ಭಾರತದ ಮೂಲನಿವಾಸಿಗಳ ಸ್ವಾತಂತ್ರ್ಯ, ರಕ್ಷಣೆ ಮತ್ತು ಸಬಲೀಕರಣ

Prasthutha|

– ಡಾ.ಬಿ.ಪಿ.ಮಹೇಶ ಚಂದ್ರ ಗುರು

- Advertisement -

ಭಾರತವು ಸ್ವಾತಂತ್ರ್ಯ ಪಡೆದು 73 ವರ್ಷಗಳು ಸಂದಿವೆ. ಆದರೂ ಭಾರತದ ಮೂಲನಿವಾಸಿಗಳಿಗೆ ಸಾಮಾಜಿಕ ಸಮಾನತೆ ಮತ್ತು ಆರ್ಥಿಕ ಸ್ವಾತಂತ್ರ್ಯಗಳು ಇದುವರೆಗೂ ಲಭಿಸಿಲ್ಲ. ಅಂಬೇಡ್ಕರ್‌ರವರು ಗಾಂಧಿ ನೇತೃತ್ವದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಭಾಗವಹಿಸಲಿಲ್ಲ. ಅವರಿಗೆ ಸುಮಾರು 200 ವರ್ಷಗಳ ಬ್ರಿಟಿಷ್ ವಸಾಹತುಶಾಹಿಯಿಂದ ಭಾರತದ ಪ್ರಜೆಗಳನ್ನು ಮುಕ್ತರನ್ನಾಗಿಸುವುದಕ್ಕಿಂತ ಸಾವಿರಾರು ವರ್ಷಗಳ ದಾಸ್ಯದಿಂದ ಭಾರತದ ಮಹಿಳೆಯರು ಮತ್ತು ದುರ್ಬಲ ವರ್ಗಗಳನ್ನು ಮುಕ್ತರನ್ನಾಗಿಸುವುದು ಬಹುದೊಡ್ಡ ಕಾರ್ಯಸೂಚಿಯಾಗಿತ್ತು. ಅವರು ಭಾರತದ ಚರಿತ್ರೆ, ಪರಂಪರೆ, ಪರಿಸರ, ಸ್ವಾತಂತ್ರ ಮೊದಲಾದವುಗಳ ನಿಜವಾದ ವಾರಸುದಾರರಾದ ದುರ್ಬಲ ವರ್ಗಗಳಿಗೆ ರಾಜಕೀಯ ಪ್ರಜಾಪ್ರಭುತ್ವಕ್ಕಿಂತ ಸಾಮಾಜಿಕ ಹಾಗೂ ಆರ್ಥಿಕ ಪ್ರಜಾಸತ್ತೆ ಅತ್ಯವಶ್ಯಕವೆಂದು ಲಂಡನ್‌ನಲ್ಲಿ ಜರುಗಿದ ದುಂಡುಮೇಜಿನ ಪರಿಷತ್ತುಗಳ ಸಭೆಯಲ್ಲಿ ಬಲವಾಗಿ ಪ್ರತಿಪಾದಿಸಿದ್ದರು.

ಗಾಂಧಿ ಸ್ವರಾಜ್ಯದ ಸಂಕೇತವಾಗಿದ್ದರೆ, ಅಂಬೇಡ್ಕರ್ ಸುರಾಜ್ಯದ ಸಂಕೇತವಾಗಿದ್ದಾರೆ. ಸುರಾಜ್ಯವಿಲ್ಲದ ಸ್ವರಾಜ್ಯ ಯಾರಿಗೂ ಒಳಿತನ್ನುಂಟು ಮಾಡುವುದಿಲ್ಲ ಎಂದು ಅಂಬೇಡ್ಕರ್ ಪ್ರಧಾನವಾಗಿ ಮಂಡಿಸಿದ್ದರು. ಸ್ವಾತಂತ್ರ್ಯಾ ನಂತರದಲ್ಲಿ ನಮ್ಮನ್ನು ಆಳುವವರಿಗೆ ಗಾಂಧಿ, ಅಂಬೇಡ್ಕರ್ ಮತ್ತು ಮೂಲನಿವಾಸಿಗಳು ಮುಖ್ಯವೆನಿಸಲಿಲ್ಲ. ಗಾಂಧಿಯಂತಹ ಹುತಾತ್ಮ, ಸ್ವರಾಜ್ಯದ ನಿಜವಾದ ಆಶಯವೆಂದರೆ ಸರ್ವಜನರ ಅಭ್ಯುದಯ (ಸರ್ವೋದಯ) ಎಂದು ಸರಿಯಾಗಿ ಭಾವಿಸಿದ್ದರು. ಅಂತ್ಯೋದಯದ ಹರಿಕಾರ ಅಂಬೇಡ್ಕರ್ ಕಟ್ಟಕಡೆಯ – ದಟ್ಟ ದಾರಿದ್ರಕ್ಕೆ ಗುರಿಯಾಗಿರುವ ಪ್ರಜಾಪ್ರಭುತ್ವದ ವಾರಸುದಾರರಾದ ಬಹುಜನರ ಅಭಿವೃದ್ಧಿಯೇ ನಿಜವಾದ ಅಭಿವೃದ್ಧಿಯೆಂದು ಮನಗಂಡಿದ್ದರು. ‘ಅಂತ್ಯೋದಯದ ಮೂಲಕ ಸರ್ವೋದಯದ ಗುರಿಯನ್ನು ಸಾಧಿಸೋಣ’ ಎಂಬ ಅಂಬೇಡ್ಕರ್ ಮಾತಿಗೆ ಆಳುವವರು ಕಿಂಚಿತ್ತೂ ಬೆಲೆ ಕೊಡಲಿಲ್ಲ. ಭಾರತೀಯ ಸಂವಿಧಾನ ರಾಜ್ಯ ನಿರ್ದೇಶಕ ತತ್ವಗಳನ್ನು ಪ್ರಾಮಾಣಿಕವಾಗಿ ಕಳೆದ ಏಳು ದಶಕಗಳಲ್ಲಿ ಅನುಷ್ಠಾನಗೊಳಿಸಿದ್ದರೆ ಭಾರತ ನಿಜಕ್ಕೂ ಪ್ರಬುದ್ಧ ಭಾರತವಾಗಿ ರೂಪುಗೊಳ್ಳುತ್ತಿತ್ತು. ಈ ಹಿನ್ನೆಲೆಯಲ್ಲಿ ಬಹುಜನ ಭಾರತೀಯರ ಜೀವಗಳಿಗೆ ಯಾವುದೇ ನೆಲೆ-ಬೆಲೆಗಳಿಲ್ಲ; ಈಗ ಸಿಕ್ಕಿರುವ ರಾಜಕೀಯ ಸ್ವಾತಂತ್ರಕ್ಕೆ ಮೂರು ಕಾಸಿನ ಬೆಲೆಯೂ ಇಲ್ಲವಾಗಿದೆ.

- Advertisement -

 ಭಾರತದಲ್ಲಿ ದೇಗುಲಗಳನ್ನು ನಿರ್ಮಿಸಲು ಮತ್ತು ಮಹಾಪುರುಷರ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಸಾವಿರಾರು ಕೋಟಿ ರೂಪಾಯಿಗಳನ್ನು ಅನಗತ್ಯವಾಗಿ ವಿನಿಯೋಗಿಸಿ ವ್ಯಕ್ತಿಪೂಜೆಗೆ ಹಾಗೂ ಧಾರ್ಮಿಕ ಆಚರಣೆಗಳಿಗೆ ವಿಶೇಷ ಮಹತ್ವ ನೀಡಲಾಗಿದೆ. ಯಾವುದೇ ದೇಶ ಸ್ವಾತಂತ್ರ ಗಳಿಸಿದಾಗ ನೀತಿ ನಿರೂಪಕರು ಮತ್ತು ಆಡಳಿತಗಾರರು ಬಡತನ ನಿರ್ಮೂಲನೆಗೆ ಪ್ರಥಮ ಆದ್ಯತೆ ನೀಡಬೇಕು. ಬಡತನ ಒಂದು ದೇಶದ ಮಹಾಶತ್ರು ಎಂದು ಗಾಂಧಿ ಹೇಳಿದ್ದರು. ಉಳುವವರಿಗೆ ಭೂಮಿ, ತಲೆ ಮೇಲೆ ಸೂರು, ಮೂಲ ಶಿಕ್ಷಣ, ಆರೋಗ್ಯ ಸೇವೆ, ಸಾಮಾಜಿಕ ಸುರಕ್ಷತೆ, ಸಾಮಾಜಿಕ ಬಂಡವಾಳ ಅಭಿವೃದ್ಧಿ, ಮಾನವ ಸಂಪನ್ಮೂಲಗಳ ಅಭಿವೃದ್ಧಿ, ಉದ್ಯೋಗಾವಕಾಶಗಳು, ಜೀವ ವಿಮೆ ಮೊದಲಾದವುಗಳಿಗೆ ಸ್ವತಂತ್ರ ಭಾರತದಲ್ಲಿ ಆದ್ಯತೆ ಲಭಿಸಲಿಲ್ಲ. ಇದರ ಪರಿಣಾಮವಾಗಿ ಅಲಕ್ಷಿತ ಬಡಜನರು ಕನಿಷ್ಟ ಸೌಲಭ್ಯಗಳು ಮತ್ತು ಮೂಲ ಸೌಕರ್ಯಗಳಿಂದ ವಂಚಿತರಾಗಿ ಆರ್ಥಿಕವಾಗಿ ಅಂಚಿಗೆ ನೂಕಲ್ಪಟ್ಟಿದ್ದಾರೆ. ಇದುವರೆಗೂ ನಮ್ಮನ್ನು ಆಳುವವರು ಬಡತನ ನಿರ್ಮೂಲನೆ ಮಾಡದೇ ಬಡವರನ್ನೇ ನಿರ್ಮೂಲನೆ ಮಾಡುವ ಪಾಪಕಾರ್ಯದಲ್ಲಿ ತೊಡಗಿದ್ದಾರೆ. ಎಲ್ಲ ಧರ್ಮಗಳು ಮತ್ತು ಜನಾಂಗಗಳಲ್ಲಿ ಬಡವರೇ ಬಹುಸಂಖ್ಯಾತರಿದ್ದಾರೆ. ಸರ್ಕಾರ ಬಡವರನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸುವ ನಿಟ್ಟಿನಲ್ಲಿ ಯಶಸ್ವಿಯಾಗಿಲ್ಲ. ಇದಕ್ಕೆ ಬಹುಮುಖ್ಯ ಕಾರಣ ನಮ್ಮನ್ನು ಆಳುವವರಲ್ಲಿ ಸಾಮಾಜಿಕ ಕಳಕಳಿ ಮತ್ತು ರಾಜಕೀಯ ಇಚ್ಛಾಶಕ್ತಿಗಳ ಕೊರತೆ. ಈ ಹಿನ್ನೆಲೆಯಲ್ಲಿ ಯಾರಿಗೆ ಬಂತು 47ರ ಸ್ವಾತಂತ್ರ ಎಂಬ ಪ್ರಶ್ನೆಗೆ 73 ವರ್ಷಗಳಾದರೂ ಉತ್ತರ ನೀಡುವಲ್ಲಿ ವ್ಯವಸ್ಥೆ ವಿಫಲವಾಗಿದೆ.

