– ನಾ. ದಿವಾಕರ
ಅತ್ಯಾಚಾರಕ್ಕೊಳಗಾದ ಮನಿಷಾ ಹಲವು ದಿನಗಳ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಮತ್ತದೇ ಹಲವು ಲಕ್ಷ ರೂಗಳ ಪರಿಹಾರ, ತನಿಖೆ, ವಿಚಾರಣೆ, ಆರೋಪಿಗಳಿಗೆ ಜಾಮೀನು , ನಂತರ ಸಾಕ್ಷ್ಯಾಧಾರಗಳಿಲ್ಲದೆ ಬಿಡುಗಡೆ. ಮನೀಷಾಳ ನಾಲಿಗೆ ಕತ್ತರಿಸಲಾಗಿದೆ, ಕಾಲು ತುಂಡಾಗಿದೆ ಎನ್ನಲಾಗಿದೆ. ಆದರೂ ಅತ್ಯಾಚಾರಿಗಳ ರಕ್ಷಣೆಗೆ ಯೋಗಿರಾಜ್ಯದ ಸವರ್ಣೀಯರು ಟೊಂಕಕಟ್ಟಿ ನಿಂತಿದ್ದಾರೆ.
ಉತ್ತರ ಪ್ರದೇಶ ಭಾರತದ ಅತ್ಯಾಚಾರ ಪ್ರದೇಶ ಆಗಿದೆ. ಯೋಗಿಯ ರಾಮರಾಜ್ಯದಲ್ಲಿ ಸೀತೆಯರಿಗೆ ರಕ್ಷಣೆಯಿಲ್ಲದಂತಾಗಿದೆ. ಈಗ ಮತ್ತೋರ್ವ ಯುವತಿ ಮನೀಷಾ ವಾಲ್ಮೀಕಿ ಅತ್ಯಾಚಾರಕ್ಕೊಳಗಾಗಿ ಹತ್ಯೆಗೀಡಾಗಿದ್ದಾಳೆ. ದಲಿತ ಸಮುದಾಯಕ್ಕೆ ಸೇರಿದ 19 ವರ್ಷದ ಮನೀಷಾ ನಾಲ್ವರು ದುಷ್ಕರ್ಮಿಗಳ ಕಾಮತೃಷೆಗೆ ಬಲಿಯಾಗಿದ್ದಾಳೆ. ಎಂದಿನಂತೆ ಆರೋಪಿಗಳು ಮೇಲ್ಜಾತಿಯವರಾಗಿದ್ದಾರೆ. ಆರೋಪಿಗಳನ್ನು ಬಂಧಿಸಲಾಗಿದೆ, ಅತ್ಯಾಚಾರಕ್ಕೊಳಗಾದ ಮನಿಷಾ ಹಲವು ದಿನಗಳ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಮತ್ತದೇ ಹಲವು ಲಕ್ಷ ರೂಗಳ ಪರಿಹಾರ, ತನಿಖೆ, ವಿಚಾರಣೆ, ಆರೋಪಿಗಳಿಗೆ ಜಾಮೀನು , ನಂತರ ಸಾಕ್ಷ್ಯಾಧಾರಗಳಿಲ್ಲದೆ ಬಿಡುಗಡೆ. ಮನೀಷಾಳ ನಾಲಿಗೆ ಕತ್ತರಿಸಲಾಗಿದೆ, ಕಾಲು ತುಂಡಾಗಿದೆ ಎನ್ನಲಾಗಿದೆ. ಆದರೂ ಅತ್ಯಾಚಾರಿಗಳ ರಕ್ಷಣೆಗೆ ಯೋಗಿರಾಜ್ಯದ ಸವರ್ಣೀಯರು ಟೊಂಕಕಟ್ಟಿ ನಿಂತಿದ್ದಾರೆ.
