-ರವೀಶ್ ಕುಮಾರ್
ನಿರೂಪಕರು, ಎನ್.ಡಿ.ಟಿವಿ
ಭಾರತ್ ಮಾತಾ ಕೀ ಜೈ ಒಂದು ಪವಿತ್ರ ಘೋಷಣೆಯಾಗಿದೆ. ಈ ಘೋಷಣೆಯನ್ನು ಕೂಗುತ್ತಾ ಸೇನೆಯಲ್ಲಿರುವ ಜವಾನರು ಎದೆಗೆ ಗುಂಡು ಇಳಿಸಿಕೊಳ್ಳುತ್ತಾರೆ. ಈ ಘೋಷಣೆಯಲ್ಲಿ ಭಾರತದ ಅದ್ಭುತ ಸಾಮರ್ಥ್ಯವಿದೆ. ಯಾರಾದರೂ ಸುಳ್ಳು ಮತ್ತು ವಂಚನೆಯಿಂದ ಭಾರತ್ ಮಾತಾ ಕಿ ಜೈ ಹೇಳಿದರೆ, ಆ ವೇಳೆ ಆತ ಈ ಘೋಷಣೆಯ ಪಾವಿತ್ರ್ಯಕ್ಕೆ ಭಂಗ ಉಂಟು ಮಾಡುತ್ತಾನೆ. ಸಿನೆಮಾಗಳಲ್ಲಿ ನೀವು ವೀಕ್ಷಿಸಿರಬಹುದು. ಒಂದು ವೇಳೆ ಯಾವನೇ ಗೂಂಡಾ ಜೋರಾಗಿ ಜೈ ಮಾ ಭವಾನಿ ಅಥವಾ ಜೈ ಮಾ ಕಾಳಿ ಎಂದು ಹೇಳಿದ ಕೂಡಲೇ ಆತ ಸಂತನಾಗುವುದಿಲ್ಲ. ಆತ ಗೂಂಡಾ ಆಗಿಯೇ ಇರುತ್ತಾನೆ. ಗೂಂಡಾ ತನ್ನ ಪಾಪವನ್ನು ಮುಚ್ಚಿಕೊಳ್ಳಲು ಜೈ ಮಾ ಭವಾನಿ ಹೇಳುತ್ತಿದ್ದಾನೆಂದು ಎಂಬ ಅರಿವು ಸಿನಿಮಾ ನೋಡುವ ವೀಕ್ಷಕನಿಗೆ ಇರುತ್ತದೆ. ಆ ಗೂಂಡಾನನ್ನು ಹಿಂಬಾಲಿಸುವ ಪೊಲೀಸರು, ಗೂಂಡಾ ಜೈ ಮಾ ಭವಾನಿ ಹೇಳುತ್ತಿದ್ದಾನೆ ಎಂಬ ಕಾರಣಕ್ಕಾಗಿ ಮನೆಗೆ ಮರಳುವುದಿಲ್ಲ. ಮಾತ್ರವಲ್ಲ, ಮಾತೆ ಭವಾನಿ ಭಕ್ತಿಯ ಬದಲಿಗೆ ಗೂಂಡಾನಿಗೆ ಅಮರತ್ವವನ್ನೂ ನೀಡುವುದಿಲ್ಲ. ಇಲ್ಲಿ ಆತನದ್ದೇ ಸೋಲಾಗುತ್ತದೆ ಮತ್ತು ಕರ್ತವ್ಯನಿರತ ಪೊಲೀಸರು ಜಯ ಗಳಿಸುತ್ತಾರೆ. ಅರ್ನಾಬ್ ಭಾರತ್ ಮಾತಾ ಕೀ ಜೈ ಎಂದು ಹೇಳಿದರೆ ಅದಕ್ಕೆ ಯಾರ ಆಕ್ಷೇಪವೂ ಇಲ್ಲ. ಜೈಲಿನಲ್ಲೂ ಆಗಸ್ಟ್ 15ರ ಕಾರ್ಯಕ್ರಮಗಳಿರುತ್ತವೆ. ಗಣರಾಜ್ಯ ದಿನದ ಪರೇಡ್ ಕೂಡ ಇರುತ್ತದೆ. ಆದರೆ ಅಲ್ಲಿ ಅವರು ಭಾರತ್ ಮಾತಾ ಕೀ ಜೈ ಘೋಷಿಸಿ ಆರೋಪಗಳಿಂದ ಮುಕ್ತರಾಗಲು ಸಾಧ್ಯವಿಲ್ಲ ಎಂಬುದನ್ನು ಅರಿಯಬೇಕಾಗಿದೆ.
