ಬಿಜೆಪಿ – ಫೇಸ್ಬುಕ್ ನಡುವಿನ ಅನೈತಿಕ ನಂಟಿನ ನೇರ ಸಾಕ್ಷ್ಯ | 2019ರ ಚುನಾವಣೆಯ ವೇಳೆ ತನ್ನ ವಿರೋಧಿ ಪೇಜುಗಳನ್ನು ತಡೆಯುವಂತೆ ಕೋರಿದ್ದ ಬಿಜೆಪಿ

Prasthutha|

‘ಭೀಮ್ ಆರ್ಮಿ’ ಯ ಪೇಜ್ ಸೇರಿದಂತೆ 44 ಬಿಜೆಪಿ ವಿರೋಧಿ ಪೇಜುಗಳನ್ನು ತಡೆ ಹಿಡಿಯುವಂತೆ ಕೋರಲಾಗಿತ್ತು !

- Advertisement -

►►ಬಿಜೆಪಿಯ ಕೋರಿಕೆಯ ಮೇರೆಗೆ ಕುಖ್ಯಾತ ಪೋಸ್ಟ್ ಕಾರ್ಡನ್ನು ಮರುಸ್ಥಾಪಿಸಿದ್ದ ಫೇಸ್ಬುಕ್ !!

ನವದೆಹಲಿ : ಭಾರತದ ಫೇಸ್ ಬುಕ್ ಮತ್ತು ಆಡಳಿತಾರೂಢ ಬಿಜೆಪಿ ನಡುವಿನ ಅನೈತಿಕ ನಂಟಿನ ಕುರಿತು ಇನ್ನಷ್ಟು ಆಘಾತಕಾರಿ ಮಾಹಿತಿಗಳು ದಿನದಿಂದ ದಿನಕ್ಕೆ ಹೊರಬೀಳುತ್ತಿವೆ. 2019ರ ಲೋಕಸಭಾ ಚುನಾವಣೆಯ ವೇಳೆ ಬಿಜೆಪಿ, ಪ್ರತಿಪಕ್ಷ ಮತ್ತು ತಮ್ಮ ಪ್ರಮುಖ ಟೀಕಾಕಾರ ಗುಂಪುಗಳ 44 ಫೇಜ್ ಗಳನ್ನು ಫೇಸ್ ಬುಕ್ ನಿಂದ ತಡೆ ಹಿಡಿಯುವಂತೆ ಕೋರಿತ್ತು ಎಂದು ಇದೀಗ ಬಹಿರಂಗವಾಗಿದೆ. ಈ ಪೇಜುಗಳ ಪೋಸ್ಟ್ ಗಳು ‘ಸತ್ಯಾಂಶ’ಗಳನ್ನೊಳಗೊಂಡಿಲ್ಲ ಮತ್ತು ತನ್ನ ನಿರೀಕ್ಷಿತ ಗುಣಮಟ್ಟವನ್ನು ಉಲ್ಲಂಘಿಸಿದೆ ಎಂಬ ಕಾರಣ ನೀಡಿ ಪೇಜ್ ಗಳನ್ನು ತಡೆ ಹಿಡಿಯುವಂತೆ ಕೋರಲಾಗಿತ್ತು. ಇವುಗಳಲ್ಲಿ 14 ಪೇಜ್ ಗಳು ಈಗ ಫೇಸ್ ಬುಕ್ ನಲ್ಲಿ ಲಭ್ಯವಿಲ್ಲ ಎಂದು ‘ದ ಇಂಡಿಯನ್ ಎಕ್ಸ್ ಪ್ರೆಸ್’ ಆನ್ ಲೈನ್ ಆವೃತ್ತಿ ವರದಿ ಮಾಡಿದೆ.

- Advertisement -

ಬಿಜೆಪಿ ತಡೆ ಹಿಡಿಯುವಂತೆ ಕೋರಿದ್ದ 44 ಪೇಜ್ ಗಳಲ್ಲಿ ‘ಭೀಮ್ ಆರ್ಮಿ’ಯ ಅಧಿಕೃತ ಪೇಜ್, ‘ವೀ ಹೇಟ್ ಬಿಜೆಪಿ’, ಕಾಂಗ್ರೆಸ್ ಬೆಂಬಲಿತ ಅನಧಿಕೃತ ಪೇಜ್ ಗಳು ಮತ್ತು ಆಲ್ಟ್ ನ್ಯೂಸ್ ನ ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಶೇರ್ ಮಾಡುತ್ತಿದ್ದ ‘ದ ಟ್ರುಥ್ ಆಫ್ ಗುಜರಾತ್’ ಮುಂತಾದ ಪೇಜ್ ಗಳು ಒಳಗೊಂಡಿವೆ. ಇದರೊಂದಿಗೆ ಪತ್ರಕರ್ತರುಗಳಾದ ರವೀಶ್ ಕುಮಾರ್ ಮತ್ತು ವಿನೋದ್ ದುವಾ ಅವರ ಬೆಂಬಲಿಗರ ಪೇಜ್ ಗಳನ್ನೂ ತಡೆ ಹಿಡಿಯುವಂತೆ ಕೋರಲಾಗಿತ್ತು.

