‘ಮಂಗಳೂರಿನಲ್ಲಿ CAA ಪ್ರತಿಭಟನೆಯಲ್ಲಿ ಹೆಣಗಳುರುಳಿದಾಗ ಮೌನವಾಗಿದ್ದ ಕಾಂಗ್ರೆಸ್ಸಿಗರು ಈಗ ಬಸವ ಕಲ್ಯಾಣದಲ್ಲಿ ನಾವೇ ಮುಸ್ಲಿಮರ ರಕ್ಷಕರು ಎನ್ನುತ್ತಿದ್ದಾರೆ’ : ಹೆಚ್ಡಿಕೆ ವಾಗ್ದಾಳಿ

Prasthutha|

ಬಸವ ಕಲ್ಯಾಣದಲ್ಲಿ ನಡೆಯುವ ಉಪಚುನಾವಣೆಗೆ ಜೆಡಿಎಸ್ ತಮ್ಮ ಅಭ್ಯರ್ಥಿ ಘೋಷಣೆ ಮಾಡಿದ ಬಳಿಕ ಕಾಂಗ್ರೆಸ್ ಅದರ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಟ್ವೀಟ್ ಮೂಲ ಕಿಡಿ ಕಾರಿದ್ದಾರೆ. ಸರಣಿ ಟ್ವೀಟ್ ಗಳನ್ನು ಮಾಡಿರುವ ಕುಮಾರಸ್ವಾಮಿ ನೇರವಾಗಿ ಕಾಂಗ್ರೆಸ್ಸನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

- Advertisement -

ಅವರ ಸರಣಿ ಟ್ವೀಟ್ ಗಳ ವಿವರ :

ಮಂಗಳೂರಿನಲ್ಲಿ ಸಿಎಎ ಪ್ರತಿಭಟನೆ ವೇಳೆ ಹೆಣಗಳು ಬಿದ್ದು, ಅಲ್ಪಸಂಖ್ಯಾತರು ಆತಂಕದಲ್ಲಿದ್ದಾಗ ಕಾಂಗ್ರೆಸ್‌ ನಾಯಕರು ಬಿಲ ಸೇರಿದ್ದರು. ಅಂದು ಮುಸ್ಲಿಮರ ಬೆಂಬಲಕ್ಕೆ ನಿಂತಿದ್ದು ಜೆಡಿಎಸ್‌. ಇಂದು ಬಸವಕಲ್ಯಾಣದಲ್ಲಿ ನಾವು ಮುಸ್ಲಿಂ ಅಭ್ಯರ್ಥಿಯನ್ನು ಹಾಕುತ್ತಲೇ ಕಾಂಗ್ರೆಸ್‌ ತಾನು ಮುಸ್ಲಿಮರ ರಕ್ಷಕ ಎಂದು ಎದೆತಟ್ಟಿಕೊಂಡು ಮುಂದೆ ಬಂದಿದೆ.

- Advertisement -

ನಮ್ಮ ರಾಜ್ಯ, ನಮ್ಮ ನೆಲ, ನಮ್ಮ ಪಕ್ಷ, ನಮ್ಮ ಅಭ್ಯರ್ಥಿ. ಇದರಲ್ಲಿ ಜೆಡಿಎಸ್‌ ಯಾರ ಅಪ್ಪಣೆಗೆ ಕಾಯಬೇಕು? ಯಾವ ದೊಣ್ಣೆ ನಾಯಕನ ಆಜ್ಞೆ ಆಗಬೇಕು ನಮಗೆ. ಜನರಿಗೆ ಬೇಕಾದ ಅಭ್ಯರ್ಥಿಗಳನ್ನು ನಾವು ಹಾಕುತ್ತೇವೆ. ಅದರಲ್ಲಿ ನಮಗೆ ಧರ್ಮ ನಗಣ್ಯ. ಪ್ರತಿಯೊಂದರಲ್ಲೂ ಹಿಂದೂ-ಮುಸ್ಲಿಂ ಎಂದು ಹುಡುಕುವವರಿಗೆ ಜನ ಚುನಾವಣೆಯಲ್ಲಿ ತಕ್ಕ ಉತ್ತರ ಕೊಡಬೇಕು.