ಯೋಗಿ ಆಡಳಿತದಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗುವುದಿಲ್ಲ ಎನ್ನುವುದು ಸಾಕಷ್ಟು ಬಾರಿ ನಿರೂಪಿತವಾಗಿದೆ. ನಿರಪರಾಧಿಗಳಿಗೆ ಉಗ್ರ ಶಿಕ್ಷೆ ಆಗುವುದನ್ನೂ ಕಫೀಲ್ ಖಾನ್ ಪ್ರಕರಣದಲ್ಲಿ ಕಂಡಿದ್ದೇವೆ. ಇದು ಬದಲಾಗುತ್ತಿರುವ ಭಾರತದ ದಿಕ್ಸೂಚಿ. ದೆಹಲಿ ಗಲಭೆಗಳಲ್ಲೂ ಗೋಲಿ ಮಾರೋ ಸಾಲೋಂಕೋ ಎಂದವರು, ಪೊಲೀಸರ ಎದುರಿನಲ್ಲೇ ಬಂದೂಕು ಬಳಸಿದವರು ಮುಕ್ತವಾಗಿ ಓಡಾಡುತ್ತಿದ್ದು ಅಮಾಯಕ ಉಮರ್ ಖಲೀದ್ ಬಂಧನಕ್ಕೊಳಗಾಗಿದ್ದಾನೆ. ಇದು ಪ್ರವರ್ಧಮಾನಕ್ಕೆ ಬರುತ್ತಿರುವ ನವ ಭಾರತದ ಹೊಸ ರೂಪ. ಉತ್ತರ ಪ್ರದೇಶ ಒಂದು ಪ್ರಾತ್ಯಕ್ಷಿಕೆ .
ಸಮಾಜ ಎನ್ನುವುದು ಬಲಾಢ್ಯರ ಹಿಡಿತದಲ್ಲಿರುತ್ತದೆ. ಬಲಾಢ್ಯರನ್ನು ಸಮಾಜದ ಮೇಲ್ ಸ್ತರದ ಸಮುದಾಯ ಪ್ರತಿನಿಧಿಸುತ್ತದೆ. ಈ ಚಕ್ರವ್ಯೂಹಕ್ಕೆ ಅಮಾಯಕ ಮಹಿಳೆಯರು ಬಲಿಯಾಗುತ್ತಲೇ ಇದ್ದಾರೆ. ಮನೀಷಾ ವಾಲ್ಮೀಕಿ ಮತ್ತೊಂದು ಜೀವ. ಪ್ರತಿಯೊಂದು ಅತ್ಯಾಚಾರ ನಡೆದಾಗಲೂ ಕಠಿಣ ಕಾನೂನುಗಳನ್ನು ಉಲ್ಲೇಖಿಸುವ ಸರಕಾರಗಳಿಗೆ ಮನೀಷಾಳಂತಹ ಜೀವಗಳು ನಿಕೃಷ್ಟವಾಗಿ ಕಾಣುತ್ತವೆ. ಏಕೆಂದರೆ ಇದು ದೆಹಲಿ, ಕೊಲ್ಕತ್ತಾ, ಬೆಂಗಳೂರಿನಲ್ಲಿ ನಡೆದುದಲ್ಲ. ರಾಜಕೀಯವಾಗಿ ಲಾಭದಾಯಕವೂ ಅಲ್ಲ.
