ಬಿಜೆಪಿ ಕಾರ್ಯಕರ್ತರಿಂದ ಪಾಕ್ ಪರ ಘೋಷಣೆ: ಎಫ್.ಐ.ಆರ್ ದಾಖಲಿಸಲು ನಿರಾಕರಿಸಿದ ಬೆಳ್ತಂಗಡಿ ಪೊಲೀಸರು

Prasthutha|

ತಾರತಮ್ಯ ನೀತಿ ವಿರುದ್ಧ ಸಾರ್ವಜನಿಕರಿಂದ ಆಕ್ರೋಶ

- Advertisement -

ಬೆಳ್ತಂಗಡಿ: ಉಜಿರೆಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಕಾರ್ಯಕರ್ತರ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ದೂರು ನೀಡಲಾಗಿದೆ. ಆದರೆ ಎಫ್.ಐ.ಆರ್ ದಾಖಲಿಸಲು ಪೊಲೀಸರು ನಿರಾಕರಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹಮ್ಮದ್ ಫಿರೋಝ್ ಎಂಬವರು ದೂರು ನೀಡಿದರೂ ಪೊಲೀಸರು ಎಫ್.ಐ.ಆರ್ ದಾಖಲಿಸಲು ನಿರಾಕರಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

- Advertisement -

“ಬಿಜೆಪಿ ಪಕ್ಷದ ಧ್ವಜ ಮತ್ತು ಭಗವತ್ ಧ್ವಜ ಹಿಡಿದ ವ್ಯಕ್ತಿಗಳು ‘ಪಾಕಿಸ್ತಾನ್ ಝಿಂದಾಬಾದ್’ ಘೋಷಣೆ ಕೂಗಿದ್ದು, ಅವರ ವಿರುದ್ಧ ಸೆಕ್ಷನ್ 124ಎ ಅಡಿಯಲ್ಲಿ ದೇಶದ್ರೋಹ ಪ್ರಕರಣ ಮತ್ತು ಸೆಕ್ಷನ್ 505ರಡಿ ಎರಡು ಧರ್ಮಗಳ ನಡುವೆ ದ್ವೇಷ ಹರಡಿದ ಪ್ರಕರಣವನ್ನು ದಾಖಲಿಸಬೇಕು” ಎಂದು ದೂರಿನಲ್ಲಿ ಹೇಳಲಾಗಿದೆ.

ದೂರಿನೊಂದಿಗೆ ಸಂಬಂಧಿಸಿದ ವೀಡಿಯೊ ಕ್ಲಿಪ್ ಗಳನ್ನೂ ಪೊಲೀಸರಿಗೆ ನೀಡಲಾಗಿದೆ.

ಈ ಹಿಂದೆ ಎಸ್.ಡಿ.ಪಿ.ಐ ಸಂಭ್ರಮಾಚರಣೆಯ ವೇಳೆ ‘ಪಾಕಿಸ್ತಾನ ಝಿಂದಾಬಾದ್’ ಹೇಳಲಾಗಿದೆ ಎಂಬ ಆರೋಪ ಹೊರಿಸಿ ಮಾಧ್ಯಮವೊಂದು ಸುದ್ದಿ ಪ್ರಕಟಿಸಿದಾಗ ಪೊಲೀಸರು ದೇಶದ್ರೋಹ ಪ್ರಕರಣ ದಾಖಲಿಸಿದ್ದರು. ಆದರೆ ಬಿಜೆಪಿ ಕಾರ್ಯಕರ್ತರು ಪಾಕ್ ಪರ ಘೋಷಣೆ ಕೂಗಿದ ವೀಡಿಯೊಗಳು ವೈರಲ್ ಆಗಿದ್ದರೂ ಯಾವುದೇ ಪ್ರಕರಣ ದಾಖಲಾಗದಿರುವುದು ಅಲ್ಪಸಂಖ್ಯಾತರಲ್ಲಿ ಪೊಲೀಸರ ತಾರತಮ್ಯದ ಕುರಿತು ಆಕ್ರೋಶವುಂಟಾಗಲು ಕಾರಣವಾಗಿದೆ.



Join Whatsapp