 ಭಾರತದಲ್ಲಿ ಹೆಚ್ಚುತ್ತಿರುವ ಬಡತನಕ್ಕೆ ನೇರವಾಗಿ ಹಿಂದೂ ಸಾಮ್ರಾಜ್ಯಶಾಹಿ ಮತ್ತು ವಿದೇಶಿ ಬಂಡವಾಳಶಾಹಿ ಕಾರಣರಾಗಿದ್ದಾರೆ. ಇತರ ದೇಶಗಳಲ್ಲಿ ವರ್ಗಪ್ರಜ್ಞೆ ಪ್ರಜೆಗಳಲ್ಲಿದ್ದರೆ, ಭಾರತೀಯರಲ್ಲಿ ಜಾತಿಪ್ರಜ್ಞೆ ಹೆಚ್ಚಿನ ಪ್ರಮಾಣದಲ್ಲಿದೆ. ಭಾರತೀಯರ ಬಡತನದ ಹಿಂದೆ ಅವರ ಜಾತಿ ಪ್ರಮುಖ ಪಾತ್ರವಹಿಸುತ್ತದೆ. ಮೇಲ್ಜಾತಿಯವರು ಪ್ರಭುತ್ವದ ಭಾಗವಾಗಿ ಎಲ್ಲ ಮೂಲಭೂತ ಹಕ್ಕುಗಳನ್ನು ಪಡೆದುಕೊಂಡು ಬಡತನ ಮುಕ್ತರಾಗಿ ಎಲ್ಲ ಕ್ಷೇತ್ರಗಳಲ್ಲಿಯೂ ಅವಕಾಶ ಪಡೆದು ಉತ್ತಮ ಜೀವನ ನಡೆಸುತ್ತಾರೆ. ಆದರೆ ತಳಸಮುದಾಯಗಳ ಜನ ಕೆಳಜಾತಿಯವರು ಎಂಬ ಕಾರಣಕ್ಕೆ ಎಲ್ಲ ಕ್ಷೇತ್ರಗಳಲ್ಲಿಯೂ ಸಮಾನ ಅವಕಾಶಗಳಿಂದ ವಂಚಿತರಾಗಿದ್ದಾರೆ. ಮೇಲ್ಜಾತಿಯವರಿಗೆ ಜಾತಿಯೇ ಬಂಡವಾಳವಾದರೆ ತಳಸಮುದಾಯಗಳಿಗೆ ಜಾತಿಯೇ ಬಹುದೊಡ್ಡ ಶಾಪವಾಗಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಜಾತಿವಿನಾಶ ಬಹುಜನರ ಸ್ವಾತಂತ್ರ, ಸಮಾನತೆ, ಪರಿವರ್ತನೆ ಮತ್ತು ಪ್ರಗತಿಗಳಿಗೆ ಅತ್ಯವಶ್ಯಕ. ಮಹಾತ್ಮ ಗಾಂಧಿ ವರ್ಣಾಶ್ರಮ ಪದ್ಧತಿಯನ್ನು ಸಮರ್ಥಿಸಿ ಜಾತಿಪದ್ಧತಿ ಉಳಿಯಲಿ ಎಂದು ವಾದಿಸಿದರೆ, ಅಂಬೇಡ್ಕರ್ ಜಾತಿವಿನಾಶದ ಮೂಲಕ ಸರ್ವರಿಗೂ ಸಮಬಾಳು-ಸರ್ವರಿಗೂ ಸಮಪಾಲು ಲಭಿಸಬೇಕೆಂದು ಬಲವಾಗಿ ಪ್ರತಿಪಾದಿಸಿದರು. ಇದುವರೆಗೂ ಭಾರತದ ಬಹುಸಂಖ್ಯಾತ ಬಡವರನ್ನು ಮೂಲಭೂತ ಹಕ್ಕುಗಳಿಂದ ವಂಚಿತರನ್ನಾಗಿಸಿ ಅಭಿವೃದ್ಧಿ ಮುಖ್ಯವಾಹಿನಿಯಿಂದ ದೂರ ಸರಿಯಲು ಹಿಂದೂ ಸಾಮ್ರಾಜ್ಯಶಾಹಿ ರೂಪಿಸಿರುವ ವರ್ಣಾಶ್ರಮ ಪದ್ಧತಿ ಬಹುಮುಖ್ಯ ಕಾರಣವಾಗಿದೆ. 

