ರಾಜ್ಯದಲ್ಲಿ ಲೂಟಿಕೋರರ ಆಡಳಿತ; ಜಿದ್ದಿಗೆ ಬಿದ್ದವರಂತೆ ಪೈಪೋಟಿಯಿಂದ ಭ್ರಷ್ಟಾಚಾರ : ಸಿದ್ದರಾಮಯ್ಯ

Prasthutha|

ರಾಹುಲ್ ಗಾಂಧಿ ಜನ್ಮದಿನ: ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ನೇತೃತ್ವದಲ್ಲಿ ಪಡಿತರ ಕಿಟ್ ವಿತರಣೆ

- Advertisement -

ಬೆಂಗಳೂರು, ಜೂ 19; ರಾಜ್ಯ ಬಿಜೆಪಿ ಲೂಟಿ ಕೋರರ ಸರ್ಕಾರವಾಗಿದ್ದು, ಹಣ ದೋಚಲು ಆಡಳಿತ ಪಕ್ಷದವರ ನಡುವೆಯೇ ಕಿತ್ತಾಟ ನಡೆಯುತ್ತಿದೆ. ನಾನೆಷ್ಟು, ನೀನೆಷ್ಟು ಎಂದು ಜಿದ್ದಿಗೆ ಬಿದ್ದವರಂತೆ ಪೈಪೋಟಿಯಿಂದ ಬ್ರಷ್ಟಾಚಾರ ಮಾಡುತ್ತಿದ್ದಾರೆ. ಇಂತಹ ಭ್ರಷ್ಟ ಸರ್ಕಾರವನ್ನು ಅಧಿಕಾರದಿಂದ ಕಿತ್ತು ಹಾಕಿದರೆ ಮಾತ್ರ ರಾಜ್ಯಕ್ಕೆ ಪರಿಹಾರ ದೊರೆಯಲಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಜನ್ಮದಿನದ ಹಿನ್ನೆಲೆಯಲ್ಲಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ನೇತೃತ್ವದಲ್ಲಿ ನಗರದ ಮಲ್ಲೇಶ್ವರಂ 18 ಕ್ರಾಸ್ ನಲ್ಲಿರುವ ಆಟದ ಮೈದಾನದಲ್ಲಿ “ ಕಾಂಗ್ರೆಸ್ ಸಹಾಯ ಹಸ್ತ “ ಘೋ಼ಷಣೆಯಡಿ, ರಾಹುಲ್ ಕೇರ್ ಆಶ್ರಯದಲ್ಲಿ ಅರ್ಚಕರು, ಆಟೋ ಚಾಲಕರು, ಆಶಾ ಕಾರ್ಯಕರ್ತೆಯರು, ಗೃಹ ರಕ್ಷಕ ದಳ ಕಾರ್ಯಕರ್ತರಿಗೆ ಪಡಿತರ ಕಿಟ್ ವಿತರಿಸಿ ಮಾತನಾಡಿದ ಅವರು, ಬಿಜೆಪಿ ನಾಯಕರ ಮೇಲೆ, ಸರ್ಕಾರದ ಮೇಲೆ ಪ್ರತಿಪಕ್ಷದವರಾಗಿ ನಾವು ಆರೋಪ ಮಾಡುತ್ತಿಲ್ಲ. ಆಡಳಿತ ಪಕ್ಷದವರೇ ಸ್ವತಃ ಭ್ರಷ್ಟಾಚಾರ ಕುರಿತು ಪರಸ್ಪರ ಆರೋಪ ಮಾಡಿಕೊಳ್ಳುತ್ತಿದ್ದಾರೆ.  ಇಂತಹ ಬೇಜವಬ್ದಾರಿ ಸರ್ಕಾರವನ್ನು ಹಿಂದೆಂದೂ ನೋಡಿಲ್ಲ.  ಇದು ಜನ ವಿರೋಧಿ, ಜನದ್ರೋಹಿ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.

