ಇಂಫಾಲ : ಬಿಜೆಪಿ ಸಂಸದರೊಬ್ಬರ ಕುರಿತು ಫೇಸ್ ಬುಕ್ ಪೋಸ್ಟ್ ಹಾಕಿರುವ ಮಣಿಪುರದ ಸಾಮಾಜಿಕ ಕಾರ್ಯಕರ್ತ ಎರೆಂಡ್ರೊ ಲೀಚೊಂಬಂ ವಿರುದ್ಧ ಪೊಲೀಸರು ದೇಶದ್ರೋಹದ ಪ್ರಕರಣ ದಾಖಲಿಸಿದ ಘಟನೆ ನಡೆದಿದೆ. ನೂತನ ರಾಜ್ಯಸಭಾ ಸದಸ್ಯ ಸನಾಜಾವೊಬಾ ಲೀಶೆಂಬಾ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆಗಿರುವ ಫೋಟೊ ಒಂದನ್ನು ಎರೆಂಡ್ರೊ ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದರು. ಬಿಜೆಪಿ ನಾಯಕ ಸನಾಜಾವೊಬಾ ಗೃಹ ಸಚಿವ ಅಮಿತ್ ಶಾ ಗೆ ಕೈ ಮುಗಿದು ತಲೆಬಾಗಿಸಿರುವ ಫೋಟೊ ಅದಾಗಿದೆ. ಫೋಟೊ ಜೊತೆ “ಮಿನಯ್ ಮಚಾ” ಅಂದರೆ “ಸೇವಕನ ಮಗ” ಎಂಬರ್ಥದ ಪದಗಳ ಶೀರ್ಷಿಕೆ ನೀಡಿದ್ದರು.
36 ವರ್ಷದ ಎರೆಂಡ್ರೊ ಅವರ ಇಂಫಾಲದ ಮನೆಗೆ ಅವರನ್ನು ಬಂಧಿಸಲೆಂದು ಪೊಲೀಸರು ತೆರಳಿದ್ದರು. ಆದರೆ, ಅವರು ಅಲ್ಲಿ ಪೊಲೀಸರಿಗೆ ಲಭ್ಯವಾಗಲಿಲ್ಲ. “ನಾನ ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯ ವ್ಯಕ್ತಪಡಿಸಿದುದಕ್ಕಾಗಿ, ನನ್ನ ವಿರುದ್ಧ ಸರ್ಕಾರ ದೇಶದ್ರೋಹದ ಪ್ರಕರಣ ದಾಖಲಿಸಿದೆ. ಆದರೆ ನಾನು ಬರೆಯುವುದನ್ನು ನಿಲ್ಲಿಸುವುದಿಲ್ಲ. ನೀವು ನಿಮ್ಮ ಟೀಕಾಕಾರರನ್ನು ತಡೆಯಲಾರಿರಿ. ನಮ್ಮಲ್ಲಿ ಇನ್ನೂ ಕೆಲವರು ನಮ್ಮ ತಾಯ್ನಾಡನ್ನು ಪ್ರೀತಿಸುತ್ತಾರೆ. ನೀವು ನನ್ನ ದೇಹವನ್ನು ಬಂಧಿಸಬಹುದು, ಆದರೆ ನನ್ನ ಮನಸ್ಸನ್ನಲ್ಲ’’ ಎಂದು ಎರೆಂಡ್ರೊ ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಎರೆಂಡ್ರೊ ಮಣಿಪುರ ಮೂಲದ ರಾಜಕೀಯ ಪಕ್ಷ ಪೀಪಲ್ಸ್ ರೀಸರ್ಜೆನ್ಸ್ ಆ್ಯಂಡ್ ಅಲೈನ್ಸ್ ನ ಸಂಚಾಲಕರಾಗಿದ್ದಾರೆ. ಮಣಿಪುರದಿಂದ ಸಶಸ್ತ್ರ ದಳಗಳ ವಿಶೇಷಾಧಿಕಾರ ಕಾಯ್ದೆಯನ್ನು ತೆರವುಗೊಳಿಸುವಂತೆ ಒತ್ತಾಯಿಸಿ ತಮ್ಮ 16 ವರ್ಷಗಳ ಉಪವಾಸ ಸತ್ಯಾಗ್ರಹವನ್ನು 2016ರಲ್ಲಿ ಕೊನೆಗೊಳಿಸಿದ ಹೋರಾಟಗಾರ್ತಿ ಇರೋಮ್ ಶರ್ಮಿಳಾ ಜೊತೆ ಪಕ್ಷದ ಸಹ ಸಂಸ್ಥಾಪಕರಾಗಿ ಎರೆಂಡ್ರೊ ಕಾರ್ಯ ನಿರ್ವಹಿಸಿದ್ದಾರೆ.
ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಆರ್ಥಿಕ ನೀತಿ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಎರೆಂಡ್ರೊ, ಈ ಹಿಂದೆ 2018ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ಒಂದನ್ನು ಪೋಸ್ಟ್ ಮಾಡಿದ್ದಕ್ಕೆ ಬಂಧಿತರಾಗಿದ್ದರು. ಮಣಿಪುರದಲ್ಲಿ ಅವರು ಬಿಜೆಪಿ ವಿರುದ್ಧ ಪ್ರಬಲ ಟೀಕಾಕಾರರಾಗಿದ್ದಾರೆ.