 ಕೃಷಿ ಭಾರತದ ಆರ್ಥಿಕತೆಯ ಬಹುಮುಖ್ಯ ಕ್ಷೇತ್ರವಾಗಿದೆ. ಇಂದಿಗೂ ಕೂಡ ಗ್ರಾಮೀಣ ಭಾರತದಲ್ಲಿ ಶೇ.60ಕ್ಕೂ ಹೆಚ್ಚು ಜನ ತಮ್ಮ ಜೀವನೋಪಾಯ ಮತ್ತು ಅಭಿವೃದ್ಧಿಗಾಗಿ ಕೃಷಿಯನ್ನೇ ಪ್ರಧಾನವಾಗಿ ಅವಲಂಬಿಸಿದ್ದಾರೆ. ಕೃಷಿ ಆಧರಿತ ಹೈನುಗಾರಿಕೆ, ತೋಟಗಾರಿಕೆ, ಮೀನುಗಾರಿಕೆ, ರೇಷ್ಮೆ ಕೃಷಿ, ಗೃಹ ಕೈಗಾರಿಕೆ ಮೊದಲಾದವುಗಳನ್ನು ಶೇ.5ಕ್ಕೂ ಹೆಚ್ಚು ಗ್ರಾಮೀಣ ಜನ ಬದುಕಿಗಾಗಿ ಅವಲಂಬಿಸಿದ್ದಾರೆ. ಕೃಷಿ ಸುಧಾರಣೆಯಿಂದಲೇ ಬಹುತೇಕ ರೈತರ ಬದುಕನ್ನು ಸುಧಾರಿಸಬಹುದೆಂದು ನಮ್ಮನ್ನು ಆಳುವವರಿಗೆ ಚೆನ್ನಾಗಿ ತಿಳಿದಿದೆ. ಆದರೆ ಇವರು ತಮ್ಮ ಲಾಭಕ್ಕಾಗಿ ರಕ್ಷಣೆ ನಿರ್ವಹಣೆ, ಕೈಗಾರಿಕಾಭಿವೃದ್ಧಿ, ನಗರಾಭಿವೃದ್ಧಿ ಮೊದಲಾದ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಕ್ಷೇತ್ರಗಳನ್ನು ಅಮಾನವೀಯವಾಗಿ ನಿರ್ಲಕ್ಷಿಸಿದ್ದಾರೆ. ಅಂದು ಇಂದಿರಾಗಾಂಧಿ, ದೇವರಾಜ ಅರಸು ಮೊದಲಾದ ಮುತ್ಸದ್ದಿಗಳು ಭೂಸುಧಾರಣೆ ಕಾನೂನನ್ನು ಜಾರಿಗೆ ತಂದು ಉಳುವವನೇ ಭೂಮಿಯ ಒಡೆಯ ಎಂದು ಪ್ರತಿಪಾದಿಸಿದರೆ ಇಂದು ನರೇಂದ್ರ ಮೋದಿ, ಯಡಿಯೂರಪ್ಪಮೊದಲಾದ ನಾಯಕರು ಉಳ್ಳವನೇ ಭೂಮಿಯ ಒಡೆಯ ಎಂದು ಪ್ರತಿಪಾದಿಸಿ ಕೃಷಿಕರ ಬದುಕನ್ನು ಅತಂತ್ರಗೊಳಿಸಿದ್ದಾರೆ. ಕೃಷಿಕರನ್ನು ಆಧುನಿಕ ಅರ್ಥವ್ಯವಸ್ಥೆಯ ಗುಲಾಮರನ್ನಾಗಿಸುವ ಮಾರುಕಟ್ಟೆ ಶಕ್ತಿಗಳ ಹುನ್ನಾರಗಳಿಗೆ ನಮ್ಮನ್ನು ಆಳುವವರು ದಾಳಗಳಾಗಿದ್ದಾರೆ. ಪಂಚವಾರ್ಷಿಕ ಯೋಜನೆಗಳಲ್ಲಿ ಕೃಷಿ ಅಭಿವೃದ್ಧಿಗೆ ಹೆಚ್ಚಿನ ಆರ್ಥಿಕ ಅನುದಾನವನ್ನು ಬಿಡುಗಡೆ ಮಾಡದೇ ಕೃಷಿ ಕ್ಷೇತ್ರದ ಅಪೌಷ್ಟಿಕತೆ ಮತ್ತು ಅನಭಿವೃದ್ಧಿಗೆ ಸರ್ಕಾರವನ್ನು ನಡೆಸುವ ಪ್ರಭುಗಳು ನೇರವಾಗಿ ಕಾರಣವಾಗಿದ್ದಾರೆ. ನದಿಗಳ ಜೋಡಣೆ, ನೀರಾವರಿ ಸೌಲಭ್ಯಗಳ ವಿಸ್ತರಣೆ, ಕೃಷಿ ಆಧುನೀಕರಣ, ಸಾವಯವ ಕೃಷಿ ಉತ್ತೇಜನ, ಸುಸ್ಥಿರ ಕೃಷಿ ಅಭಿವೃದ್ಧಿ ಮೊದಲಾದವುಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ವಿಶೇಷ ಆದ್ಯತೆಗಳಾಗಿಲ್ಲ. ಕೃಷಿ ಹೆಚ್ಚು ಲಾಭದಾಯಕವಾಗಿಲ್ಲದ ಕಾರಣ ಹಳ್ಳಿಯ ಮಂದಿ ನಗರ ಪ್ರದೇಶಗಳಿಗೆ ಉದ್ಯೋಗವನ್ನರಸಿ ವಲಸೆ ಹೋಗುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಇಂತಹ ವಲಸೆ ಮಂದಿ ನಗರ ಪ್ರದೇಶಗಳಲ್ಲಿ, ಕೊಳಚೆ ಪ್ರದೇಶಗಳಲ್ಲಿ ವಾಸಿಸಿ ಮೂಲಸೌಕರ್ಯಗಳು ಮತ್ತು ಆರೋಗ್ಯಕರ ಪರಿಸರಗಳಿಂದ ವಂಚಿತರಾಗಿದ್ದಾರೆ.

