ಲಖನೌ : ಅಯೋಧ್ಯೆಯಲ್ಲಿ ಮುಂದಿನ ವಾರ ನಡೆಯಲಿರುವ ರಾಮ ಮಂದಿರದ ಭೂಮಿ ಪೂಜೆಯ ಕುರಿತ ಸುದ್ದಿ ಪ್ರಸಾರಕ್ಕೆ ಸಂಬಂಧಿಸಿ ಮಾಧ್ಯಮಗಳಿಗೆ ಸ್ಥಳೀಯ ಜಿಲ್ಲಾಡಳಿತ ಕೆಲವು ನಿರ್ದೇಶನಗಳನ್ನು ನೀಡಿದೆ. ಮಾಧ್ಯಮ ಚರ್ಚೆಗಳಲ್ಲಿ ಯಾವುದೇ ವಿವಾದಿತ ವ್ಯಕ್ತಿಯನ್ನು ಕೂರಿಸಬಾರದು, ಚರ್ಚೆಯಲ್ಲಿ ಭಾಗವಹಿಸುವವರು ಯಾವುದೇ ಸಮುದಾಯ, ಪಂಥ, ನಿರ್ಧಿಷ್ಟ ವ್ಯಕ್ತಿಗಳ ವಿರುದ್ಧ ನಿಂದನಾತ್ಮಕ ಹೇಳಿಕೆಗಳನ್ನು ಕೊಡದಂತೆ ದೃಢೀಕರಿಸಿಕೊಳ್ಳಬೇಕು ಮುಂತಾದ ಷರತ್ತುಗಳನ್ನು ಈ ನಿರ್ದೇಶನದಲ್ಲಿ ವಿಧಿಸಲಾಗಿದೆ.
ಇಂತಹ ಚರ್ಚೆಗಳಿಂದಾಗಿ ಯಾವುದೇ ರೀತಿಯ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವಂಹ ಸ್ಥಿತಿ ನಿರ್ಮಾಣವಾದರೆ, ಅಂತಹ ಚರ್ಚೆ ಏರ್ಪಡಿಸಿದ ಚಾನೆಲ್ ನ ಮುಖ್ಯಸ್ಥರನ್ನು ಹೊಣೆಯಾಗಿಸಲಾಗುವುದು ಎಂದು ಜಿಲ್ಲಾಡಳಿತದ ನಿರ್ದೇಶನದಲ್ಲಿ ಸೂಚಿಸಲಾಗಿದೆ.
ಈ ಕುರಿತ ಮಾರ್ಗಸೂಚಿಯ ಪತ್ರವನ್ನು ಸುದ್ದಿ ಚಾನೆಲ್ ಗಳಿಗೆ ಕಳುಹಿಸಿ ಕೊಡಲಾಗಿದ್ದು, ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅದರಲ್ಲಿ ಸೂಚಿಸಲಾಗಿದೆ.