ಬೆಂಗಳೂರು: ನನ್ನ ಹೋರಾಟ ಅಸಮಾನತೆ, ದೌರ್ಜನ್ಯ, ಭೇದಭಾವಗಳ ವಿರುದ್ಧವೇ ಹೊರತು ಯಾವುದೇ ಜಾತಿ, ಜನಾಂಗದ ವಿರುದ್ಧವಲ್ಲ. ಆದ್ದರಿಂದ ನನ್ನ ಹೇಳಿಕೆಯಿಂದ ಹಿಂದೆ ಸರಿಯುವುದಿಲ್ಲ’ ಎಂದು ನಟ ಚೇತನ್ ಸ್ಪಷ್ಟಪಡಿಸಿದ್ದಾರೆ.
ಬ್ರಾಹ್ಮಣ್ಯದ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದಾರೆ ಎಂಬ ಆರೋಪದಲ್ಲಿ ವಿಪ್ರ ಯುವ ವೇದಿಕೆಯವರು ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣೆಗೆ ಬುಧವಾರ ವಿಚಾರಣೆಗೆ ಹಾಜರಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇದೆ. ನಾನು ಜಾತಿಯ ವಿರುದ್ಧ ಹೋರಾಟ ನಡೆಸುತ್ತಿಲ್ಲ. ಹುಟ್ಟಿದ ತಕ್ಷಣವೇ ಶ್ರೇಷ್ಠ ಹಾಗೂ ಕನಿಷ್ಠ ಎನ್ನುವ ಮನಸ್ಥಿತಿ ಹಾಗೂ ವ್ಯವಸ್ಥೆಯ ವಿರುದ್ಧ ಹೋರಾಟ ಮುಂದುವರಿಯಲಿದೆ. ಪ್ರಕರಣದ ತನಿಖೆಗೆ ಸಹಕರಿಸುತ್ತೇನೆ’ ಎಂದೂ ಹೇಳಿದರು.
ಬ್ರಾಹ್ಮಣ್ಯ – ಜನನದ ಆಧಾರದ ಮೇಲೆ ಮನುಷ್ಯರನ್ನು ಶ್ರೇಣೀಕರಿಸಿದೆ. ದಕ್ಷಿಣ ಏಷ್ಯಾದ ಎಲ್ಲಾ ಜಾತಿ ಮತ್ತು ಅನೇಕ ಧರ್ಮಗಳ ನಡುವೆ ವ್ಯವಸ್ಥಿತವಾಗಿ ಮತ್ತು ಸೈದ್ಧಾಂತಿಕ ಮಟ್ಟದಲ್ಲಿ ಬ್ರಾಹ್ಮಣ್ಯ ಇನ್ನೂ ಅಸ್ತಿತ್ವದಲ್ಲಿದೆ.
ಅಂತಹ ರಚನಾತ್ಮಕ ಅಸಮಾನತೆ ನಿವಾರಣೆಗೆ ಬುದ್ಧ, ಬಸವ, ಶರಣರು, ಅಂಬೇಡ್ಕರ್, ಪೆರಿಯಾರ್, ಬಹುಜನ ಹೋರಾಟಗಾರರ ತರ್ಕಬದ್ಧ ಸಮತಾವಾದವೇ ಪರಿಹಾರ ಎಂದು ಚೇತನ್ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು.