ಮಹಾರಾಷ್ಟ್ರದಲ್ಲಿ ಬೀಫ್ ಬೇಡ, ಗೋವಾದಲ್ಲಿ ಬೇಕು, ಇದು ನಿಮ್ಮ ‘ಹಿಂದುತ್ವ’ವೇ? : ರಾಜ್ಯಪಾಲರಿಗೆ ಸಿಎಂ ಠಾಕ್ರೆ ಪ್ರಶ್ನೆ

Prasthutha|

ಮುಂಬೈ : ಮಹಾರಾಷ್ಟ್ರ ರಾಜ್ಯಪಾಲ ಮತ್ತು ಮುಖ್ಯಮಂತ್ರಿ ನಡುವಿನ ತಿಕ್ಕಾಟ ಈಗ ಬಹಿರಂಗವಾಗಿದೆ. ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರ ಹೇಳಿಕೆಯೊಂದಕ್ಕೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಬಿಜೆಪಿಯ ‘ಹಿಂದುತ್ವ’ ಮತ್ತು ಬೀಫ್ ರಾಜಕಾರಣದ ಕುರಿತು ವ್ಯಂಗ್ಯವಾಡಿದ್ದಾರೆ.

- Advertisement -

“ನಾವು ದೇವಸ್ಥಾನ ತೆರೆದಿಲ್ಲ ಎಂದು ಕೆಲವರು ನಮಗೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ನೀವು ಹಿಂದುತ್ವದ ಬಗ್ಗೆ ಮಾತನಾಡುತ್ತೀರಿ. ಮಹಾರಾಷ್ಟ್ರದಲ್ಲಿ ಬೀಫ್ ಗೆ ನಿಷೇಧ ಹೇರುತ್ತೀರಿ, ಆದರೆ ಗೋವಾದಲ್ಲಿ ಬೀಫ್ ಮಾರಾಟಕ್ಕೆ ನಿಮಗೆ ಯಾವುದೇ ಅಡ್ಡಿಯಿಲ್ಲ. ಇದು ನಿಮ್ಮ ಹಿಂದುತ್ವವೇ?’’ ಎಂದು ಠಾಕ್ರೆ, ರಾಜ್ಯಪಾಲರ ಹೆಸರು ಉಲ್ಲೇಖಿಸದೆಯೇ ಪ್ರಶ್ನಿಸಿದ್ದಾರೆ.

ಹಿಂದುತ್ವದ ಕುರಿತು ಅರ್ಥ ಮಾಡಿಕೊಳ್ಳಲು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ರ ಭಾಷಣ ಕೇಳುವಂತೆ ರಾಜ್ಯಪಾಲರಿಗೆ ಅವರು ಸಲಹೆ ನೀಡಿದ್ದಾರೆ.

- Advertisement -

“ಹಿಂದುತ್ವ ಕೇವಲ ಪೂಜೆಗೆ ಸೀಮಿತವಾಗಿಲ್ಲ ಎಂದು ಮೋಹನ್ ಭಾಗವತ್ ಹೇಳಿದ್ದಾರೆ. ಹೀಗಾಗಿ, ಕಪ್ಪು ಟೊಪ್ಪಿ ಧರಿಸುವವರು ಮತ್ತು ನಮ್ಮನ್ನು ಪ್ರಶ್ನಿಸುವವರು ಹಾಗೂ ಜಾತ್ಯತೀತರೆಂದು ಕರೆಯುವವರು ಭಾಗವತ್ ರ ಇಂದಿನ ಭಾಷಣ ಕೇಳಬೇಕು’’ ಎಂದು ಠಾಕ್ರೆ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಪುಜಾಸ್ಥಳಗಳನ್ನು ತೆರೆಯದಿರುವುದಕ್ಕೆ ಕೋಶಿಯಾರಿ ಸಿಎಂ ಠಾಕ್ರೆ ಅವರನ್ನು ಪ್ರಶ್ನಿಸಿ ಪತ್ರ ಬರೆದಿದ್ದರು. ನೀವೂ ‘ಜಾತ್ಯತೀತ’ರಾಗಿದ್ದೀರಾ ಎಂದು ಅವರು ಪ್ರಶ್ನಿಸಿದ್ದರು.



Join Whatsapp