದು ಎಂದು ಕುಮಾರಸ್ವಾಮಿ ಕೇಂದ್ರಕ್ಕೆ ಸಲಹೆ ನೀಡಿದ್ದಾರೆ.

Join Whatsapp