ಭಾರತದಂತಹ ಪಿತೃಪ್ರಧಾನ ಸಮಾಜದಲ್ಲಿ ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸಿದರೆ ಗಲ್ಲಿಗೇರುವವರು ಹೆಚ್ಚಾಗುತ್ತಾರೆಯೇ ವಿನಃ ಅತ್ಯಾಚಾರ, ದೌರ್ಜನ್ಯ ಕಡಿಮೆಯಾಗುವುದಿಲ್ಲ. ನಿರ್ಭಯ ಪ್ರಕರಣದ ನಂತರ ಮಹಿಳೆಯರ ರಕ್ಷಣೆಗಾಗಿ ಕಠಿಣ ಕಾನೂನು ರೂಪಿಸಿದ ಪ್ರಭುತ್ವಕ್ಕೆ ಭಾರತೀಯ ಸಮಾಜದಲ್ಲಿ ಅಂತರ್ಗತವಾಗಿರುವ ಪಿತೃ ಪ್ರಧಾನ ಧೋರಣೆ ಮತ್ತು ಮಹಿಳೆಯನ್ನು ಭೋಗವಸ್ತುವಿನಂತೆ ನೋಡುವ ಪುರುಷ ಸಮಾಜದ ಧೋರಣೆಯೂ ಅರ್ಥವಾಗಿರಬೇಕು. ಕಾನೂನು ಅಪರಾಧವನ್ನು ತಡೆಗಟ್ಟುವ ಸಾಧನವಾಗಲಾರದು, ಅಪರಾಧ ಎಸಗುವವರಲ್ಲಿ ಭೀತಿ ಹುಟ್ಟಿಸಬಹುದಷ್ಟೆ. ಆದರೆ ಅಸಹಾಯಕ, ಅಮಾಯಕ ಮತ್ತು ದುರ್ಬಲ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಅತ್ಯಾಚಾರ ನಡೆಸುವವರ ದೃಷ್ಟಿ ಕಾನೂನು ಪುಸ್ತಕದ ಮೇಲಿರುವುದಿಲ್ಲ, ಮಹಿಳೆಯ ಮೇಲಿರುತ್ತದೆ. ನಮಗೆ ಶಿಕ್ಷೆಯಾಗುವುದಿಲ್ಲ ಎನ್ನುವ ಭಂಡತನ ಬೆಳೆಸಲು ರಾಜಕೀಯ ನಾಯಕರು ವ್ಯವಸ್ಥಿತವಾಗಿ ಪ್ರಯತ್ನಿಸಿದ್ದಾರೆ. ತನಿಖೆ ನಡೆಸುವ ಪೊಲೀಸ್ ಇಲಾಖೆ ಭಂಡ ಅತ್ಯಾಚಾರಿಗಳಿಗೆ, ಭ್ರಷ್ಟ ನಾಯಕರಿಗೆ ಒತ್ತಾಸೆಯಾಗಿ ನಿಲ್ಲುತ್ತದೆ. “ಅವರು ಮೇಲ್ಜಾತಿಯವರು ಕೆಳಜಾತಿಯ ಮಹಿಳೆಯ ಅತ್ಯಾಚಾರ ಮಾಡಿರಲಾರರು” ಎಂಬ ಮಾತನ್ನು ನ್ಯಾಯಪೀಠದಲ್ಲಿ ಕೇಳಿರುವ ದೇಶ ನಮ್ಮದು.
ಜನಕವಿ ಸಾಹಿರ್ ಲುಧಿಯಾನ್ವಿ , ಫಿರ್ ಸುಬಹ್ ಹೋಗಿ ಚಿತ್ರದ ಹಾಡೊಂದರಲ್ಲಿ ” ಮಿಟ್ಟಿ ಕಾ ಭೀ ಹೈ ಕುಚ್ ಮೋಲ್ ಮಗರ್ ಇನ್ಸಾನ್ ಕಿ ಕೀಮತ್ ಕುಚ್ ಭೀ ನಹೀ ” ಎಂದು ಹೇಳುತ್ತಾರೆ. ಆರು ದಶಕಗಳು ಕಳೆದರೂ ಭಾರತ ಬದಲಾಗಿಲ್ಲ. ಏಕೆಂದರೆ ಇಲ್ಲಿ ಮಾನವ ಜೀವಕ್ಕೆ ಅಸ್ಮಿತೆ ಇರುವಂತೆಯೇ ಸಾವಿಗೂ ಅಸ್ಮಿತೆಯಿದೆ, ಶವಗಳಿಗೂ ಅಸ್ಮಿತೆ ಇದೆ. ಅಪರಾಧವನ್ನು ನಿಗ್ರಹಿಸಲು ಕಾನೂನು, ಪೊಲೀಸ್, ನ್ಯಾಯ ವ್ಯವಸ್ಥೆ ಇದ್ದರೂ ಅಪರಾಧಿಯ ನಿಷ್ಕರ್ಷೆಯನ್ನು ಸಾಕಷ್ಟು ಸಂದರ್ಭಗಳಲ್ಲಿ ಸಮಾಜವೇ ಮಾಡುತ್ತದೆ. ಸಮಾಜ ಎನ್ನುವುದು ಬಲಾಢ್ಯರ ಹಿಡಿತದಲ್ಲಿರುತ್ತದೆ. ಬಲಾಢ್ಯರನ್ನು ಸಮಾಜದ ಮೇಲ್ ಸ್ತರದ ಸಮುದಾಯ ಪ್ರತಿನಿಧಿಸುತ್ತದೆ. ಈ ಚಕ್ರವ್ಯೂಹಕ್ಕೆ ಅಮಾಯಕ ಮಹಿಳೆಯರು ಬಲಿಯಾಗುತ್ತಲೇ ಇದ್ದಾರೆ. ಮನೀಷಾ ವಾಲ್ಮೀಕಿ ಮತ್ತೊಂದು ಜೀವ. ಪ್ರತಿಯೊಂದು ಅತ್ಯಾಚಾರ ನಡೆದಾಗಲೂ ಕಠಿಣ ಕಾನೂನುಗಳನ್ನು ಉಲ್ಲೇಖಿಸುವ ಸರಕಾರಗಳಿಗೆ ಮನೀಷಾಳಂತಹ ಜೀವಗಳು ನಿಕೃಷ್ಟವಾಗಿ ಕಾಣುತ್ತವೆ. ಏಕೆಂದರೆ ಇದು ದೆಹಲಿ, ಕೊಲ್ಕತ್ತಾ, ಬೆಂಗಳೂರಿನಲ್ಲಿ ನಡೆದುದಲ್ಲ. ರಾಜಕೀಯವಾಗಿ ಲಾಭದಾಯಕವೂ ಅಲ್ಲ.
ಈಗಾಗಲೇ ಉತ್ತರ ಪ್ರದೇಶದ ಪೊಲೀಸರು ಮನೀಷಾ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳಿಲ್ಲ ಎಂದು ನಿರೂಪಿಸಲು ರಂಗಸಜ್ಜಿಕೆ ಮಾಡಿರುತ್ತಾರೆ. ಆರೋಪಿಗಳ ಪರ ಮೇಲ್ಜಾತಿಯ ಬಲಾಢ್ಯರು ಸರಕಾರದ ಮೇಲೆ ಒತ್ತಡ ಹೇರಲಾರಂಭಿಸಿರುತ್ತಾರೆ. ಇನ್ನು ಕೆಲವೇ ದಿನಗಳಲ್ಲಿ ಮನೀಷಾ ಹತ್ತು ಜನರಲ್ಲೊಬ್ಬಳಾಗುತ್ತಾಳೆ. ಊಳಿಗಮಾನ್ಯ ಧೋರಣೆ, ಮೇಲ್ಜಾತಿಯ ಪ್ರಾಬಲ್ಯ, ಬಲಪಂಥೀಯ ರಾಜಕಾರಣ, ಕೋಮು ದ್ವೇಷ, ಜಾತಿ ಶ್ರೇಷ್ಠತೆಯ ವ್ಯಸನ ಈ ಎಲ್ಲ ಅನಿಷ್ಟಗಳನ್ನೂ ವ್ಯವಸ್ಥಿತವಾಗಿ ಒಡಲಲ್ಲಿ ಕಾಪಿಟ್ಟುಕೊಂಡಿರುವ ಹಾಲಿ ಯೋಗಿ ರಾಜ್ಯದಲ್ಲಿ ಶೋಷಿತ ಸಮುದಾಯಗಳು ನಿರಂತರ ದೌರ್ಜನ್ಯ ಎದುರಿಸುತ್ತಲೇ ಇವೆ. ದಲಿತ ಸಮುದಾಯದ ಹೆಣ್ಣುಮಕ್ಕಳು ನಿರಂತರ ದೌರ್ಜನ್ಯ, ಅತ್ಯಾಚಾರಕ್ಕೊಳಗಾಗುತ್ತಲೇ ಇದ್ದಾರೆ. ನ್ಯಾಯಕ್ಕಾಗಿ ಹಂಬಲಿಸುತ್ತಲೇ ಇದ್ದಾರೆ. ನ್ಯಾಯ ಮರೀಚಿಕೆಯಾಗಿಯೇ ಇದೆ.
ಅಂತರ್ಜಾತಿ ವಿವಾಹ ಮೇಲ್ಜಾತಿಗಳ ಗೌರವಕ್ಕೆ ಧಕ್ಕೆ ಉಂಟು ಮಾಡುತ್ತದೆ , ಗೌರವ-ಮರ್ಯಾದಾ ಹತ್ಯೆಗಳು ನಡೆಯುತ್ತವೆ. ಆದರೆ ಮಹಿಳೆಯ ಮೇಲಿನ ಅತ್ಯಾಚಾರ ಸದಾ ಅಂತರ್ಜಾತಿಯೇ ಆಗಿರುತ್ತದೆ. ದಲಿತ ಹೆಣ್ಣುಮಕ್ಕಳ ಸ್ಪರ್ಶವನ್ನೇ ಪಾಪ ಎಂದು ಭಾವಿಸುವ ಮೇಲ್ಜಾತಿ ಪುರುಷರಿಗೆ , ದಲಿತ ಹೆಣ್ಣಿನ ಮೇಲೆ ಅತ್ಯಾಚಾರವೆಸಗುವುದು ಮಲಿನ ಎನಿಸುವುದಿಲ್ಲ. ಏಕೆಂದರೆ ಇಲ್ಲಿ ಜಾತಿ ವಿಷದೊಡನೆ ಪುರುಷ ಬಲದ ವಿಕೃತ ರಾಕ್ಷಸೀ ಪ್ರವೃತ್ತಿ ಸೇರಿರುತ್ತದೆ. ವಿವಾಹ ಮಾಡಿಕೊಳ್ಳುವ ದಲಿತ ಹೆಣ್ಣೂ ಹತ್ಯೆಗೀಡಾಗುತ್ತಾಳೆ. ಅತ್ಯಾಚಾರಕ್ಕೊಳಗಾದವರೂ ಹತ್ಯೆಗೀಡಾಗುತ್ತಾರೆ. ಎರಡೂ ಸಂದರ್ಭಗಳಲ್ಲಿ ಪ್ರಥಮ ಅಪರಾಧಿಯಾಗಿ ವ್ಯಕ್ತಿ ಪಾರಾಗುತ್ತಾನೆ. ಮೂಲ ಅಪರಾಧಿಯಾಗಿ ಈ ವ್ಯವಸ್ಥೆ ಜಾಣ ಮೌನಕ್ಕೆ ಜಾರುತ್ತದೆ. ದಲ್ಲಾಳಿಯಾಗಿ ಸರಕಾರ ಧನ ಪರಿಹಾರ ನೀಡಿ ಪಾಪಪ್ರಜ್ಞೆಯನ್ನು ಕಳೆದುಕೊಳ್ಳುತ್ತದೆ. ಇದು 73 ವರ್ಷಗಳ ಸ್ವತಂತ್ರ ಭಾರತದಲ್ಲಿ ನಾವು ನೋಡುತ್ತಿರುವ ದುರಂತ.