 ಗ್ರಾಮೀಣಾಭಿವೃದ್ಧಿ ಭಾರತದಲ್ಲಿ ವಿಶೇಷ ಮಹತ್ವ ಹೊಂದಿದೆ. ಸ್ವಾತಂತ್ರಾನಂತರದಲ್ಲಿ ಕನಿಷ್ಟ ಅಗತ್ಯ ಕಾರ್ಯಕ್ರಮದಿಂದ ಹಿಡಿದು ಇಂದಿನ ನರೇಗಾ ಯೋಜನೆ ತನಕ ನೂರಾರು ಗ್ರಾಮೀಣಾಭಿವೃದ್ಧಿ ಯೋಜನೆಗಳನ್ನು ದೇಶಾದ್ಯಂತ ಅನುಷ್ಠಾನಗೊಳಿಸಲಾಗಿದೆ. ಈ ಯೋಜನೆಗಳು ರಾಜಕಾರಣಿಗಳು, ಅಧಿಕಾರಶಾಹಿ, ಮಧ್ಯವರ್ತಿಗಳು ಮೊದಲಾದ ಸ್ಥಾಪಿತ ಹಿತಾಸಕ್ತಿಗಳ ಹುನ್ನಾರಗಳಿಂದ ಪರಿಣಾಮಕಾರಿಯಾಗಿ ಗ್ರಾಮೀಣ ಪ್ರದೇಶಗಳಲ್ಲಿ ಅನುಷ್ಠಾನಗೊಂಡಿಲ್ಲದ ಕಾರಣ ಗ್ರಾಮೀಣಾಭಿವೃದ್ಧಿಗೆ ಬಹುದೊಡ್ಡ ಹಿನ್ನಡೆಯುಂಟಾಗಿದೆ. ಗ್ರಾಮೀಣಾಭಿವೃದ್ಧಿ ಭೂಮಾಲೀಕರು ಮತ್ತು ಶ್ರೀಮಂತರ ಅಭಿವೃದ್ಧಿಗೆ ಅನುಕೂಲಕರವಾಗಿದೆಯೇ ಹೊರತು ಭೂರಹಿತರು, ಕೃಷಿ ಕಾರ್ಮಿಕರು ಮತ್ತು ಅಲಕ್ಷಿತ ಜನವರ್ಗಗಳ ಸಮಗ್ರ ಉದ್ಧಾರಕ್ಕೆ ಪೂರಕವಾಗಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಿ ಫಲಾನುಭವಿಗಳ ಕ್ರಿಯಾಶೀಲ ಸಹಭಾಗಿತ್ವದೊಂದಿಗೆ ಗ್ರಾಮೀಣಾಭಿವೃದ್ಧಿ ಯೋಜನೆಗಳನ್ನು ಅನುಷ್ಟಾನಗೊಳಿಸಿದ್ದರೆ ನಗರ ಪ್ರದೇಶಗಳಿಗೆ ಅನಾಥರಾಗಿ ವಲಸೆ ಬಂದು ಬೀದಿ ಬದಿ ಸಾಯುವಂತಹ ಬಡವರ ಸಂಖ್ಯೆ ನಮ್ಮ ದೇಶದಲ್ಲಿ ಹೆಚ್ಚುತ್ತಿರಲಿಲ್ಲ. ಗ್ರಾಮೀಣಾಭಿವೃದ್ಧಿ ಯೋಜನೆಗಳನ್ನು ಸರ್ಕಾರ ಮನಸೋಇಚ್ಛೆ ರೂಪಿಸಿ ಗ್ರಾಮೀಣ ಬಡವರ ದಾರಿದ್ರ ಮತ್ತು ಅಸಹಾಯಕತೆಗಳನ್ನು ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ಕೃಷಿಕರು ಮತ್ತು ಗ್ರಾಮೀಣ ಜನರು ಸ್ವಾತಂತ್ರ ವಂಚಿತರಾಗಿದ್ದಾರೆಂದು ಹೇಳದೇ ವಿಧಿಯಿಲ್ಲ.