ಅರ್ನಾಬ್ ಗೋಸ್ವಾಮಿ ವಾಟ್ಸಪ್ ಚಾಟ್ ಗೆ ಸಂಬಂಧಿಸಿ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿದ್ದಾರೆ. ಚಾಟ್ ನಕಲಿ ಎಂದು ಅದರಲ್ಲಿ ಎಲ್ಲೂ ಬರೆದಿಲ್ಲ. ಬಾಲಕೋಟ್ ದಾಳಿ ಮಾಹಿತಿಯ ವಿಚಾರದಲ್ಲಿ ಅವರು ಪಾಕಿಸ್ತಾನವನ್ನು ತುರುಕಿಸಿ ಅದನ್ನು ಗುರಾಣಿಯನ್ನಾಗಿ ಮಾಡುತ್ತಿದ್ದಾರೆ. ಹೀಗಿರುವಾಗ, ಟಿಆರ್ ಪಿ ಪ್ರಕರಣದಲ್ಲೂ ಪಾಕಿಸ್ತಾನವಿದೆಯೇ? ಈ ವಿಚಾರದಲ್ಲಂತೂ ಬೇರೆ ಚಾನೆಲ್ ಗಳು ಕೂಡ ಅರ್ನಾಬ್ ಮೇಲೆ ಆರೋಪ ಹೊರಿಸುತ್ತಿವೆ. ಚಾನೆಲ್ ಗಳ ನಿಯಂತ್ರಕ ಸಂಸ್ಥೆ ಎನ್ ಬಿಎ ಕೂಡ ತನಿಖೆಯ ಕುರಿತು ಹೇಳಿದೆ. ಇದೀಗ ಒಂದು ವೇಳೆ ಸುದ್ದಿ ಪಾಕಿಸ್ತಾನದಲ್ಲಿ ಪ್ರಸಾರವಾದರೆ, ಪಾಕಿಸ್ತಾನಕ್ಕೆ ಲಾಭವಾಗುತ್ತಿದೆ ಎಂದು ಅರ್ನಾಬ್ ಡಿಬೇಟ್ ನಡೆಸುವರೇ? ಅರ್ನಾಬ್ ನಂತೆ ಅರ್ನಾಬ್ ವಿರುದ್ಧ ಆರೋಪ ಹೊರಿಸಿರುವ ಇತರ ಚಾನೆಲ್ ಗಳು ಕೂಡ ಅದೇ ನ್ಯಾಷನಲ್ ಸಿಲೆಬಸ್ ನಲ್ಲಿ ತೇರ್ಗಡೆ ಹೊಂದಿದವುಗಳಾಗಿವೆ. ನಾನು ಇದೀಗ ಈ ನ್ಯಾಷನಲ್ ಸಿಲೆಬಸನ್ನು ‘ಮೋದಿ ಸಿಲೆಬಸ್’ ಎಂದು ಕರೆಯುತ್ತೇನೆ. ಈ ಚಾನೆಲ್ ಗಳಲ್ಲಿಯೂ ಕೂಡ ವಿನಾ ಕಾರಣ ಪಾಕಿಸ್ತಾನವನ್ನು ಎಳೆದು ತಂದು ಚರ್ಚೆ ನಡೆಯುತ್ತವೆ ಮತ್ತು ಪ್ರಶ್ನಿಸುವವರೊಂದಿಗೆ ಉದ್ಧಟತನದಿಂದ ವರ್ತಿಸಲಾಗುತ್ತದೆ. ಅರ್ನಾಬ್ ಗೋಸ್ವಾಮಿ ಈ ಚಾನೆಲ್ ಗಳನ್ನು ಕೂಡ ಕಾಂಗ್ರೆಸ್ ನಂತೆ ಪಾಕಿಸ್ತಾನದ ಏಜೆಂಟ್ ಎಂದು ಕರೆಯುವರೇ?
ಅರ್ನಾಬ್ ಗೋಸ್ವಾಮಿಯ ವಾಟ್ಸಪ್ ಚಾಟ್ ನಲ್ಲಿ ಅತ್ಯಂತ ಗಂಭೀರ ವಿಚಾರ ಟಿಆರ್ ಪಿ ಕುರಿತಾಗಿದೆ. ಯಾವ ರೀತಿ ಆತ ರೇಟಿಂಗ್ ಏಜೆನ್ಸಿ ಕಂಪೆನಿಯೊಂದರ ಮಧ್ಯೆ ನುಸುಳುತ್ತಾರೆ ಮತ್ತು ಗುಪ್ತವಾಗಿರುವ ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ. ಆ ರೇಟಿಂಗ್ ಏಜೆನ್ಸಿಯ ಸಿಇಓ ಅವರಿಂದ ಪ್ರಧಾನ ಮಂತ್ರಿ ಕಾರ್ಯಾಯಲದಲ್ಲಿ ಮೀಡಿಯಾ ಸಲಹೆಕಾರ ಹುದ್ದೆ ದೊರಕಿಸುವಂತೆ ಕೇಳುತ್ತಾನೆ. ಅರ್ನಾಬ್ ಆತನನ್ನು ಮಾಹಿತಿ ಪ್ರಸಾರ ಸಚಿವರೊಂದಿಗೆ ಭೇಟಿ ಮಾಡಿಸುವ ಕುರಿತು ಹೇಳುತ್ತಾನೆ. ಟೆಲಿಕಾಂ ಸೆಕ್ಟರ್ ನಲ್ಲಿ ಎಲ್ಲಾ ಕಂಪೆನಿಗಳಿಗೆ ವ್ಯವಹಾರದ ಒಂದು ಸಮಾನ ಅವಕಾಶವನ್ನು ದೊರಕಿಸುವ ನಿಟ್ಟಿನಲ್ಲಿ ಮೇಲ್ನೋಟ ವಹಿಸುವ ಸಂಸ್ಥೆಯಾಗಿದೆ ಟ್ರಾಯ್. ಇದರ ಬಗ್ಗೆ ಕೂಡ ಇಬ್ಬರೂ ಮಾತನಾಡಿಕೊಳ್ಳುತ್ತಿದ್ದಾರೆ. ಅರ್ನಾಬ್ ಮತ್ತು ಪಾರ್ಥೋ ಟ್ರಾಯ್ ಅನ್ನು ನಿರ್ವಹಿಸುವುದರ ಕುರಿತು ಮಾತನಾಡುತ್ತಾರೆ. ಇವೆಲ್ಲವುಗಳಿಗೆ ಸಂಬಂಧಿಸಿ ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ಅದರ ತನಿಖೆ ಎಂದೂ ಗುರಿ ತಲುಪಲಾರದು. ಯಾಕೆಂದರೆ ಈ ಚಾಟ್ ನಲ್ಲಿ ಟಿಆರ್ ಪಿಗೆ ಸಂಬಂಧಿಸಿ ಯಾವ ರೀತಿಯಲ್ಲಿ ಅನೈತಿಕ ಆಟದ ಚರ್ಚೆಯಾಗುತ್ತಿದೆಯೇ, ಅದರಲ್ಲಿ ಹಲವು ಬಾರಿ ಮಾಹಿತಿ ಪ್ರಸಾರ ಮಂತ್ರಿ ಮತ್ತು ಪ್ರಧಾನ ಮಂತ್ರಿಯ ವಿಚಾರವೂ ಬರುತ್ತಿದೆ. ಇದೇ ಕಾರಣಕ್ಕಾಗಿ ಇತರ ಚಾನೆಲ್ ಗಳು ವೌನವಾಗಿವೆ. ಯಾಕೆಂದರೆ, ಮಾತನಾಡತೊಡಗಿದರೆ ಈ ಹಗರಣದಲ್ಲಿ ಮೋದಿ ಸರಕಾರದ ಹೆಸರು ಪುನರಾವರ್ತನೆಯಾಗಬಹುದು ಮತ್ತು ಈ ರೀತಿ ಮಾಡಲು ಅವರಲ್ಲಿ ಧೈರ್ಯವಿಲ್ಲ.
ಗೋದಿ ಮೀಡಿಯಾಗಳ ಮೂಲಕ ಭಾರತದ ಪ್ರಜಾತಂತ್ರ ವ್ಯವಸ್ಥೆಯನ್ನು ಹತ್ಯೆ ಮಾಡಲಾಗಿದೆ ಎಂಬುದಾಗಿ ನಾನು ಇದೇ ಕಾರಣಕ್ಕಾಗಿ ಹೇಳುತ್ತಿರುವುದು ಮತ್ತು ತಾವು ಈ ಹತ್ಯೆಯ ಮೂಕಪ್ರೇಕ್ಷಕರಾಗಿದ್ದೀರಿ. ಆಧಾರವಿದ್ದರೂ ನೀವು ವೌನವಾಗಿದ್ದೀರಿ. ಯಾವನೇ ನಾಯಕ ಅಥವಾ ಕಪಟಿಗಳ ಮೇಲೆ ತೆರೆ ಎಳೆಯಲು ಭಾರತ್ ಮಾತಾ ಕಿ ಜೈ ಕೂಗಬೇಡಿ. ಸತ್ಯವನ್ನು ಬಹಿರಂಗಪಡಿಸಲು ಭಾರತ್ ಮಾತಾ ಕಿ ಜೈ ಕೂಗಿರಿ.
ಗಮನಿಸಿ: ಈ ವಿಚಾರವನ್ನು ಮುಚ್ಚಿಡಲಾಗುತ್ತಿದೆ. ತಾವು ಎಲ್ಲಾ ಕೆಲಸವನ್ನು ತೊರೆದು ಇದನ್ನು ಊರೂರು ಪ್ರಚಾರಪಡಿಸುವುದರಲ್ಲಿ ತೊಡಗಿ. ಓಲಾ-ಉಬರ್ ನಲ್ಲಿ ಪ್ರಯಾಣಿಸುತ್ತಿದ್ದರೆ, ಚಾಲಕನಿಗೆ ತಿಳಿಸಿ. ಆಟೋ ಚಾಲಕನಿಗೆ ತಿಳಿಸಿ. ಅಂಗಡಿಯಾತನಿಗೆ ತಿಳಿಸಿ. ಕಾವಲುಗಾರನಿಗೆ ತಿಳಿಸಿ. ರೈತರಿಗೆ ತಿಳಿಸಿ. ತರಕಾರಿ ಮಾರುವವನಿಗೆ ತಿಳಿಸಿ. ಈ ವೇಳೆ ನಿಮ್ಮ ಕರ್ತವ್ಯ ಇದೇ ಆಗಿದೆ.