ಇದು ಒಂದು ರಾಜ್ಯದ ಪ್ರಶ್ನೆಯಲ್ಲ. ಒಂದು ಸಮುದಾಯದ ಪ್ರಶ್ನೆಯೂ ಅಲ್ಲ. ಇದು ಈ ದೇಶದ ಮಹಿಳೆಯರ ಸಮಸ್ಯೆ, ಹೆಣ್ತನದ ಘನತೆಯ ಸಮಸ್ಯೆ. ದಲಿತ ಮಹಿಳೆಯರ ಸಂದರ್ಭದಲ್ಲಿ ಜಾತಿ ವಿಷ ಸೇರಿಕೊಳ್ಳುತ್ತದೆ. ಈ ಹೆಣ್ತನದ ಘನತೆಯನ್ನು ಗೌರವಿಸುವ ಕನಿಷ್ಟ ಸೌಜನ್ಯವನ್ನೂ ನಮ್ಮ ಸಮಾಜ, ರಾಜಕಾರಣ ಕಳೆದುಕೊಂಡಿದೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ರಾಷ್ಟ್ರೀಯ ರಾಜಕೀಯ ಪಕ್ಷದ ಪ್ರಧಾನ ಕಾರ್ಯದರ್ಶಿ ಅನುಪಮ್ ಹಜ್ರಾ ” ನನಗೆ ಕೊರೋನ ಸೋಂಕು ತಗುಲಿದರೆ ಮಮತಾ ಬ್ಯಾನರ್ಜಿಯನ್ನು ತಬ್ಬಿಕೊಂಡು ಅವರಿಗೆ ಸೋಂಕು ತಗುಲಿಸುತ್ತಿದ್ದೆ ” ಎಂದು ಬಹಿರಂಗ ಹೇಳಿಕೆ ನೀಡುತ್ತಾರೆ. ” ಮುಸ್ಲಿಂ ಮಹಿಳೆಯರ ಶವಗಳನ್ನು ಗೋರಿಯಿಂದ ಹೊರತೆಗೆದು ಅತ್ಯಾಚಾರ ಮಾಡಬೇಕು ” ಎಂದು ಹೇಳಿದ ಮತಾಂಧನ ವಿಕೃತಿಯನ್ನು ನಗುನಗುತ್ತಾ ಆಸ್ವಾದಿಸಿದ ಬಿಜೆಪಿ ಸಂಸದ ಅಜಯ್ ಬಿಷ್ಟ್ ಈಗ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಲು ಹಂಬಲಿಸುತ್ತಿದ್ದಾರೆ. ಭಾರತೀಯ ಸಂಸ್ಕೃತಿಯ ವಾರಸುದಾರರು ದಿವ್ಯ ಮೌನ ವಹಿಸುತ್ತಾರೆ. ಪಕ್ಷ ಈ ರೀತಿಯ ಹೇಳಿಕೆಗಳನ್ನು ಖಂಡಿಸುವುದಿರಲಿ ಗಮನಿಸುವುದೂ ಇಲ್ಲ. ವಾಜಪೇಯಿ ಬದುಕಿದ್ದರೆ ಕನಿಷ್ಡ ಪಕ್ಷ ” ಐಸಾ ನಹ್ಞೀ ಬೋಲ್ನಾ ಥಾ ಏ ಠೀಕ್ ನಹ್ಞೀ ಹೈ ” ಎಂದು ಮುದ್ದುಮುದ್ದಾಗಿ ಹೇಳುತ್ತಿದ್ದರೇನೋ. ಈ ಮನೋಭಾವವೇ ಅತ್ಯಾಚಾರಿಗಳನ್ನು ನಿತ್ಯಾಚಾರಿಗಳನ್ನಾಗಿ ಮಾಡುತ್ತದೆ. ಮನೀಷಾಳಂತಹ ದುರ್ಬಲರು ಇಂತಹ ವಿಕೃತಿಗಳಿಗೆ ಬಲಿಯಾಗುತ್ತಾರೆ.
