ಮಂಗಳೂರು : ಶೈಕ್ಷಣಿಕ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಟು ವೈದ್ಯಕೀಯ ಕಾಲೇಜುಗಳು ಮತ್ತು ಹಲವಾರು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳನ್ನು ಹೊಂದಿದೆ. ಆದರೆ, ಇಲ್ಲಿ ಇನ್ನೂ ಒಂದು ಸರಕಾರಿ ವೈದ್ಯಕೀಯ ಕಾಲೇಜು ಇಲ್ಲದಿರುವುದು ವಿಪರ್ಯಾಸ. ಈ ಬಗ್ಗೆ ಇದೀಗ ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ರಾಜಕೀಯೇತರ ಹೋರಾಟವೊಂದು ಸಿದ್ಧಗೊಳ್ಳುತ್ತಿದೆ.
ಇತ್ತೀಚೆಗೆ ‘ಸರಕಾರಿ ಆಸ್ಪತ್ರೆ ಉಳಿಸಿ ಸಮಿತಿ’ ವತಿಯಿಂದ ಈ ಸಂಬಂಧ ಹೋರಾಟ ಸಂಘಟಿಸಲಾಗಿತ್ತು. ಜಿಲ್ಲಾ ಸರಕಾರಿ ಆಸ್ಪತ್ರೆ ವೆನ್ ಲಾಕ್ ಅಭಿವೃದ್ಧಿ ಪಡಿಸಿ ಮತ್ತು ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜು ಬೇಕು ಎಂಬ ಬೇಡಿಕೆಗಳನ್ನಿರಿಸಿ ಈ ಹೋರಾಟ ನಡೆದಿತ್ತು. ವಿವಿಧ ಸಂಘಟನೆಗಳ ಪ್ರಮುಖರು ಈ ಸಮಿತಿಯಲ್ಲಿದ್ದಾರೆ. ಇದೊಂದು ರಾಜಕೀಯೇತರ ಹೋರಾಟ. ಇದು ಸಂಪೂರ್ಣ ಜನರ ಹೋರಾಟ ಎಂದು ಸಂಘಟಕರು ಹೇಳುತ್ತಾರೆ.
ಈಗಾಗಲೇ ಮಂಗಳೂರು ದಕ್ಷಿಣ ಮತ್ತು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕರ ಕಚೇರಿಗಳ ಮುಂದೆ ಪ್ರತಿಭಟನೆ ನಡೆದಿದೆ. ಇದೀಗ, ಅ.28 ಮತ್ತು ನ.2ರಂದು ಮಂಗಳೂರು ಮತ್ತು ಮುಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕರುಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ಸಮಿತಿ ನಿರ್ಧರಿಸಿದೆ.
ವೆನ್ ಲಾಕ್ ಆಸ್ಪತ್ರೆಯನ್ನು ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯಾಗಿ ಉನ್ನತೀಕರಿಸಿ, ಜಿಲ್ಲೆಯ ಇತರ ಎಲ್ಲಾ ಸರಕಾರಿ ಆಸ್ಪತ್ರೆಗಳನ್ನು ಅಭಿವೃದ್ಧಿ ಪಡಿಸಿ, ಸರಕಾರಿ ಆಸ್ಪತ್ರೆಗಳಲ್ಲಿ ಖಾಲಿಯಿರುವ ಎಲ್ಲಾ ಹುದ್ದೆಗಳನ್ನು ತುಂಬಿ, ಜಿಲ್ಲೆಗೊಂದು ವೈದ್ಯಕೀಯ ಕಾಲೇಜು ಆರಂಭಿಸಿ ಮುಂತಾದ ಬೇಡಿಕೆಗಳನ್ನು ಸಮಿತಿ ಹೊಂದಿದೆ ಎಂದು ಸಂಘಟಕರು ತಿಳಿಸಿದ್ದಾರೆ.