ನವದೆಹಲಿ: ಪ್ರವಾದಿ ಮುಹಮ್ಮದ್ (ಸ)ರವರ ಕುರಿತಾದ ಬಿಜೆಪಿಯ ಉನ್ನತ ನಾಯಕರ ಅವಹೇಳನಕಾರಿ ಟಿಪ್ಪಣಿಯ ವಿರುದ್ಧ ಪ್ರತಿಭಟನೆಯಲ್ಲಿ ತೊಡಗಿದ ಅಮಾಯಕ ಮುಸ್ಲಿಮರ ಮೇಲೆ ಪೊಲೀಸರು ನಡೆಸಿದ ಗುಂಡು ಹಾರಾಟ ಮತ್ತು ಹತ್ಯೆಗಳನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಕಾರ್ಯದರ್ಶಿ ಮುಹಮ್ಮದ್ ಶಾಕಿಫ್ ಖಂಡಿಸಿದ್ದಾರೆ.
ಜಾರ್ಖಂಡ್ ನ ರಾಂಚಿಯಲ್ಲಿ ಪೊಲೀಸರು ಪ್ರತಿಭಟನಕಾರರನ್ನು ಚದುರಿಸುವ ನೆಪದಲ್ಲಿ ಅಶ್ರುವಾಯು ಅಥವಾ ಜಲ ಫಿರಂಗಿಯನ್ನು ಬಳಸುವ ಬದಲು ನೇರವಾಗಿ ಗುಂಡು ಹಾರಾಟ ನಡೆಸಿದ್ದು, ಇದು ಇಬ್ಬರು ಅಪ್ರಾಪ್ತರ ಸಾವಿಗೆ ಕಾರಣವಾಯಿತು. ವರದಿಗಳ ಪ್ರಕಾರ, ಗುಂಡು ಹಾರಾಟದಿಂದ ಕನಿಷ್ಟ ಇತರ 15 ಮಂದಿ ಗಂಭೀರ ಗಾಯಗೊಂಡಿದ್ದಾರೆ. ನಿಂದನೆಗೈದ ಬಿಜೆಪಿಗರ ಬಂಧನಕ್ಕೆ ಆಗ್ರಹಿಸಿ ಶುಕ್ರವಾರದಂದು ಮುಸ್ಲಿಮರು ದೇಶಾದ್ಯಂತ ಪ್ರತಿಭಟನೆಯಲ್ಲಿ ತೊಡಗಿದರು ಮತ್ತು ಆ ಪ್ರತಿಭಟನೆಗಳು ಶಾಂತಿಯುತವಾಗಿದ್ದವು. ಪ್ರತಿಭಟನೆಯ ವೇಳೆ ನಡೆದ ಸಾವು-ನೋವುಗಳು ಪೊಲೀಸರ ಸ್ವೇಚ್ಛೆಯ ಕಾರ್ಯಾಚರಣೆಯ ಫಲಿತಾಂಶವಾಗಿತ್ತು ಮತ್ತು ನಿರಾಯುಧ ಪ್ರತಿಭಟನಕಾರರ ವಿರುದ್ಧ ಗುಂಡಿನ ದಾಳಿ ನಡೆಸಿದ ಘಟನೆಯ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಬೇಕಾಗಿದೆ ಎಂದು ಒತ್ತಾಯಿಸಿದರು.
ರಾಂಚಿಯಲ್ಲಿ ಶಾಂತಿಯುತ ಪ್ರತಿಭಟನಕಾರರ ಮೇಲೆ ಹಿಂದುತ್ವ ಗುಂಪುಗಳು ಕಲ್ಲು ತೂರಾಟ ನಡೆಸಿರುವ ಬಗ್ಗೆಯೂ ವರದಿಯಾಗಿದೆ. ಇದಕ್ಕೆ ಹೊರತಾಗಿ ರಾಂಚಿಯಲ್ಲಿ ನಡೆದ ಗುಂಡು ಹಾರಾಟದಲ್ಲಿ ಪ್ರಾಣ ಕಳೆದುಕೊಂಡ ಬಾಲಕರ ಪೈಕಿ ಓರ್ವನ ಕುಟುಂಬ ಸದಸ್ಯರು, ಮಾರಣಾಂತಿಕ ಗುಂಡು ಹಾರಾಟ ನಡೆಸಿರುವುದು ಹಿಂದುತ್ವ ಗುಂಪುಗಳೇ ಅಥವಾ ಪೊಲೀಸರೇ ಎಂಬ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಜಾರ್ಖಂಡ್ ಒಂದು ಬಿಜೆಪಿಯೇತರ ಆಡಳಿತ ಸರಕಾರವನ್ನು ಹೊಂದಿರುವ ನಿಟ್ಟಿನಲ್ಲಿ, ಹಿಂದುತ್ವ ಗೂಂಡಾಗಳು ಉದ್ದೇಶಪೂರ್ವಕವಾಗಿಯೇ ಇಲ್ಲಿ ಸಮಸ್ಯೆಯನ್ನು ಹುಟ್ಟು ಹಾಕುತ್ತಿದ್ದಾರೆಯೇ ಎಂಬುದರ ಬಗ್ಗೆಯೂ ತನಿಖೆಯಾಗಬೇಕಾಗಿದೆ ಎಂದರು.