ಈ ವಿಕೃತಿಯ ಮೂಲ ನಮ್ಮ ಸಾಮಾಜಿಕ ಸಂರಚನೆಯ ಚೌಕಟ್ಟಿನಲ್ಲೇ ಇದೆ. ನಮ್ಮ ಸಮಾಜೋ ಸಾಂಸ್ಕೃತಿಕ ಬದುಕಿನ ಗರ್ಭದಲ್ಲೇ ಇದೆ. ಬಾವರಿದೇವಿಯಿಂದ ಮನೀಷಾಳವರೆಗೆ, ಮಥುರಾದಿಂದ ಇತ್ತೀಚಿನ ಹತ್ಸಾರ್ ಗ್ರಾಮದವರೆಗೆ ಈ ಗರ್ಭದಿಂದ ಜನಿಸಿದ ರಕ್ಕಸ ಸಂತಾನಕ್ಕೆ ಸಾವಿರಾರು ಹೆಣ್ಣು ಮಕ್ಕಳು ಬಲಿಯಾಗಿದ್ದಾರೆ. ಪುರುಷ ಪ್ರಧಾನ ಧೋರಣೆ ಮತ್ತು ಪುರುಷಾಧಿಪತ್ಯದ ಮೌಲ್ಯಗಳನ್ನು ಸಾಮಾಜಿಕ ಬದುಕಿನಿಂದ ತೊಡೆದುಹಾಕುವ ನಿಟ್ಟಿನಲ್ಲಿ ಆಡಳಿತ ವ್ಯವಸ್ಥೆ ಯಾವುದೇ ಶೈಕ್ಷಣಿಕ ಕ್ರಮಗಳನ್ನು ಕೈಗೊಂಡಿಲ್ಲ . ಏಕೆಂದರೆ ಈ ಮೌಲ್ಯಗಳೇ ಅಧಿಕಾರ-ಅಧಿಪತ್ಯ ರಾಜಕಾರಣದ ಬುನಾದಿಯಾಗಿದೆ. ಈ ರಾಜಕಾರಣದಲ್ಲಿ ಮಹಿಳೆಯರಿಗೆ ಸಮಾನ ಸ್ಥಾನಮಾನಗಳನ್ನು ನೀಡಲೂ ಈ ಮೌಲ್ಯಗಳೇ ಅಡ್ಡಿಯಾಗುತ್ತಿವೆ. ಹೆಣ್ತನದ ಘನತೆಯನ್ನು ರಕ್ಷಿಸುವ ಹಾದಿಯಲ್ಲೂ ಈ ಮೌಲ್ಯಗಳೇ ತಡೆಗೋಡೆಗಳಾಗುತ್ತವೆ.
ಇದು ತಾತ್ವಿಕವಾಗಿ ಗಂಡು ಹೆಣ್ಣಿನ ಪ್ರಶ್ನೆಯಾದರೂ, ಮೂಲತಃ ಪುರುಷಾಧಿಪತ್ಯ ಮತ್ತು ಹೆಣ್ತನದ ನಡುವಿನ ಸಂಘರ್ಷವಾಗಿದೆ. ಹೆಣ್ತನ ಮತ್ತು ಹೆಣ್ತನದ ಗೌರವ ಸತತ ದಾಳಿಗೊಳಗಾಗುತ್ತಿದೆ. ಮೌಖಿಕ ಅತ್ಯಾಚಾರದಲ್ಲಿ ನಿಷ್ಣಾತರಾಗಿರುವ ರಾಜಕೀಯ ನಾಯಕರುಗಳ ಬೃಹತ್ ದಂಡು ನಮ್ಮ ಶಾಸನ ಸಭೆಗಳಲ್ಲಿದ್ದಾರೆ. ಇಂತಹ ವಿಕೃತ ಪಿಶಾಚಿಗಳನ್ನು ಬೆಂಬಲಿಸುವ ಮಹಿಳಾ ಸಮೂಹವೂ ನಮ್ಮ ನಡುವೆ ಇದೆ. ಜಾತಿ ಅಸ್ಮಿತೆ, ಮತಧರ್ಮ ಶ್ರೇಷ್ಠತೆ, ಅಂತಸ್ತಿನ ಅಹಮಿಕೆ ಮತ್ತು ಸಾಂಸ್ಕೃತಿ ರಾಜಕಾರಣದ ಸನ್ನಿ ಭಾರತದ ಸುಶಿಕ್ಷಿತ, “ನಾಗರಿಕ” ಮತ್ತು “ಪ್ರಜ್ಞಾವಂತ” ಪ್ರಜೆಗಳನ್ನೂ ನಿರ್ಲಜ್ಜರನ್ನಾಗಿ ಮಾಡುತ್ತಿದೆ. ಹಾಗಾಗಿಯೇ ಮನೀಷಾ ಅನಾಥಳಂತೆ ಕಾಣುತ್ತಾಳೆ. ಮನೀಷಾಗೆ ಹಿಂದೂ ಹಣೆಪಟ್ಟಿ ಇಲ್ಲ ಅತ್ಯಾಚಾರಿಗಳಿಗೆ ಮುಸ್ಲಿಂ ಹಣೆಪಟ್ಟಿ ಇಲ್ಲ. ಹಾಗಾಗಿ ಸಾಂಸ್ಕೃತಿಕ ಆರಕ್ಷಕರು ನಿರಾಳವಾಗಿರುತ್ತಾರೆ. ಒಂದು ವೇಳೆ ಅತ್ಯಾಚಾರಿಗಳಲ್ಲಿ ರಾಮ್, ಲವ್ ಕುಶ್ ಬದಲು ಅಬ್ಬಾಸ್, ಹುಸೇನ್ ಇದ್ದಿದ್ದರೆ ವಿಷಯ ಸಂಸತ್ತಿನಲ್ಲಿ ಮೊಳಗುತ್ತಿತ್ತು ಇದು ಕಳೆದ ಮೂರು ದಶಕಗಳಲ್ಲಿ ಭಾರತ ಕಂಡುಕೊಂಡಿರುವ ” ಶವ ರಾಜಕಾರಣ “ದ ಪ್ರತಿಫಲ.