ಕಳೆದ ನವೆಂಬರ್ ನಲ್ಲಿ 17 ಡಿಲೀಟ್ ಮಾಡಲಾದ ಪೇಜ್ ಗಳನ್ನು ಮರುಸೇರ್ಪಡೆ ಮತ್ತು ಎರಡು ಬಲಪಂಥೀಯ ವಾದಗಳನ್ನು ಹರಡುತ್ತಿದ್ದ ನ್ಯೂಸ್ ವೆಬ್ ಸೈಟ್ ಗಳಾದ ‘ದ ಚೌಪಾಲ್’ ಮತ್ತು ‘ಒಪ್ ಇಂಡಿಯಾ’ಕ್ಕೆ ಹಣ ಗಳಿಸಲು (ಇನ್ಸ್ ಟಾ ಆರ್ಟಿಕಲ್ ಆದಾಯ) ನೆರವಾಗುವಂತೆ ಬಿಜೆಪಿ ಫೇಸ್ ಬುಕ್ ಗೆ ಸೂಚಿಸಿತ್ತು. ಈ ವೆಬ್ ಸೈಟ್ ಗಳ ಪೇಜ್ ಗಳಿಗೆ, ಅವುಗಳ ವರದಿಗಳಿಗೆ ಆದಾಯ ಬರುವಂತೆ ಮಾಡಲು ಅದು ಕೋರಿಕೊಂಡಿತ್ತು. ಎಲ್ಲ 17 ಪೇಜುಗಳು ಫೇಸ್ ಬುಕ್ ನಲ್ಲಿ ಮತ್ತೆ ಲಭ್ಯವಿದೆ. ಈ ಪೇಜ್ ಗಳನ್ನು ತಪ್ಪಾಗಿ ತೆಗೆಯಲಾಗಿತ್ತು ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯಗೆ ಫೇಸ್ ಬುಕ್ ವಿವರಣೆ ನೀಡಿತ್ತು ಎಂದು ವರದಿ ತಿಳಿಸಿದೆ.

ಕಳೆದ ವರ್ಷದ ಮಾರ್ಚ್ ನಲ್ಲಿ ತಮ್ಮ ಫೇಸ್ ಬುಕ್ ಪೇಜ್ ಮರುಸೇರ್ಪಡೆ ಬಳಿಕ, ತಮ್ಮ ನ್ಯೂಸ್ ವೆಬ್ ಸೈಟ್ ಗೆ ಆದಾಯ ಬರುವುದಕ್ಕೆ ಅವಕಾಶ ನೀಡಿರಲಿಲ್ಲ ಎಂದು ‘ದ ಚೌಪಾಲ್’ ಸಂಸ್ಥಾಪಕ ವಿಕಾಸ್ ಪಾಂಡೆ ಹೇಳಿದ್ದಾರೆ. ಬಿಜೆಪಿ ಕೋರಿಕೆ ಮೇರೆಗೆ ಮರು ಸೇರ್ಪಡೆಯಾದ ಎಲ್ಲ 17 ಪೇಜ್ ಗಳು ಪ್ರಸ್ತುತ ಬಹುತೇಕ ‘ಪೋಸ್ಟ್ ಕಾರ್ಡ್’ ಸುದ್ದಿಗಳನ್ನು ಶೇರ್ ಮಾಡುತ್ತವೆ. ‘ಪೋಸ್ಟ್ ಕಾರ್ಡ್’ ಕನ್ನಡದಲ್ಲಿ ಬಿಜೆಪಿ ಪರ ಸುಳ್ಳು ಸುದ್ದಿಗಳನ್ನು ಹಾಗೂ ಮತಾಂಧತೆಯನ್ನು ಹರಡುವ ಪೇಜ್ ಎಂಬ ಕುಖ್ಯಾತಿ ಪಡೆದಿದೆ. ಈ ಪೇಜ್ ಗಳು ನೇರವಾಗಿ ರಾಜಕೀಯ ಪಕ್ಷದೊಂದಿಗಿನ ತಮ್ಮ ನಂಟನ್ನು ಪ್ರಕಟಿಸುವುದಿಲ್ಲವಾದರೂ, ಅವುಗಳು ಬಹುತೇಕ ಬಿಜೆಪಿ ಪರವಾಗಿರುತ್ತವೆ.

ಮರುಸ್ಥಾಪಿಸಲ್ಪಟ್ಟ 17 ಪೇಜ್ ಗಳಲ್ಲಿ ‘ಪೋಸ್ಟ್ ಕಾರ್ಡ್’ ಸಂಸ್ಥಾಪಕ ಕರ್ನಾಟಕದ ಮಹೇಶ್ ವಿ. ಹೆಗಡೆಗೆ ಸಂಬಂಧಿಸಿದ ಪೇಜ್ ಕೂಡ ಇದೆ. ಮಹೇಶ್ ಹೆಗಡೆ 2018ರ ಮಾರ್ಚ್ ನಲ್ಲಿ ಕೋಮು ದ್ವೇಷ ಹರಡಿದ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡುವ ಸುಳ್ಳು ಸುದ್ದಿಗಳನ್ನು ಹರಡುವ ಆರೋಪದಲ್ಲಿ ಬೆಂಗಳೂರಿನಲ್ಲಿ ಬಂಧಿತನಾಗಿದ್ದ.



Join Whatsapp