ಯುಎಇ ವಿರುದ್ಧ ಕೀಳುಮಟ್ಟದ ಹೇಳಿಕೆ ನೀಡಿರುವುದಕ್ಕಾಗಿ ಇಸ್ರೇಲ್ ವಿಷಾದ ವ್ಯಕ್ತಪಡಿಸಿದೆ. ಯುಎಇ ಕೊರೋನಾ ವೈರಸ್ ಹರಡುತ್ತಿದೆ ಎಂದು ಇಸ್ರೇಲ್ ಪ್ರತಿನಿಧಿಯೊಬ್ಬರು ಹೇಳಿಕೆ ನೀಡಿದ್ದರು. ಇದು ವ್ಯಾಪಕ ಟೀಕೆಗೆ ಕಾರಣವಾದ ಹಿನ್ನೆಲೆಯಲ್ಲಿ ಇಸ್ರೇಲ್ ವಿಷಾದ ವ್ಯಕ್ತಪಡಿಸಿದೆ. ಇಸ್ರೇಲ್ ಆರೋಗ್ಯ ಸಚಿವಾಲಯದ ಸಾರ್ವಜನಿಕ ಆರೋಗ್ಯ ವಿಭಾಗದ ಮುಖ್ಯಸ್ಥ ಶರೋನ್ ಅಲ್ರೋ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನಿ ಕಚೇರಿ ವಿಷಾದ ವ್ಯಕ್ತಪಡಿಸಿದೆ.
ಇದು “ಯಶಸ್ವಿಯಾಗದ ತಮಾಷೆ” ಮತ್ತು ಈ ವಿಷಯದ ಬಗ್ಗೆ ಇಸ್ರೇಲ್ ನ ಅಭಿಪ್ರಾಯಗಳನ್ನು ಹೇಳುವ ಅಧಿಕಾರ ಶರೋನ್ ಅಲ್ರೊಗೆ ಇಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. 70 ವರ್ಷಗಳ ಯುದ್ಧಕ್ಕಿಂತ ಹೆಚ್ಚಿನ ಜನರು ಯುಎಇಯೊಂದಿಗಿನ ಎರಡು ವಾರಗಳ ಶಾಂತಿ ಒಪ್ಪಂದದ ನಂತರ ಸಾವನ್ನಪ್ಪಿದ್ದಾರೆ ಎಂದು ಅಲ್ರೋ ವಿವಾದಾತ್ಮಕ ಹೆಳಿಕೆ ನೀಡಿದ್ದರು. ಕೋವಿಡ್ ಹರಡುತ್ತಿರುವ ಹಿನ್ನೆಲೆಯಲ್ಲಿ ಇಸ್ರೇಲ್ ನ ಬಂಗೂರಿಯನ್ ವಿಮಾನ ನಿಲ್ದಾಣವನ್ನು ಮುಚ್ಚುವ ವಿಷಯಕ್ಕೆ ಸಂಬಂಧಿಸಿ ಈ ವಿವಾದಾತ್ಮಕ ಹೇಳಿಕೆಯನ್ನು ಅವರು ನೀಡಿದ್ದರು.