ತಮ್ಮ ಮೇಲೆ ನಡೆದ ದೌರ್ಜನ್ಯ, ಆಕ್ರಮಣ, ದಬ್ಬಾಳಿಕೆ ಮತ್ತು ಅತ್ಯಾಚಾರಗಳಿಗೆ ತಾವೇ ಸಾಕ್ಷ್ಯಾಧಾರಗಳನ್ನು ಒದಗಿಸಿ ನ್ಯಾಯ ಪಡೆಯಬೇಕಾದ ಪರಿಸ್ಥಿತಿಯಲ್ಲಿ ಈ ದೇಶದ ಶೇ ೫೦ ರಷ್ಟಿರುವ ಜನಸಮುದಾಯಗಳು ಬದುಕುತ್ತಿವೆ. ಮಹಿಳೆಯರು, ದಲಿತ ಮತ್ತು ಅಲ್ಪಸಂಖ್ಯಾತರು ಇದರ ಒಂದು ಭಾಗವಾಗಿದ್ದಾರೆ. ಮನೀಷಾ ಇಂತಹ ನತದೃಷ್ಟ ಸಂತ್ರಸ್ತರನ್ನು ಪ್ರತಿನಿಧಿಸುವ ಅಸಹಾಯಕ ಮಹಿಳೆಯಾಗಿದ್ದಾಳೆ. ಈ ಪರಿಸ್ಥಿತಿಗೆ ಯಾರು ಕಾರಣ ? ಸಮಾಜ, ಸಂಸ್ಕೃತಿ, ರಾಜಕಾರಣ, ಪ್ರಭುತ್ವ, ನ್ಯಾಯಾಂಗ, ಸರಕಾರಗಳು, ಪುರುಷ ಸಮಾಜ , ಶಿಕ್ಷಣ ವ್ಯವಸ್ಥೆ ಓಹ್ ಯಾರತ್ತ ಬೆಟ್ಟು ತೋರುವುದು ? ಇದು ನಮ್ಮೆಲ್ಲರನ್ನೂ, ಅಂದರೆ ವಿವೇಕ, ಸೌಜನ್ಯ, ಸಂವೇದನೆ, ಸಭ್ಯತೆ, ಮನುಜ ಪ್ರಜ್ಞೆ, ಮಾನವೀಯತೆ ಇರುವ, ಎಲ್ಲರನ್ನೂ ಕಾಡಬೇಕಿರುವ ಪ್ರಶ್ನೆ. ಇದಾವುದೂ ಇಲ್ಲದವರು ಅಧಿಕಾರ ಪೀಠಗಳಲ್ಲಿರುವುದೇಕೆ ಎನ್ನುವುದು ಮತ್ತೊಂದು ಜಟಿಲ ಪ್ರಶ್ನೆ.
ಮನೀಷಾ ಕೇಳ್ತಿದಾಳೆ, ಉತ್ತರ ಕೊಡಿ.