 ಭಾರತವು ಬಹುಸಂಖ್ಯಾತ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಜನವರ್ಗಗಳನ್ನು ಹೊಂದಿದೆ. ಸಾಮಾಜಿಕ ಹಿಂದುಳಿದಿರುವಿಕೆ ಆರ್ಥಿಕ ಹಿಂದುಳಿದಿರುವಿಕೆಗೂ ಪ್ರಧಾನ ಕಾರಣವಾಗಿದೆ. ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು ಮತ್ತು ಇತರ ಹಿಂದುಳಿದ ವರ್ಗಗಳು ಅಭಿವೃದ್ಧಿ ಮುಖ್ಯವಾಹಿನಿಯಿಂದ ದೂರವೇ ಸರಿದಿದ್ದಾರೆ. ನಮ್ಮ ದೇಶದಲ್ಲಿ ‘ಕಮಂಡಲ್’ಗೆ ಸಿಕ್ಕಿರುವ ಮಹತ್ವ ‘ಮಂಡಲ್’ಗೆ ಸಿಕ್ಕಿಲ್ಲದಿರುವುದು ಹಿಂದುಳಿದವರ ದೌರ್ಭಾಗ್ಯವೇ ಆಗಿದೆ. ಅಂಬೇಡ್ಕರ್ ಮತ್ತು ವಿ.ಪಿ.ಸಿಂಗ್‌ರವರು ದಲಿತರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ಜನಸಮುದಾಯಗಳಿಗೆ ಶಿಕ್ಷಣ, ಉದ್ಯೋಗ, ರಾಜಕಾರಣ ಮೊದಲಾದ ಕ್ಷೇತ್ರಗಳಲ್ಲಿ ನೀಡಿದ ಮೀಸಲಾತಿ ಇಂದಿನ ಹಿಂದೂ ಸಾಮ್ರಾಜ್ಯಶಾಹಿ ಮತ್ತು ವಿದೇಶಿ ಬಂಡವಾಳಶಾಹಿ ಅನೈತಿಕ ಮೈತ್ರಿಕೂಟದಿಂದ ಅಪ್ರಸ್ತುತವಾಗಿದೆ. ಖಾಸಗೀಕರಣವು ಅಲಕ್ಷಿತ ಹಾಗೂ ಹಿಂದುಳಿದ ಸಮುದಾಯಗಳ ಸ್ವಾತಂತ್ರ, ಸಮಾನತೆ, ಮೀಸಲಾತಿ ಮತ್ತು ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳಲು ರಹದಾರಿಯಾಗಿದೆ. ಆರ್ಥಿಕ ಉದಾರೀಕರಣ ಸಾಮಾಜಿಕ ಹಾಗೂ ಆರ್ಥಿಕ ಹಿಂದುಳಿದಿರುವಿಕೆಯನ್ನು ಹೆಚ್ಚಿಸಿದೆಯೇ ವಿನಹ ಮುಂದುವರೆದವರು ಮತ್ತು ಹಿಂದುಳಿದವರ ನಡುವಣ ಅಂತರವನ್ನು ತಗ್ಗಿಸಿಲ್ಲವೆಂಬ ಅಮಾರ್ತ್ಯಸೇನ್‌ರವರ ಮಾತುಗಳು ಅರ್ಥಪೂರ್ಣವಾಗಿವೆ.

 ಭಾರತದಲ್ಲಿ ಮೀಸಲಾತಿ ತನ್ನ ಪ್ರಸ್ತುತತೆಯನ್ನು ಕಳೆದುಕೊಂಡಿದೆಯೆಂದರೆ ಅತಿಶಯೋಕ್ತಿಯಾಗಲಾರದು. ಅಂಬೇಡ್ಕರ್ ಪ್ರಾತಿನಿಧಿಕ ಮೀಸಲಾತಿ ಶಿಕ್ಷಣ, ಉದ್ಯೋಗ, ರಾಜಕಾರಣ ಮೊದಲಾದ ಕ್ಷೇತ್ರಗಳಲ್ಲಿ ನ್ಯಾಯೋಚಿತವಾಗಿ ದುರ್ಬಲ ವರ್ಗಗಳಿಗೆ ಲಭಿಸಬೇಕಾದರೆ ಚುನಾವಣೆಗಳಲ್ಲಿ ಪ್ರತ್ಯೇಕ ಮೀಸಲಾತಿ ಅತ್ಯವಶ್ಯಕವೆಂದು ಪ್ರತಿಪಾದಿಸಿದ್ದರು. ಮಹಿಳಾ ಪ್ರತಿನಿಧಿಗಳನ್ನು ಮಹಿಳೆಯರು, ಆದಿವಾಸಿ ಪ್ರತಿನಿಧಿಗಳನ್ನು ಆದಿವಾಸಿಗಳು, ದಲಿತ ಪ್ರತಿನಿಧಿಗಳನ್ನು ದಲಿತರು, ಅಲ್ಪಸಂಖ್ಯಾತ ಪ್ರತಿನಿಧಿಗಳನ್ನು ಅಲ್ಪಸಂಖ್ಯಾತರು, ಹಿಂದುಳಿದ ಪ್ರತಿನಿಧಿಗಳನ್ನು ಹಿಂದುಳಿದವರು ಪ್ರಜ್ಞಾಪೂರ್ವಕವಾಗಿ ಆಯ್ಕೆ ಮಾಡುವ ಸ್ವಾತಂತ್ರ್ಯ ಹೊಂದಿರಬೇಕೆಂದು ಪ್ರತಿಪಾದಿಸಿದರು. ಸ್ವಾತಂತ್ರ ಪೂರ್ವದಲ್ಲಿಯೇ ಅಲಕ್ಷಿತ ಸಮುದಾಯಗಳಿಗೆ ಮೀಸಲಾತಿ ಸೌಲಭ್ಯ ನ್ಯಾಯೋಚಿತವಾಗಿ ಸಿಗಬೇಕೆಂಬ ಸದುದ್ದೇಶದಿಂದ ಅಂಬೇಡ್ಕರ್ ಪ್ರತ್ಯೇಕ ಮತದಾನ ಪದ್ಧತಿಯನ್ನು ಸಮರ್ಥಿಸಿದರು. ಗಾಂಧಿ ಹಿಂದೂಗಳ ಏಕತೆ ದೃಷ್ಟಿಯಿಂದ ಪ್ರತ್ಯೇಕ ಮತದಾನವನ್ನು ವಿರೋಧಿಸಿ ಹಿಂದೂ ಸಾಮ್ರಾಜ್ಯಶಾಹಿಯನ್ನು ಬಲಪಡಿಸಿದರು. 1932ರಲ್ಲಿ ಗಾಂಧಿಯವರ ಒತ್ತಾಯಕ್ಕೆ ಮಣಿದು ಪೂನಾ ಒಪ್ಪಂದಕ್ಕೆ ಅಂಬೇಡ್ಕರ್ ಒಲ್ಲದ ಮನಸ್ಸಿನಿಂದ ಸಹಿ ಹಾಕಿದರು. ‘ಪೂನಾ ಒಪ್ಪಂದವನ್ನು ಗಾಂಧಿಯವರ ಯಶಸ್ವಿ ಕುತಂತ್ರ’ವೆಂದು ಅಂಬೇಡ್ಕರ್ ಮನನೊಂದು ಬಣ್ಣಿಸಿದರು. ಸ್ವತಂತ್ರ ಭಾರತದಲ್ಲಿ ಅಲಕ್ಷಿತ ವರ್ಗಗಳ ಚುನಾಯಿತ ಪ್ರತಿನಿಧಿಗಳು ‘ಮೇಲ್ವರ್ಗದ ಗುಲಾಮರು’ ಎಂಬುದಾಗಿ ಹಲವಾರು ಸಂದರ್ಭಗಳಲ್ಲಿ ಸಾಬೀತಾಗಿದೆ. ಇಂದು ಭಾರತದ ಸಂಸತ್ತಿನಲ್ಲಿ 84 ಸ್ಥಾನಗಳು ಪರಿಶಿಷ್ಟ ಜಾತಿ, 47 ಸ್ಥಾನಗಳು ಪರಿಶಿಷ್ಟ ಪಂಗಡ ಮತ್ತು ಬಹುಸಂಖ್ಯಾತ ಸ್ಥಾನಗಳು ಹಿಂದುಳಿದ ಜಾತಿಗಳಿಗೆ ಮೀಸಲಾಗಿವೆ. ಪ್ರಸ್ತುತ ಹಿಂದುತ್ವವಾದಿಗಳ ನೇತೃತ್ವದ ಎನ್‌ಡಿಎ ಸರ್ಕಾರ ಮಹತ್ವದ ವಲಯಗಳನ್ನು ಖಾಸಗೀಕರಣಗೊಳಿಸಿದಾಗ ಈ ವರ್ಗದ ಪ್ರತಿನಿಧಿಗಳು ಮೌನವಾಗಿ ಸಮ್ಮತಿ ನೀಡಿ ತಾವು ವ್ಯವಸ್ಥೆಯ ಪರವಾಗಿದ್ದೇವೆಂದು ಸಾಬೀತುಪಡಿಸಿದರು. ಈ ಹಿನ್ನೆಲೆಯಲ್ಲಿ ಹಿಂದುಳಿದವರಿಗೆ ನಿಜವಾಗಿಯೂ 47ರ ಸ್ವಾತಂತ್ರ ಲಭಿಸಿದೆಯೇ? ಎಂಬ ಗಂಭೀರ ಪ್ರಶ್ನೆ ಕಾಡುತ್ತಿದೆ.