- Advertisement -

ನಮ್ಮ ಸರ್ಕಾರದ ಅವಧಿಯಲ್ಲಿ ಬಡವರಿಗೆ ಏಳು .ಕೆ.ಜಿ. ಅಕ್ಕಿ ನೀಡಲಾಗುತ್ತಿತ್ತು, ಆದರೆ ಬಿಜೆಪಿಯವರು ಅಧಿಕಾರಕ್ಕೆ ಬಂದು ಎರಡು ಕೆ.ಜಿ.ಗೆ ಇಳಿಸಿದ್ದಾರೆ. ನಾವು ಅಧಿಕಾರದಲ್ಲಿದ್ದಿದ್ದರೆ ಏಳು ಕೆ.ಜಿ. ಅಲ್ಲ, ಹತ್ತು .ಕೆ.ಜಿ. ನೀಡುತ್ತಿದ್ದೇವು. ಜನ ಸಂಕಷ್ಟದಲ್ಲಿರುವಾಗ ನೆರವಿಗೆ ಧಾವಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಸಣ್ಣ ರಾಜ್ಯ ಕೇರಳ 20 ಸಾವಿರ ಕೋಟಿ ರೂ ಪರಿಹಾರ ಪ್ರಕಟಿಸಿದೆ. ತಮಿಳುನಾಡಿನಲ್ಲಿ ಸ್ಟಾಲಿನ್ ಮುಖ್ಯಮಂತ್ರಿಯಾದ ದಿನವೇ ಬಡವರಿಗೆ 4 ಸಾವಿರ ರೂ ಪರಿಹಾರ ಘೋಷಣೆ ಮಾಡಿದ್ದಾರೆ. ಆದರೆ ನಮ್ಮಲ್ಲಿ ಸೂಕ್ತ ಪ್ರಮಾಣದಲ್ಲಿ ಪರಿಹಾರ ವಿತರಣೆಯಾಗುತ್ತಿಲ್ಲ ಎಂದು ದೂರಿದರು.

ಯುವ ಜನತೆ ಮೋದಿ ಮೋದಿ ಎನ್ನುತ್ತಿದ್ದರು. ಈಗ  ಕೆಲಸ ಕೇಳಿದರೆ ಬೊಂಡ, ಪಕೋಡ ಮಾರಾಟ ಮಾಡಿ ಎನ್ನುತ್ತಿದ್ದಾರೆ. ಆದರೆ ಪಕೋಡ ಮಾರಲೂ  ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ಅಡುಗೆ ಎಣ್ಣೆ ಬೆಲೆ 200 ರೂ ಆಗಿದೆ. ಡಾ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಅಡುಗೆ ಅನಿಲ ಸಿಲಿಂಡರ್ ಬೆಲೆ 414 ರೂ ಇತ್ತು. ಈಗ 850 ರೂಪಾಯಿಗೆ ಏರಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 100 ರೂ 17 ಪೈಸೆ ಅಗಿದೆ. ಡೀಸೆಲ್ ದರ 93 ರೂಪಾಯಿಗೆ ಏರಿಕೆಯಾಗಿದೆ. ಲೀಟರ್ ಪೆಟ್ರೋಲ್ ಗೆ 37.98, ಡೀಸೆಲ್ ಮೇಲೆ 37 ರೂ, ತೆರಿಗೆ ವಿಧಿಸಿ ಹೊರೆ ಹೇರುತ್ತಿದೆ.  ಇಂತಹ ಲಜ್ಜೆಗೆಟ್ಟ ಸರ್ಕಾರಗಳನ್ನು ಹಿಂದೆಂದೂ ಕಂಡಿರಲಿಲ್ಲ. ಮೊದಲು ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕಿತ್ತು ಹಾಕಬೇಕು ಎಂದರು.

ಈ ಸರ್ಕಾರ ಕುಡುಕರ ಸರ್ಕಾರವಾಗಿದೆ. ಏನೇ ಲಾಕ್ ಡೌನ್ ಮಾಡಿದರೂ ಸಹ ಮದ್ಯದಂಗಡಿಗಳನ್ನು ತೆರೆದು ಜನರಿಗೆ ಕುಡಿಯುವ ಕೆಲಸವನ್ನು ತುಂಬಾ ಚೆನ್ನಾಗಿ ಮಾಡುತ್ತಿದೆ. ಇಲ್ಲವಾದಲ್ಲಿ ಸರ್ಕಾರಕ್ಕೆ ಆದಾಯ ಎಲ್ಲಿಂದ ಬರಬೇಕು ಎಂದು ಪ್ರಶ್ನಿಸಿದರು. ರಾಜ್ಯದ ಎಲ್ಲಾ ಬಡವರಿಗೆ ಹತ್ತು ಸಾವಿರ ರೂ ಹಣವನ್ನು ಖಾತೆಗಳಿಗೆ ವರ್ಗಾವಣೆ ಮಾಡಿದರೆ 13 ಸಾವಿರ ಕೋಟಿ ರೂ ವೆಚ್ಚವಾಗಲಿದೆ, ಹತ್ತು ಕೆ.ಜಿ. ಆಹಾರ ಧಾನ್ಯಕ್ಕೆ ಎರಡು ಸಾವಿರ ರೂ ಸೇರಿ 15 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ರಾಜ್ಯದ ಬಡವರ ಸಂಕಷ್ಟವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದಿತ್ತು ಎಂದು ಸಿದ್ದರಾಮಯ್ಯ ಹೇಳಿದರು.  

ಜನ ತೊಂದರೆಯಲ್ಲಿದ್ದಾಗ ಸರ್ಕಾರಗಳು ನೆರವಿಗೆ ಬರಲಿಲ್ಲ. ಆದರೆ ಕಾಂಗ್ರೆಸ್ ಪಕ್ಷ ಬಡವರ ಪರವಾಗಿದೆ. ರಕ್ಷಾ ರಾಮಯ್ಯ, ಎಂ. ಎರ್, ಸೀತಾರಾಮ್ ಶಾಸಕರಲ್ಲ. ಅಶ್ವತ್ಥ ನಾರಾಯಣ ಇಲ್ಲಿನ ಶಾಸಕ. ಅವರು ಮಾಡಬೇಕಾದ ಕೆಲಸವನ್ನು ನಮ್ಮ ಪಕ್ಷದವರು ಮಾಡುತ್ತಿದ್ದಾರೆ.  ನಮ್ಮ ಎಲ್ಲಾ 224 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಎಷ್ಟು ಸಾದ್ಯವೋ ಅಷ್ಟು ನೆರವು ನೀಡುತ್ತಿದೆ. ಎರಡನೇ ಅಲೆ ಬರುತ್ತದೆ ಎಂದು ತಜ್ಞರು ಮೊದಲೇ ವರದಿ ನೀಡಿದ್ದಾರೆ. ಮೂರನೇ ಅಲೆ ಅಕ್ಟೋಬರ್ ನಲ್ಲಿ ಬರಲಿದೆ, ಈಗಲಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ಬಿಜೆಪಿಯವರು ಸರ್ಕಾರದ ಪಡಿತರ ಕಿಟ್ ಗಳಿಗೆ ತಮ್ಮ ಭಾವಚಿತ್ರ ಹಾಕಿಕೊಂಡು ಹಂಚುತ್ತಿದ್ದಾರೆ. ಆದರೆ ನಮ್ಮ ಪಕ್ಷದ ನಾಯಕರು, ಕಾರ್ಯಕರ್ತರು ರಾಜ್ಯಕ್ಕೆ ಗೌರವ ತರುವ ಕೆಲಸ ಮಾಡುತ್ತಿದ್ದಾರೆ.  ಯುವ ಕಾಂಗ್ರೆಸ್ ನ ಅಧ್ಯಕ್ಷ ರಕ್ಷಾ ರಾಮಯ್ಯ ನೇತೃತ್ವದಲ್ಲಿ ಉತ್ತಮ  ಕೆಲಸ ನಡೆಯುತ್ತಿದೆ.  ರೈತರು, ವರ್ತಕರು ಮತ್ತಿತರ ಜನ ಸಮುದಾಯ ತೀವ್ರ ಸಂಕಷ್ಟದಲ್ಲಿದ್ದಾರೆ. ಇವರೆಲ್ಲರಿಗೂ ಪರಿಹಾರ ನೀಡಬೇಕೆಂದು ಕಾಂಗ್ರೆಸ್ ಒತ್ತಡ ಹೇರಿದ ಹಿನ್ನೆಲೆಯಲ್ಲಿ ಅಲ್ಪ ಸ್ವಲ್ಪ ಪರಿಹಾರ ಘೋಷಿಸಿದ್ದಾರೆ ಎಂದರು.