ಮುಸ್ಲಿಮರನ್ನು ಮತಗಳಾಗಿ ನೋಡುವುದು ಕಾಂಗ್ರೆಸ್‌ನ ಐತಿಹಾಸಿಕ ದುರಭ್ಯಾಸ. ಅದಕ್ಕಾಗಿಯೇ ಮುಸ್ಲಿಮರನ್ನು ಕಾಂಗ್ರೆಸ್‌ ನಮ್ಮ ಮತ ಎನ್ನುತ್ತದೆ.  ನಮ್ಮವರು ಅನ್ನುವುದಿಲ್ಲ. ಕಾಂಗ್ರೆಸ್‌ನ ಇಂಥ ತಪ್ಪುಗಳಿಂದಲೇ ಬಿಜೆಪಿ ಈ ಹಂತಕ್ಕೆ ಬೆಳೆದಿದೆ. ದೇಶದಲ್ಲಿ ಕೋಮು ಭಾವನೆಗಳು ಈ ಮಟ್ಟಕ್ಕೆ ಕೆರಳಿರುವುದರ ಹಿಂದೆ ಕಾಂಗ್ರೆಸ್‌ನ ಪ್ರಮಾದಗಳಿವೆ.

ಬಸವಕಲ್ಯಾಣದಲ್ಲಿ ಜೆಡಿಎಸ್‌ ಬಿಜೆಪಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ‘ಮಹಾನ್‌ನಾಯಕ’ರು ಹೇಳಿದ್ದಾರೆ. ಪ್ರತಿಯೊಂದಕ್ಕೂ ಒಳ ಒಪ್ಪಂದ, ಒಳಸಂಚು ಮಾಡಿದವರಿಗಷ್ಟೇ ಒಳ ಒಪ್ಪಂದದ ಕನವರಿಕೆ. ಆಪರೇಷನ್‌ ಕಮಲದಲ್ಲಿ, ಮೈತ್ರಿ ಸರ್ಕಾರ ಉರುಳಿದ್ದರಲ್ಲಿ ಅಂಥ ಒಳಒಪ್ಪಂದಗಳು ಈಗಾಗಲೇ ಬಯಲಾಗಿವೆ. ಜೆಡಿಎಸ್‌ಗೆ ಇಂಥ ದುರ್ಬುದ್ಧಿ ಇಲ್ಲ.

ನಮ್ಮ ಆಯ್ಕೆ, ನಿರ್ಧಾರಗಳ ಬಗ್ಗೆ ಮಾತನಾಡುವುದನ್ನು ಕಾಂಗ್ರೆಸ್‌ನ ಮಹಾನ್‌ ನಾಯಕರು ನಿಲ್ಲಿಸಿದರೆ ಉತ್ತಮ. ಇಲ್ಲವಾದಲ್ಲಿ ಜಾತ್ಯತೀತವಾದಿ ಮುಖವಾಡ ಧರಿಸಿರುವ ಅವರ ಕೋಮುವಾದಿ ಮುಖವನ್ನು ಬಯಲು ಮಾಡಬೇಕಾಗುತ್ತದೆ. ಶತಮಾನಗಳಿಂದ ವೀರನಾಗಿ ಮಲಗಿದ್ದ ಟಿಪ್ಪು ಸುಲ್ತಾನನ್ನು ದೇಶದ್ರೋಹಿಯನ್ನಾಗಿ ಮಾಡಿದ ಮಹಾನ್‌ ನಾಯಕರು ತೆಪ್ಪಗಿದ್ದರೆ ಸರಿ.

Join Whatsapp