 ಇದೇ ವರ್ಷ ಅಮೆರಿಕಾದಲ್ಲಿ ಮೇ 25ರಂದು ಜಾರ್ಜ್ ಫ್ಲಾಯ್ಡಾ ಎಂಬ ಕಪ್ಪುಮನುಷ್ಯನನ್ನು ಪೊಲೀಸ್ ಅಧಿಕಾರಿಯೊಬ್ಬರು ಅವಿವೇಕದಿಂದ ಕೊಂದ ಘಟನೆ ಇಡೀ ವಿಶ್ವದ ಖಂಡನೆಗೆ ಗುರಿಯಾಗಿದೆ. ವರ್ಣದ್ವೇಷ ಕೇಂದ್ರಿತ ಹಿಂಸೆ ಮತ್ತು ಶೋಷಣಾ ಪ್ರವೃತ್ತಿಗಳನ್ನು ವಿಶ್ವದೆಲ್ಲೆಡೆ ಒಕ್ಕೊರಲಿನಿಂದ ಖಂಡಿಸುವ ಜಾಗತಿಕ ಮಾನವ ಹಕ್ಕು ಚಳುವಳಿಗೆ ಈ ಘಟನೆ ನಾಂದಿ ಹಾಡಿದೆ. ಅಮೇರಿಕಾ, ಯೂರೋಪ್, ಆಸ್ಟ್ರೇಲಿಯಾ, ಏಷ್ಯಾ, ಆಫ್ರಿಕಾ, ಲ್ಯಾಟಿನ್ ಅಮೇರಿಕಾ, ಮಧ್ಯಪ್ರಾಚ್ಯ ಮೊದಲಾದೆಡೆ ‘ಕಪ್ಪುಜನರ ಜೀವಕ್ಕೆ ಬೆಲೆಯಿದೆ’ (ಬಿಎಲ್‌ಎಮ್) ಎಂಬ ಚಳುವಳಿ ಆರಂಭಗೊಂಡಿದೆ. ಈ ಚಳುವಳಿಯಲ್ಲಿ ಕಪ್ಪುಜನರಿಗಿಂತಲೂ ಬಿಳಿಯರೇ ತುಂಬು ಹೃದಯದಿಂದ ಮಾನವೀಯ ನೆಲೆಗಟ್ಟಿನಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವುದು ಸಮಾನತೆಯ ಪ್ರತಿಪಾದಕರಿಗೆ ಅತ್ಯಂತ ಹರ್ಷದಾಯಕ ಸಂಗತಿಯಾಗಿದೆ. ಇಡೀ ಜಗತ್ತಿನಲ್ಲಿ ಆರ್ಥಿಕ ಸ್ವಾತಂತ್ರ್ಯಕ್ಕಾಗಿ ‘ಆಪರೇಷನ್ ವಾಲ್‌ಸ್ಟ್ರೀಟ್’ ಚಳುವಳಿ ಮತ್ತು ಸಾಮಾಜಿಕ ಸಮಾನತೆಗಾಗಿ ‘ಕಪ್ಪುಜನರ ಜೀವಕ್ಕೆ ಬೆಲೆಯಿದೆ’ ಚಳುವಳಿ ಜರುಗುತ್ತಿರುವುದು ನೂತನ ಸಹಸ್ರಮಾನದಲ್ಲಿ ಪ್ರಬುದ್ಧ ವಿಶ್ವ ರೂಪುಗೊಳ್ಳುವುದರ ಆಶಾಕಿರಣಗಳಾಗಿವೆ. ಅಂತೆಯೇ ಭಾರತದಲ್ಲಿಯೂ ಮೂಲನಿವಾಸಿಗಳ ಜೀವಕ್ಕೆ ಬೆಲೆಯಿದೆ ಮತ್ತು ಮೂಲನಿವಾಸಿಗಳಿಗೆ ರಾಜಕೀಯ ಸ್ವಾತಂತ್ರ್ಯಕ್ಕಿಂತ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ ಮತ್ತು ಪ್ರಜಾಸತ್ತೆಗಳು ಅತ್ಯಮೂಲ್ಯವೆಂಬ ಪ್ರಜಾಸತ್ತಾತ್ಮಕ ಅರಿವು ಮತ್ತು ಹೋರಾಟಗಳು ಅನಿವಾರ್ಯವಾಗಿದೆ. ಭಾರತದ ಎಲ್ಲ ಪ್ರಗತಿಪರ ಮನಸ್ಸುಗಳು ಹಾಗೂ ಸಂಘಟನೆಗಳು ನೂತನ ಸಹಸ್ರಮಾನದಲ್ಲಿ ಪ್ರಜಾಸತ್ತೆ, ಸಂವಿಧಾನ, ಬಹುತ್ವ ಮತ್ತು ಬಹುಜನರನ್ನು ಉಳಿಸುವ ನಿಟ್ಟಿನಲ್ಲಿ ಇಂತಹ ಅಹಿಂಸಾತ್ಮಕ ಚಳುವಳಿಯಲ್ಲಿ ಪಾಲ್ಗೊಂಡು ಮೂಲಭೂತವಾದಿಗಳ ಸರ್ಕಾರವನ್ನು ಮಾನವತಾವಾದಿಗಳ ಸರ್ಕಾರವನ್ನಾಗಿ ಪರಿವರ್ತಿಸುವ ಬಹುದೊಡ್ಡ ಜವಾಬ್ದಾರಿ ಹೊಂದಿದ್ದಾರೆ.

Join Whatsapp