ರಾಜ್ಯ ತೀವ್ರ ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇಂತಹ ಪರಿಸ್ಥಿತಿಯಲ್ಲೇ ಸರ್ಕಾರದ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ಎಚ್.ವಿಶ್ವನಾಥ್ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಬೇಕಾಗಿದೆ. ಕೇರಳ, ತಮಿಳುನಾಡಿನಲ್ಲಿ ಶಾಸನ ಸಭೆ ಅಧಿವೇಶನ ಕರೆಯಲಾಗಿದೆ. ಹೀಗಾಗಿ ರಾಜ್ಯ ಸರ್ಕಾರ ತುರ್ತಾಗಿ ವಿಧಾನಮಂಡಲ ಅಧಿವೇಶನ ಕರೆಯಬೇಕು. ಜನರ ಎಲ್ಲಾ ಸಮಸ್ಯೆಗಳಿಗೆ ಕಾಂಗ್ರೆಸ್ ಧ್ವನಿಯಾಗಿ ಕೆಲಸ ಮಾಡಲಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ಕೆಪಿವೈಸಿಸಿ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ಮಾತನಾಡಿ, ರಾಜ್ಯದಲ್ಲಿ ಎರಡನೇ ಅಲೆ ಕಾಣಿಸಿಕೊಂಡ ನಂತರ ಎರಡು ತಿಂಗಳಿಂದ ಯುವ ಕಾಂಗ್ರೆಸ್ ಹಲವಾರು ರೀತಿಯಲ್ಲಿ ನೆರವು ನೀಡುತ್ತಾ ಬರುತ್ತಿದೆ ಎಂದರು.

ಸಭೆಯಲ್ಲಿ ರಾಜ್ಯಸಭೆ ಸದಸ್ಯ ಜಿ.ಸಿ. ಚಂದ್ರಶೇಖರ್, ವಿಧಾನಪರಿಷತ್ ಸದಸ್ಯ ಎಂ.ಆರ್. ಸೀತಾರಾಮ್, ಕಾಂಗ್ರೆಸ್ ಮುಖಂಡರಾದ ಕೇಶವ್ ರಾಜಣ‍್ಣ, ಸತೀಶ್, ವಿಜಯ್ ಹುನಗುಂದ್, ಯುವ ಕಾಂಗ್ರೆಸ್ ನ ಉಪಾಧ್ಯಕ್ಷರಾದ ಭವ್ಯ, ಕೆಪಿವೈಸಿಸಿ ಮುಖಂಡರಾದ ಆರೀಫ್, ಸಿರಿಲ್, ಪ್ರದೀಪ್, ಅಖಿಲ್ ಅಹಮದ್, ಆನಂದ್, ಹನುಮಾನ್ ಕಿಶೋರ್, ಚೈತ್ರ, ದೀಪಿಕಾ ರೆಡ್ಡಿ, ಸುಮತಾ ಮತ್ತಿತರರು ಉಪಸ್ಥಿತರಿದ್ದರು.



Join Whatsapp