ಈ ರಾಜ್ಯದಲ್ಲಿ ಪೊಲೀಸರನ್ನು ನಿಯಂತ್ರಿಸುವಲ್ಲಿ ಆಡಳಿತ ಸರಕಾರ ವಿಫಲವಾಗಿದೆ. ಪರಿಸ್ಥಿತಿಯ ಲಾಭ ಪಡೆಯಲು ಪ್ರದೇಶದ ಹಿಂದುತ್ವ ಶಕ್ತಿಗಳಿಗೆ ಪ್ರತಿಭಟನಾ ಸ್ಥಳಗಳಲ್ಲಿ ಮುಕ್ತ ಅವಕಾಶ ನೀಡಲಾಯಿತು. ಮುಸ್ಲಿಮರು ಪ್ರತಿಭಟಿಸುವ ತಮ್ಮ ಪ್ರಜಾಸತ್ತಾತ್ಮಕ ಹಕ್ಕನ್ನು ಚಲಾಯಿಸುವುದನ್ನು ತಡೆಯಲು ರಾಜ್ಯದ ಆಡಳಿತ ಯಂತ್ರ ಮತ್ತು ಹಿಂದುತ್ವ ಶಕ್ತಿಗಳು ಕೈಜೋಡಿಸಿ ಕಾರ್ಯಾಚರಣೆ ನಡೆಸಿದ್ದು ಕಂಡುಬಂದಿರುವುದು ದುಃಖದಾಯಕವಾಗಿದೆ. ಪೊಲೀಸರ ಈ ಬರ್ಬರ ಕೃತ್ಯದ ಹೊರತಾಗಿ ಯುಪಿಯಂತಹ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಪ್ರತಿಭಟನಕಾರರ ಮನೆಗಳ ಮೇಲೆ ಬುಲ್ಡೋಝರ್ ಕಾರ್ಯಾಚರಣೆಯು, ಮುಸ್ಲಿಮರನ್ನು ತಮ್ಮ ಘನತೆಯ ಅಸ್ತಿತ್ವಕ್ಕೆ ಸಂಬಂಧಿಸಿದ ಗಂಭೀರ ವಿಚಾರಗಳಲ್ಲೂ ಮೌನಗೊಳಿಸುವ ಹಿಂದುತ್ವ ಉದ್ದೇಶಗಳನ್ನು ಸ್ಪಷ್ಟವಾಗಿ ಪ್ರಕಟಪಡಿಸುತ್ತದೆ. ಅಸಮ್ಮತಿಗೆ ಶಿಕ್ಷೆಯ ರೂಪದಲ್ಲಿ ಪೊಲೀಸರ ಕಾರ್ಯಾಚರಣೆ ಮೂಲಭೂತ ಹಕ್ಕುಗಳ ಉಲ್ಲಂಘನೆಯ ಹೊರತಾಗಿ ಮತ್ತೇನೂ ಅಲ್ಲ ಎಂದರು.
ರಾಜ್ಯ ಸರಕಾರಗಳು ಮತ್ತು ಕಾನೂನು ಪಾಲನೆಯ ಏಜೆನ್ಸಿಗಳನ್ನು ನಿಯಂತ್ರಣದಲ್ಲಿಡಲು ದೇಶದ ನ್ಯಾಯಾಲಯಗಳು ತುರ್ತು ಮಧ್ಯಪ್ರವೇಶ ನಡೆಸಬೇಕೆಂದು ಪಾಪ್ಯುಲರ್ ಫ್ರಂಟ್ ಮನವಿ ಮಾಡುತ್ತದೆ. ಸರಕಾರವು ಪ್ರವಾದಿಯವರ ಅವಹೇಳನ ನಡೆಸಿದವರ ವಿರುದ್ಧ ಕೂಡಲೇ ಕಾನೂನು ಕ್ರಮ ಜರಗಿಸಬೇಕಾಗಿದೆ. ಅದೇ ರೀತಿ ಸಾವುನೋವಿಗೆ ಕಾರಣವಾದ ಗುಂಡು ಹಾರಾಟದ ಆದೇಶ ನೀಡಿದ ಹೊಣೆಗಾರರಾದ ಪೊಲೀಸ್ ಅಧಿಕಾರಿಗಳ ವಿರುದ್ಧವೂ ಕಾನೂನು ಕ್ರಮಕೈಗೊಳ್ಳಬೇಕೆಂದು ಪಾಪ್ಯುಲರ್ ಫ್ರಂಟ್ ಒತ್ತಾಯಿಸುತ್ತದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.