ಇಸ್ಲಾಮೋಫೋಬಿಯಾದಿಂದ ವ್ಯಕ್ತಿಯೋರ್ವ ಕೆನಡಾದ ಮುಸ್ಲಿಮ್ ಕುಟುಂಬದ ಮೇಲೆ ಲಾರಿ ಹರಿಸಿ ನಾಲ್ವರನ್ನು ಹತ್ಯೆಗೈದ ಘಟನೆಯನ್ನು ಖಂಡಿಸಿ ಹಾಗೂ ಸಂತ್ರಸ್ತ ಕುಟುಂಬದ ಜೊತೆ ಐಕ್ಯಮತ್ಯ ಪ್ರದರ್ಶಿಸಲು ಶುಕ್ರವಾರ ಕೆನಡಾದಲ್ಲಿ ಸಾವಿರಾರು ಮಂದಿ ಜಾಥಾ ನಡೆಸಿದರು.
ಒಂದೇ ಕುಟುಂಬದ ನಾಲ್ವರು ತಮ್ಮ ಮನೆಯ ಸಮೀಪ ಸಂಜೆಯ ವಾಯು ವಿಹಾರಕ್ಕೆ ತೆರಳಿದ್ದಾಗ 20 ವರ್ಷದ ನಥಾನಿಯಲ್ ವೆಲ್ಟ್ಮನ್ ಎಂಬಾತ ಮುಸ್ಲಿಮ್ ದ್ವೇಷದಿಂದ ಅವರ ಮೇಲೆ ಲಾರಿ ಹರಿಸಿ ಪರಾರಿಯಾಗಿದ್ದ. ಪರಿಣಾಮ ಕುಟುಂಬದ ನಾಲ್ವರು ಸದಸ್ಯರು ಸ್ಥಳದಲ್ಲೇ ಮೃತಪಟ್ಟಿದ್ದರು. ಆದರೆ 9 ವರ್ಷದ ಓರ್ವ ಬಾಲಕ ಗಾಯಗಳೊಂದಿಗೆ ಪಾರಾಗಿದ್ದಾನೆ.
ಒಂಟಾರಿಯೊದ ಲಂಡನ್ ನಗರದಲ್ಲಿ ಈ ಘಟನೆ ನಡೆದಿದ್ದು, ಅಲ್ಲಿಂದ ಸುಮಾರು 7 ಕಿಲೋಮೀಟರ್ ದೂರದವರೆಗೆ ಸಾವಿರಾರು ಮಂದಿ ಮೆರವಣಿಗೆ ನಡೆಸಿದರು. ಸರ್ವ ಧರ್ಮೀಯರು ಮೆರವಣಿಗೆಯಲ್ಲಿ ಪಾಲ್ಗೊಂಡು ಒಂಟಾರಿಯೊದಲ್ಲಿ ಜಮಾವಣೆಗೊಂಡರು.
‘ದ್ವೇಷಕ್ಕೆ ಇಲ್ಲಿ ಜಾಗ ಇಲ್ಲ’, ‘ದ್ವೇಷಕ್ಕಿಂತ ಪ್ರೀತಿ ಮಿಗಿಲು’ ‘ಇಸ್ಲಾಮೋಫೋಬಿಯಾಕ್ಕೆ ಅವಕಾಶವಿಲ್ಲ’ ಮುಂತಾದ ಸಂದೇಶಗಳನ್ನು ಹೊಂದಿರುವ ಫಲಕಗಳನ್ನು ಮೆರವಣಿಗೆಯಲ್ಲಿ ಪ್ರದರ್ಶಿಸಲಾಯಿತು.
ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಈ ಹತ್ಯೆಯನ್ನು “ಭಯೋತ್ಪಾದಕ ದಾಳಿ” ಎಂದು ಕರೆದಿದ್ದಾರೆ ಮತ್ತು ಬಲಪಂಥೀಯ ಗುಂಪುಗಳು ಮತ್ತು ಆನ್‌ಲೈನ್ ದ್ವೇಷವನ್ನು ಹಿಮ್ಮೆಟ್ಟಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.