ರಾಜ್ಯದಲ್ಲಿ ಕೆಲ ದಿನಗಳಿಂದ ರಾಜಕೀಯ ವಿದ್ಯಮಾನ ನಡೆಯುತ್ತಿದೆ. ನಾಯಕತ್ವ ಬದಲಾವಣೆ, ದೆಹಲಿ ಪ್ರಯಾಣ, ಮುಂದೆ ನಾವೇ ಮುಖ್ಯಮಂತ್ರಿ ಎಂದು ಹೇಳುವ ಸುದ್ದಿಗಳು ಕೇಳಿಬರುತ್ತಿವೆ. ಕೊರೋನಾ ಕಾಲದಲ್ಲಿ ಈ ರೀತಿ ನಡೆಯುತ್ತಿರುವುದು ಮುಖ್ಯಮಂತ್ರಿಗಳ ಮನಸ್ಸಿಗೆ ನೋವಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ ಪ್ರತಿಕ್ರಿಯಿಸಿದ್ದಾರೆ.
ಮುಖ್ಯಮಂತ್ರಿ ನಿವಾಸದಲ್ಲಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಭಯದಿಂದ ಮಹಾರಾಷ್ಟ್ರ ಮುಖ್ಯಮಂತ್ರಿ ಮನೆಯಿಂದ ಆಚೆನೇ ಬಂದಿಲ್ಲ, ಅಂತಹದ್ದರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಬೇರೆ ರಾಜ್ಯಗಳ ಸಿಎಂಗಳಿಗಿಂತ ಯಡಿಯೂರಪ್ಪ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ, ಇಷ್ಟೆಲ್ಲ ಮಾಡಿದ್ದರೂ ಪದೇ ಪದೇ ನಾಯಕತ್ವ ವಿಚಾರ ಕೇಳಿ ಬರುತ್ತಿರುವುದರಿಂದ ಅವರ ಮನಸಿಗೆ ನೋವಾಗಿದೆ ಎಂದು ಅಶೋಕ್ ಹೇಳಿದರು.
ಪಕ್ಷದ ಮುಖಂಡರಾದ ಪ್ರಹ್ಲಾದ್ ಜೋಷಿ, ನಳಿನ್ ಕುಮಾರ್ ಕಟೀಲ್, ಸಿ ಟಿ ರವಿ ಸಹ ನಾಯಕತ್ವ ಬದಲಾವಣೆ ಇಲ್ಲ, ಯಡಿಯೂರಪ್ಪ ಅವರೇ ಮುಂದುವರಿಯುತ್ತಾರೆ ಎಂದು ಹೇಳಿದ್ದಾರೆ. ನಾವೆಲ್ಲ ಸಿಎಂ ಜತೆ ಇದ್ದೇವೆ, ಯಡಿಯೂರಪ್ಪ ನಮ್ಮೆಲ್ಲರ ನಾಯಕ. ಯಡಿಯೂರಪ್ಪ ಅಧಿಕಾರದಲ್ಲಿ ಮುಂದುವರೆಯುತ್ತಾರೆ, ಇದರಲ್ಲಿ ಯಾವುದೇ ಸಂಶಯ ಬೇಡ ಎಂದು ಅಶೋಕ್ ತಿಳಿಸಿದರು.
ಇವತ್ತಿಗೆ ಈ ಎಲ್ಲಾ ಗೊಂದಲಗಳಿಗೆ ತೆರೆ, ಇತಿಶ್ರೀ ಹಾಕಿದ್ದೇವೆ. ಇನ್ನು ಮುಂದೆ ಈ ಎಲ್ಲ ಗೊಂದಲಗಳು ನಿಲ್ಲಬೇಕು. ಹೈಕಮಾಂಡ್ ಮೇಲೆ ಯಡಿಯೂರಪ್ಪಗೆ ಅಚಲ ವಿಶ್ವಾಸ ಇದೆ. ಸದ್ಯದಲ್ಲೇ ಅರುಣ್ ಸಿಂಗ್ ರಾಜ್ಯಕ್ಕೆ ಬರುತ್ತಾರೆ. ಅರುಣ್ ಸಿಂಗ್ ಎಲ್ಲರ ಜತೆ ಚರ್ಚೆ ಮಾಡಿ ಬಿಕ್ಕಟ್ಟು ಪರಿಹರಿಸುತ್ತಾರೆ ಎಂದರು.
ಐಎಎಸ್ ಅಧಿಕಾರಿಗಳಾದ ರೋಹಿಣಿ ಸಿಂಧೂರಿ, ಶಿಲ್ಪಾ ಎತ್ತಂಗಡಿ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಂದಾಯ ಸಚಿವರು, ಮೈಸೂರಿನಲ್ಲಿ ಗೊಂದಲ ಸೃಷ್ಟಿ ಯಾಗಿತ್ತು. ಮುಖ್ಯಮಂತ್ರಿ ಮಧ್ಯಪ್ರವೇಶ ಮಾಡಿ, ವರದಿ ತರಿಸಿಕೊಂಡು ಇಬ್ಬರನ್ನೂ ವರ್ಗಾವಣೆ ಮಾಡಿದ್ದಾರೆ. ಇದು ಆಡಳಿತಾತ್ಮಕ ವರ್ಗಾವಣೆ. ಈಗ ಗೊಂದಲ ನಿವಾರಣೆ ಆಗಿದೆ, ಮೈಸೂರು ಆಡಳಿತ ಸುಗಮವಾಗಿದೆ ಎಂದರು.